ಮಾರನೆ ದಿವಸ ಬೆಳಿಗ್ಗೆ ಕಾಲೇಜಿಗೆ ಹೋಗಲು ಮನಸ್ಸಾಗಲಿಲ್ಲ. ಆದರೆ, ಕಾಲೇಜಿಗೆ ಹೋಗದೆ ಏನು ಮಾಡುವುದು? ಚಾಮುಂಡಿ ಬೆಟ್ಟಕ್ಕೆ ಹೋಗುವುದೆ? ಎಂದು ಯೋಚಿಸುತ್ತಾರೆ. ಮಾಡುವ ಕೆಲಸ ಬಿಟ