ರಾಯರ ಮಾತುಗಳನ್ನು ಕೇಳಿದ ಅಮೃತಾಳಿಗೆ ನನಗಾಗಿ ಯಾರೂ ಇಲ್ಲ ಎಂದುಕೊಂಡು ಈ ಊರಿಗೆ ಬಂದೆ, ಅಪ್ಪಾಜಿ ಸಿಕ್ಕಿದರು. ನನ್ನ ಮೇಲೆ ಇಂತಹ ಒಂದು ಜವಾಬ್ದಾರಿ ಹೊರಸುತ್ತಿದ್ದಾರೆ. ಅದನ್ನು ನಾನು ನಿಭಾಯಿಸುತ್ತೀನಾ? ಅಪ್ಪಾಜಿಯವರಿಗೆ ಬದಲಾಯಿಸಲು ಸಾಧ್ಯವಾಗಲಿಲ್ಲ, ಇನ್ನೂ ನಾನು ತಾನೇ ಹೇಗೆ ಮಾಡಬಹುದು. ಆತನ ಒರಟು ತನಕ್ಕೆ ಕಾರಣವಾದರೂ ಏನಿರಬಹುದು? ತಿಳಿಯುವ ಬಗೆ ಹೇಗೆ? ಅಪ್ಪಾಜಿ ಹೇಳಿದ ಮಟ್ಟಿಗೆ ನೋಡುವುದಾದರೆ ಅವನ ಸ್ವಭಾವಕ್ಕೆ ಕಾರಣ ಅವನಿಗಲ್ಲದೇ ಬೇರಾರಿಗೂ ತಿಳಿದಿಲ್ಲ. ಹಾಗಾದರೆ, ತಿಳಿಯುವ ಬಗೆ ಹೇಗೆ? ಈ ರೀತಿಯ ಪ್ರಶ್ನೆಗಳು ಮನಸ್ಸನ್ನು ಆವರಿಸುತ್ತದೆ. ಒಂದಕ್ಕೂ ಸಮಂಜಸವಾದ ಉತ್ತರ ಹೊಳೆಯುವುದಿಲ್ಲ. ಕೆಲ ಹೊತ್ತಾದ ಮೇಲೆ ತುಸು ಯೋಚಿಸಿ ನಿಧಾನವಾಗಿ ಒಂದೊಂದೆ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನ ಪಡುತ್ತಾಳೆ.
ಮೊದಲನೆಯದಾಗಿ, ಈ ಕಾರಣವನ್ನು ತಿಳಿಯುವ ಬಗೆ ಹೇಗೆ? ಅವನನ್ನು ಬಿಟ್ಟರೆ ಯಾರೂ ಈ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಿಲ್ಲ. ಇನ್ನು ಆತನ ತಂದೆ ತಾಯಿಯನ್ನು ಮಾತಾಡಿಸುವುದು ಸರಿ ಕಾಣುವುದಿಲ್ಲ. ಹಾಗಾದರೆ, ಅವನಿಂದಲೇ ಈ ಉತ್ತರ ಹೊರತೆಗೆಯುವುದು ಹೇಗೆ? ಮತ್ತೊಮ್ಮೆ ಈ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತದ್ದೆ. ಶಾಂತವಾಗಿ ಯೋಚಿಸಿ ಅವನ ಸ್ನೇಹ ಸಂಪಾದಿಸಿ ನಂತರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಬಹುದು ಎಂದು ಭಾವಿಸುತ್ತಾಳೆ. ಸ್ನೇಹ ಸಂಪಾದನೆ ಹೇಗೆ? ಅವನಿರುವ ಈ ಪರಿಸ್ಥಿತಿಯಲ್ಲಿ ಹೇಗೆ ಸಾಧ್ಯವಾದಿತು? ಈ ಪ್ರಶ್ನೆಗೆ ಉತ್ತರವಾಗಿ ಹೊಳೆದದ್ದು ಅವನ ಒರಟು ಸ್ವಭಾವಕ್ಕೆ ಕಾರಣ. ಮತ್ತದೇ ಪ್ರಶ್ನೆಗೆ ಬಂದು ನಿಲ್ಲುತ್ತಾಳೆ.
ಮತ್ತದೇ ಪ್ರಶ್ನೆ... ಹೇಗಪ್ಪ ಉತ್ತರ ಹುಡುಕೋದು. ತಲೆಗೆ ಬಾರಿ ಕೆಲಸಕೊಟ್ಟಂತ್ತಾಗುತ್ತದೆ. ಒಂದೆಡೆ ಕೂರಲಾಗುವುದಿಲ್ಲ. ಎದ್ದು ಹೊರಗೆ ಅರ್ಧ ಗಂಟೆ ಸುತ್ತಾಡಿ ಬರುತ್ತಾಳೆ. ಹೊರಗೆ ಬೀಸುತ್ತಿದ್ದ ತಂಪಾದ ಗಾಳಿ ದೇಹಕ್ಕೆ ಹಿತವೆನಿಸಿತು. ಆದರೆ, ಉತ್ತರ ಸಿಗದ ಪ್ರಶ್ನೆಗಳಿದ್ದಾಗ ಮನಸಾರೆ ಪ್ರಕೃತಿಯನ್ನು ಅನುಭವಿಸಲು ಹೇಗೆ ಸಾಧ್ಯ? ಮತ್ತಷ್ಟು ಓಡಾಡಿ ಮನಸ್ಸನ್ನು ಸ್ವಲ್ಪ ತಿಳಿಮಾಡಿಕೊಂಡು ತನ್ನ ಕೋಣೆಗೆ ಹಿಂದಿರುಗುತ್ತಾಳೆ. ಹೌದು, ಯೋಚಿಸುತ್ತಾ ಕೂತರೆ ಪ್ರಯೋಜನವಿಲ್ಲ. ಒಂದು ತೀರ್ಮಾನ ತೆಗೆದುಕೊಳ್ಳಬೇಕು. ಅವನ ಸ್ನೇಹ ಸಂಪಾದಿಸಬೇಕಾದರೆ, ಅವನ ಒರಟು ಸ್ವಭಾವಕ್ಕೆ ಕಾರಣ ತಿಳಿಯಬೇಕು. ಒರಟು ತನಕ್ಕೆ ಕಾರಣ ತಿಳಿಯಬೇಕಾದರೆ ಸ್ನೇಹ ಸಂಪಾದಿಸಬೇಕು. ಆದ್ದರಿಂದ ಯಾವುದಾದರು ಒಂದು ಪ್ರಶ್ನೆಗೆ ಬೇರೆ ಮಾರ್ಗದಿಂದ ಉತ್ತರ ಹುಡುಕಬೇಕು.
ಮಾರನೆ ದಿವಸದ ಕೆಲಸದ ತಯಾರಿ ಮಾಡಿಕೊಂಡು, ಊಟ ಮುಗಿಸಿ ಅಮೃತಾ ತನ್ನ ಕೋಣೆಗೆ ಹಿಂದಿರುಗುತ್ತಾಳೆ. ಊಟದ ಸಮಯದಲ್ಲಿ ಇತರರೊಂದಿಗೆ ಮಾತಾಡುತ್ತಿದ್ದರೂ ಮನಸ್ಸಿನಲ್ಲಿ ಪ್ರಶ್ನೆಗಳು ಕಾಡುತ್ತಲೇ ಇತ್ತು. ಭಾಸ್ಕರನ ಸ್ವಭಾವಕ್ಕೆ ಕಾರಣ ಅವನಿಂದಲೇ ತಿಳಿಯಬೇಕು. ಆದ್ದರಿಂದ ನನಗಿರುವುದು ಅವನ ಸ್ನೇಹ ಸಂಪಾದನೆಯೊಂದೆ ಮಾರ್ಗ. ಅದು ಹೇಗೆ? ಅವನೊಂದಿಗೆ ಸಲುಗೆ ಇಂದ ವರ್ತಿಸಿದರೆ? ಇಲ್ಲ, ಅದು ಸಾಧ್ಯವೇಯಿಲ್ಲ. ಅವನು ಅಪ್ಪಾಜಿ ಒಬ್ಬರನ್ನು ಬಿಟ್ಟು ಮತ್ಯಾರನ್ನು ಹತ್ತಿರ ಸೇರಿಸುವುದಿಲ್ಲ. ಹಾಗಾಗಿ ಅವನೊಂದಿಗೆ ಅವನ ತರಹವೇ ನಡೆದುಕೊಂಡು ಬೇರೆಯವರೊಂದಿಗೆ ನಾನು ನಾನಾಗಿರುವುದನ್ನು ಗಮನಿಸಿದರೆ ಖಂಡಿತ ನನ್ನ ಬಳಿ ಬಂದೇ ಬರುತ್ತಾನೆ. ಹೌದು, ಇದೇ ಸರಿ. ಈ ವಿಚಾರವನ್ನು ಅಪ್ಪಾಜಿಗೆ ಹೇಳಿ ಮುಂದುವರೆಯಬೇಕು.
ಮುಂದಿನ ಕೆಲದಿನಗಳು ರಾಯರು, ಅಮೃತಾ ಮತ್ತಿತರ ಅಧ್ಯಾಪಕರು ಕಾಲೇಜಿನ ಪರೀಕ್ಷೆ ಕೆಲಸಗಳಲ್ಲಿ ನಿರತರಾದರು. ಕೆಲಸದ ಹೊರತು ಬೇರೆ ಮಾತಾಡಲು ಸಮಯ ಯಾರಿಗೂ ಇರಲಿಲ್ಲ. ಪರೀಕ್ಷೆಯ ಗದ್ದಲಗಳೆಲ್ಲಾ ಮುಗಿದ ಮೇಲೆ ಅಮೃತಾ ರಾಯರನ್ನು ಭೇಟಿಯಾಗುತ್ತಾಳೆ. ಅಮೃತಾ ತಾನು ಭಾಸ್ಕರನ ವಿಚಾರದಲ್ಲಿ ಯೋಚನೆ ಮಾಡಿದ್ದನ್ನೆಲ್ಲಾ ತಿಳಿಸುತ್ತಾಳೆ. ಅಕೆಯ ಮಾತನ್ನು ಕೇಳಿದ ರಾಯರು ಯೋಚಿಸಿ "ನೀನು ಹೇಳೋದೇನೋ ಸರಿ ಆದರೆ, ಈ ಪ್ರಕಾರ ಮಾಡುವುದರಿಂದ ಅವನು ಸರಿ ಹೋಗುತ್ತಾನ?" ಎಂದು ಬಲವಾಗಿ ಅನುಮಾನ ವ್ಯಕ್ತಪಡಿಸುತ್ತಾರೆ. ತನ್ನ ಯೋಚನೆ ಮತ್ತು ಮಾಡುವ ಕೆಲಸದ ಮೇಲೆ ಅಚಲವಾದ ವಿಶ್ವಾಸದಿಂದ "ಅಪ್ಪಾಜಿ, ನಿಮಗೆ ಹೇಳುವಷ್ಟು ತಿಳಿವಳಿಕೆ ನನಗಿಲ್ಲ. ಆದರೆ, ಈ ವಿಷಯದಲ್ಲಿ ನನಗೆ ಬಲವಾದ ನಂಬಿಕೆಯಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅವರು ನನ್ನೊಂದಿಗೆ ಮಾತಾಡಲು ಅವಕಾಶ ಸಿಗಲಿ, ಆನಂತರ ನೋಡಿ. ಅವರಲ್ಲಿ ಖಂಡಿತ ಬದಲಾವಣೆಯನ್ನು ಕಾಣಬಹುದು" ಎಂದು ಅಮೃತಾ ಹೇಳುತ್ತಾಳೆ. ಅವಳ ಮಾತುಗಳು ರಾಯರನ್ನು ಸಂತೋಷಗೊಳಿಸುತ್ತದೆ. ನಂತರ ಕಾಲೇಜಿನ ವಿಚಾರಗಳನ್ನು ಮಾತಾಡುತ್ತಾ ಇಬ್ಬರೂ ಒಬ್ಬರನ್ನೊಬ್ಬರು ಬೀಳ್ಕೊಡುತ್ತಾರೆ.
ಭಾಸ್ಕರ ಸರಿಹೋಗುತ್ತಾನೆ ಎಂಬ ಭರವಸೆ ರಾಯರಲ್ಲಿ ಮೂಡಿತು. ಅಮೃತಾಳ ಮಾತಿನಲ್ಲಿ ಅವರಿಗೆ ವಿಶ್ವಾಸ ಬಂದಿತ್ತು. ಅದೇ ಖುಷಿಯಲ್ಲಿ ಮನೆಗೆ ಹೋಗುತ್ತಾರೆ. ಮನೆಯಲ್ಲಿ ಹೆಂಡತಿಯಾಗಲಿ, ಮಗನಾಗಲಿ ಇರುವುದಿಲ್ಲ. ಸಮಯ ನೋಡಿದಾಗ ಸಂಜೆ ೭:೦೦. ಕೆಲಸದವನನ್ನು ವಿಚಾರಿಸಿದಾಗ ತಾಯಿ, ಮಗ ಇಬ್ಬರೂ ಹೊರ ಹೋಗಿದ್ದಾರೆಂದು ತಿಳಿಯುತ್ತದೆ. ಇಂದಾದರು ಅವರು ಬಂದ ಮೇಲೆ ಅವರೊಂದಿಗೆ ಕುಳಿತು ಊಟ ಮಾಡೊಣ ಎಂದುಕೊಂಡು ರಾಯರು ಅಂದಿನ ದಿನಪತ್ರಿಕೆಯನ್ನು ಓದುತ್ತಾ ಕೂರುತ್ತಾರೆ. ಮನಸ್ಸಿಗೆ ಹೆಚ್ಚು ಖುಷಿಯಾದಾಗ, ದುಃಖವಾದಾಗ ಸುಮ್ಮನಿರಲು ಸಾಧ್ಯವೇ ಇಲ್ಲ. ಅದನ್ನು ಯಾರೊಂದಿಗಾದರೂ ಹಂಚಿಕೊಳ್ಳುವತನಕ ಮನಸ್ಸಿನಲ್ಲಿ ಒಂದು ರೀತಿ ತಳಮಳ, ಬಾಲ ಸುಟ್ಟ ಬೆಕ್ಕಿನಂತಾಗುತ್ತದೆ. ಅದೇ ರೀತಿ ರಾಯರ ಮನಸ್ಸು ತನಗಾಗುತ್ತಿರುವ ಖುಷಿಯನ್ನು ತನ್ನ ಹೆಂಡತಿ, ಮಗನೊಂದಿಗೆ ಹಂಚಿಕೊಳ್ಳಬೇಕೆಂಬ ತವಕದಿಂದ ಪದೇ ಪದೇ ಬಾಗಿಲ ಬಳಿ ನೋಡುತ್ತಿದ್ದರು. ಮತ್ತೊಮ್ಮೆ ಮಗದೊಮ್ಮೆ ಬಾಗಿಲ ಬಳಿ ನೋಡುತ್ತಿದ್ದರು. ನಿಮಿಷಕ್ಕೊಂದು ಸಲ ಗಡಿಯಾರ ನೋಡಿಕೊಳ್ಳುತ್ತಿದ್ದರು. ಇಲ್ಲ, ಏಳುವರೆ ಆಯ್ತು, ಎಂಟಾಯಿತು, ಎಂಟುವರೆ ಆಯ್ತು ಬರಲಿಲ್ಲ. ಉತ್ಸಾಹದಿಂದಿದ್ದ ರಾಯರಿಗೆ ತಾಳ್ಮೆ ಕಳೆದು ಬೇಸರವಾಗಿ ಸಿಟ್ಟು ಬರುವಂತಾಯಿತು. ಮತ್ತೊಮ್ಮೆ ಗಡಿಯಾರ ನೋಡಿದಾಗ ೯:೦೦ ಗಂಟೆ. ಸಿಟ್ಟಿನಲ್ಲೇ ಕೆಲಸದವನನ್ನು ಕರೆದು ಊಟ ಬಡಿಸಲು ಹೇಳುತ್ತಾರೆ.
ಅದೇ ಸಮಯಕ್ಕೆ ಹೆಂಡತಿ, ಮಗ ಇಬ್ಬರೂ ಬರುತ್ತಾರೆ. ಅವರನ್ನು ನೋಡಿದ ರಾಯರಿಗೆ ಸಿಟ್ಟೆಲ್ಲಾ ಇಳಿದು ಮತಾಡಿಸುತ್ತಾ ಸುಧಾರಿಸಿಕೊಳ್ಳಲು ಹೇಳುತ್ತಾರೆ. ಒಟ್ಟಿಗೆ ಊಟ ಮಾಡಲು ಆಹ್ವಾನಿಸುತ್ತಾರೆ. ವಿಶ್ವ "ಅಣ್ಣ, ನನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಿತ್ತು ನಮ್ಮದು ಅಲ್ಲೇ ಊಟವಾಯಿತು, ನೀವು ಮಾಡಿ ಮಲಗಿ, ನಾವು ಮಲಗುತ್ತೇವೆ" ಎಂದು ಹೇಳಿ ತನ್ನ ಕೋಣೆಗೆ ಹೊರಡುತ್ತಾನೆ. ಈ ಮಾತನ್ನು ಕೇಳಿ ಕೋಪಗೊಂಡರೂ ತುಸು ಸಮಧಾನ ಮಾಡಿಕೊಂಡು "ಏನೋ ನಾನು ಸಂಜೆಯಿಂದ ನಿಮಗಾಗಿ ಊಟಕ್ಕೆಂದು ಕಾದಿದ್ದೇನೆ, ನೀನು ನೋಡಿದರೆ ಹೊರಗಾಯಿತು ಎನ್ನುತ್ತಿದ್ದೀಯಾ. ಹೋಗಲಿ, ನನ್ನೊಂದಿಗೆ ಕೆಲ ಹೊತ್ತು ಮಾತಾಡುತ್ತಾ ಕೂರಬಾರದೆ" ಎಂದು ಬೇಸರದಿಂದ ಕೇಳುತ್ತಾರೆ. ಇವರ ಮಾತು ಕೇಳಿ ಸರೋಜ "ನಿಮ್ಮ ಕಂತೆ ಪುರಾಣ ಕೇಳೋಕೆ ನಮಗಾಗುವುದಿಲ್ಲ. ನಿಮ್ಮ ಶಿಷ್ಯನನ್ನೋ ಇಲ್ಲ ನಿಮ್ಮ ಆ ಹೊಸ ಟೀಚರ್ ಅನ್ನು ಕರೆಸಿಕೊಂಡು ಮಾತಾಡಿ" ಎಂದು ವ್ಯಂಗ್ಯವಾದ ದನಿಯಲ್ಲಿ ಹೇಳಿದಳು. ಹೆಂಡತಿಯ ಮಾತಿನ ವ್ಯಂಗ್ಯ ಅರ್ಥವಾಗದೆ ಏನಿದು ಎಂಬಂತೆ ರಾಯರು ನೋಡುತ್ತಾರೆ. "ಅದೇನು ಹಾಗೆ ನೋಡುತ್ತಿದ್ದೀರ? ನಿಮಗೆ ನಿಮ್ಮ ಕಾಲೇಜು, ಮಕ್ಕಳು, ನಿಮ್ಮ ಶಿಷ್ಯ ಮತ್ತೆ ನಿಮ್ಮ ಹೊಸ ಟೀಚರ್ ಇದ್ದರೆ ಸಾಕಲ್ಲವ. ವಿಶ್ವ... ನಾನು ಮಲಗುತ್ತೇನೆ. ನೀನು ಬೇಕಾದರೆ ಮಾತಾಡುತ್ತಾ ಕೂರು" ಎಂದು ಸರೋಜ ತನ್ನ ಕೋಣೆಗೆ ಹೋಗುತ್ತಾಳೆ. ಮಗ ವಿಶ್ವನೆಡೆಗೆ ರಾಯರ ದೃಷ್ಟಿ ಹರಿಯುತ್ತದೆ. "ಡ್ಯಾಡ್, ಅಮ್ಮ ಏನೋ ಹೇಳಿದರು ಎಂದು ಬೇಸರ ಮಾಡಿಕೊಳ್ಳಬೇಡಿ. ತುಂಬಾ ಸುಸ್ತಾಗುತ್ತಿದೆ ಹೋಗಿ ಮಲಗುತ್ತೇನೆ. ಗುಡ್ ನೈಟ್" ಎಂದು ಹೇಳಿ ತಂದೆಯ ಪ್ರತಿಕ್ರಿಯೆಗೂ ಕಾಯದೆ ಅಲ್ಲಿಂದ ವಿಶ್ವ ತನ್ನ ಕೋಣೆಗೆ ಹೋಗುತ್ತಾನೆ. ಹೆಂಡತಿ ಮಗನ ನಡುವಳಿಕೆಯನ್ನು ನೋಡಿದ ರಾಯರಿಗೆ 'ಇವರು ನಾನು ಇಷ್ಟಪಟ್ಟು ಮದುವೆಯಾದ ನನ್ನ ಹೆಂಡತಿ, ನನ್ನ ಮಗನಾ?' ಎಂದು ಬೇಸರ ಪಟ್ಟುಕೊಳ್ಳುತ್ತಾರೆ. ಹೆಂಡತಿ, ಮಗನಿದ್ದರೂ ಅನಾಥ ಭಾವ ಕಾಡುತ್ತದೆ. ಊಟಕ್ಕೆಂದು ಕೂತಿದ್ದ ರಾಯರು ಬಡಿಸಿದ ಅಡುಗೆಯನ್ನು ನಾಯಿಗೆ ಹಾಕಿಬಿಡು ಎಂದು ಕೆಲಸದವನಿಗೆ ಹೇಳಿ ಊಟ ಮಾಡದೆ ಹೋಗುತ್ತಾರೆ. "ದುಡ್ಡಿದ್ದವರಿಗೆ ಅನ್ನದ ಬೆಲೆ ಏನು ಗೊತ್ತು?" ಎಂಬ ಮಾತು ಕಿವಿ ಮೇಲೆ ಬೀಳುತ್ತದೆ. ಅದನ್ನು ಕೇಳಿ ಒಮ್ಮೆ ಕೆಲಸದವನ ಕಡೆ ನೋಡಿ ಮುಗುಳ್ನಕ್ಕು ಮೇಲೆ ತಮ್ಮ ಕೋಣೆಗೆ ಹೋಗುತ್ತಾರೆ. ಆ ನಗು, ಮುಗುಳ್ನಗು ನೋವಿನ ನಗುವಾಗಿತ್ತು. ಮನಸ್ಸಿನಲ್ಲಾಗುತ್ತಿದ್ದ ಕೋಲಾಹಲವನ್ನು ಬಿಂಬಿಸುತ್ತಿತ್ತು. ತಮ್ಮ ಕೋಣೆಗೆ ಬಂದು ರಾಯರು ಮಂಚದ ಮೇಲೆ ತಾರಸಿಯನ್ನು ನೋಡುತ್ತಾ ಹಣೆ ಮೇಲೆ ಕೈ ಹಾಕಿ ಅಂಗಾತ ಮಲಗುತ್ತಾರೆ.
ಹೆಂಡತಿ ಹೇಳಿದ ಮಾತುಗಳು ಮತ್ತು ಮಗನ ವರ್ತನೆ ಮನಸ್ಸನ್ನು ಹಿಂಸಿಸುತಿತ್ತು. ಇವಳು ನಾನು ಇಷ್ಟ ಪಟ್ಟು ಮದುವೆಯಾದವಳಾ? ನನ್ನ ಬಗ್ಗೆ ಈ ತರಹ ಯೋಚಿಸುವುದಕ್ಕಾದರೂ ಹೇಗೆ ಮನಸ್ಸು ಬಂತು? ಎಂದು ಯೋಚಿಸುತ್ತಾ ಅವರ ಮೇಲೆ ಅವರಿಗೆ ಬೇಸರವಾಯಿತು. ಈ ತರಹ ನಮ್ಮನ್ನು ನಮ್ಮವರೇ ಬೇಜವಾಬ್ದಾರಿ ವ್ಯಕ್ತಿಯಂತೆ ನೋಡುವವರಿಗೆ, ನಮ್ಮನ್ನು ನಮ್ಮವರೇ ಅರ್ಥಮಾಡಿಕೊಳ್ಳದವರಿಗೆ ಏನು ಅಂತ ಹೇಳುವುದು? ಹೇಳಿದರೂ ನನ್ನ ಮಾತನ್ನು ಕೇಳುತ್ತಾರಾ? ಸಾಧ್ಯವೇ ಇಲ್ಲ. ಮಾತಾಡಿದಷ್ಟು ನಮ್ಮ ಬೆಲೆಯನ್ನು ನಾವೇ ಕಳೆದುಕೊಳ್ಳುತ್ತೇವೆ. ಇವರಿಂದ ದೂರವಿರುವುದೇ ಲೇಸು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ಹಾಗಿದ್ದಲ್ಲಿ ಯಾರಿಗೋಸ್ಕರ ಈ ಬದುಕು, ಈ ಹೋರಾಟವೆಲ್ಲಾ? ಎಂಬ ಪ್ರಶ್ನೆ ಮನಸ್ಸಲ್ಲಿ ಮೂಡುತ್ತದೆ! ತಕ್ಷಣ ಅವರಿಗೆ ಹೊಳೆದ ಉತ್ತರ; ಭಾಸ್ಕರ, ಅಮೃತಾ ಮತ್ತು ಮನೆಗಿಂತಲೂ ಹೆಚ್ಚಾಗಿರುವ ವಿದ್ಯಾ ಸಂಸ್ಥೆ. ಅದನ್ನು ನೆನೆದಾಗಲೆಲ್ಲಾ ಅವರಲ್ಲಿ ಒಂದು ಹೊಸ ಹುರುಪು ಮೂಡುತ್ತದೆ. ಹೌದು, ಆ ಮಕ್ಕಳಿಗಾಗಿ, ವಿದ್ಯಾ ಸಂಸ್ಥೆಗಾಗಿಯಾದರೂ ನಾನು ಬಾಳಬೇಕು. ಅಲ್ಲಿಗೆ ಬರಲಿರುವ ವಿದ್ಯಾರ್ಥಿಗಳಿಗೆ ನಾನು ಮೋಸ ಮಾಡಬಾರದು. ಸಮಾಜಕ್ಕೆ ನನ್ನ ಕಡೆಯಿಂದ ನನ್ನ ಕೈಲಾದ ಸೇವೆಯನ್ನು ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸಬೇಕು. ನನ್ನ ಮಕ್ಕಳ ಸಮಾನರಾಗಿರುವ ಭಾಸ್ಕರ ಮತ್ತು ಅಮೃತಾ ಅವರಿಗಾಗಿ ನಾನೂ ಬಾಳಲೇಬೇಕು. ಹೀಗೆ ಮನೆಯಲ್ಲಿ ಮುಂದುವರೆದರೇ, ಮನೆಯನ್ನು ಬಿಟ್ಟು ಕಾಲೇಜಿನ ಹಾಸ್ಟೆಲಿನಲ್ಲಿ ತಮ್ಮ ಜೀವನವನ್ನು ಸಾಗಿಸಬೇಕು ಎಂದು ತೀರ್ಮಾನಿಸುತ್ತಾರೆ!
ರಾಯರ ಜೊತೆ ಮಾತಾಡಿ ಬಂದ ಅಮೃತಾಳಿಗೆ ರಾಯರ ಬಗ್ಗೆ ಹೆಮ್ಮೆ ಅನಿಸಿದರೂ ಮನಸ್ಸಿಗೆ ಏನೋ ಸಮಾಧಾನವಿರಲಿಲ್ಲ. ಯಾಕೆ ಹೀಗೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುತ್ತಾಳೆ. ಅದಕ್ಕೆ ಉತ್ತರವಾಗಿ ಹೊಳೆದದ್ದು ತನ್ನ ಅಪ್ಪಾಜಿಯ ಬದುಕು. ಅವರನ್ನು ನೆನೆದರೆ ಪಾಪ ಎನಿಸುತ್ತದೆ. ಸಮಾಜದ ಬಗ್ಗೆ, ಮಕ್ಕಳ ಬಗ್ಗೆ ಎಷ್ಟು ಕಳಕಳಿ, ಕಾಳಜಿ ವಹಿಸುತ್ತಾರೆ. ನನ್ನನ್ನು, ತಮ್ಮ ಶಿಷ್ಯ ಭಾಸ್ಕರನನ್ನು ತಮ್ಮ ಮಕ್ಕಳಂತೆ ಕಾಣುತ್ತಾರೆ. ಆದರೆ, ಅವರ ಸ್ವಂತ ಬದುಕು? ಪಾಪ, ತಮ್ಮ ಹೆಂಡತಿ, ಮಗನಿಂದ ನೆಮ್ಮದಿ ಕಂಡುಕೊಳ್ಳಲಾಗುತ್ತಿಲ್ಲ. ತಮ್ಮ ಶಿಷ್ಯನನ್ನೇ ಮನನಿಗಿಂತ ಹೆಚ್ಚಾಗಿ ಪ್ರೀತಿಸುವ ಅವರನ್ನು ಭಾಸ್ಕರ ಅರ್ಥ ಮಾಡಿಕೊಳ್ಳುತ್ತಿಲ್ಲ. ಇದರಿಂದ ಅವರ ಮನಸ್ಸಿಗೆ ಎಷ್ಟು ಹಿಂಸೆ ಅನುಭವಿಸುತ್ತಿರಬಹುದು ಎಂದು ರಾಯರ ಬಗ್ಗೆ ಅನುಕಂಪದಿಂದ ಯೋಚಿಸುತ್ತಾಳೆ. 'ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ' ಎನ್ನುವುದು ಇದಕ್ಕೆ. ಅಮೃತಾಳಿಗೆ ತಂದೆ ತಾಯಿಯಿಲ್ಲ ಇದ್ದಿದ್ದರೇ ಎಷ್ಟು ಪ್ರೀತಿಸುತ್ತಿದ್ದಳೋ. ರಾಯರ ಮನೆಯಲ್ಲಿ ಆ ಭಾಗ್ಯವಿದ್ದರೂ ಅನುಭವಿಸುವ ಯೋಗವಿಲ್ಲ. ಅಕಸ್ಮಾತ್ ತಂದೆ ತಾಯಿ ಇದ್ದಿದ್ದರೂ, ತನಗೂ ಅಂತಹುದೆ ತಂದೆ ತಾಯಿ ಇದ್ದಿದ್ದರೆ ಬಹುಶಃ ತಾನು ಕೂಡ ರಾಯರ ಮಗನ ತರಹನೇ ಆಗುತ್ತಿದ್ದೆ ಅನಿಸುತ್ತೆ. ಅವರವರ ಅಲೋಚನೆ ಅವರಿಗೆ. ತಂದೆ, ತಾಯಿ ಇದ್ದೂ ಅಪ್ಪಾಜಿಯವರ ಮಗ ಮತ್ತು ಭಾಸ್ಕರ ಒಂದು ರೀತಿ. ಭಾಸ್ಕರ; ಹೌದು ಅಪ್ಪಾಜಿ ಅವರ ಬಗ್ಗೆ ಎಷ್ಟು ಕಾಳಜಿ, ಪ್ರೀತಿ ಇಟ್ಟುಕೊಂಡಿದ್ದಾರೆ. ಆದರೆ, ಆತ ಮಾತ್ರ ಒರಟಾಗಿ ನಡೆದುಕೊಳ್ಳುತ್ತಾನೆ. ಅಪ್ಪಾಜಿ ಕೂಡ ಅವನಿಗೆ ತೋರಿಸುವ ಪ್ರೀತಿಯನ್ನು ಮನೆಯವರ ಮೇಲೆ ತೋರಿಸಿದರೆ ಚೆನ್ನಾಗಿರುತ್ತಿತ್ತು. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ' ಎಂಬ ವಾಕ್ಯ ಮನಸ್ಸಲ್ಲಿ ಸುಳಿಯುತ್ತದೆ. ಮರುಕ್ಷಣ 'ಅಪ್ಪಾಜಿ, ಅವರ ಮಗ, ಭಾಸ್ಕರ ಇವರ ಬದುಕನ್ನು ವಿಶ್ಲೇಷಿಸಲು ತಾನು ಯಾರು. ಅವರವರು ಬೆಳೆದ ವಾತಾವರಣ, ಅವರ ಜೀವನದಲ್ಲಿ ನಡೆದ ಘಟನೆಗಳು ಅವರ ಬದುಕನ್ನು ರೂಪಿಸಿದೆ' ಎಂದು ತಾನು ಯೋಚಿಸಿದ್ದು ತಪ್ಪು ಎಂದು ಸುಮ್ಮನಾಗುತ್ತಾಳೆ.
ಕಾಲೇಜಿನ ಕೆಲಸಗಳನ್ನು ಮುಗಿಸಿಕೊಂಡು, ಊಟವನ್ನೂ ಮುಗಿಸಿ ಅಮೃತಾ ಮಲಗುತ್ತಾಳೆ. 'ಅವರವರು ಬೆಳೆದ ವಾತಾವರಣ, ಅವರ ಜೀವನದಲ್ಲಿ ನಡೆದ ಘಟನೆಗಳು ಅವರ ಬದುಕನ್ನು ರೂಪಿಸಿದೆ' ಎಂಬ ವಾಕ್ಯ ಅವಳಿಗೆ ಪದೆ ಪದೆ ಮನಸ್ಸಿನಲ್ಲಿ ಸುಳಿಯುತ್ತದೆ. ಅಪ್ಪಾಜಿ ಮತ್ತವರ ಮನೆಯವರ ಬದುಕಿಗೆ ಅವರವರ ಯೋಚನ ಲಹರಿ, ಅವರ ಕೆಲಸಗಳು ಕಾರಣವಾಯಿತು. ಆದರೆ, ಭಾಸ್ಕರನ ಬದುಕಿನಲ್ಲಿ ಅಂತಹ ಘಟನೆ ಏನಾದರು ನಡೆದಿದೆಯಾ? ಆತ ಒರಟಾಗಲು, ಯಾರೊಂದಿಗೂ ಬರೆಯದಿರಲು ಕಾರಣವೇನು? ಎಂಬ ಪ್ರಶ್ನೆ ಮೂಡುತ್ತದೆ. ಏನಿರಬಹುದು ಆತನ ಬದುಕಿನಲ್ಲಿ ನಡೆದಿರುವ ಘಟನೆ? ಹೌದು, ಕಂಡು ಹಿಡಿಯಬೇಕು, ಅಪ್ಪಾಜಿಯೊಂದಿಗೆ ತಾನು ಕೈಜೋಡಿಸಿ ಅವರನ್ನು ಎಲ್ಲರಂತೆ ಮಾಡಲು ಪ್ರಯತ್ನಿಸಬೇಕು ಎಂದು ಮತ್ತೊಂದು ಸಲ ತೀರ್ಮಾನಿಸುತ್ತಾಳೆ.
Comments
Post a Comment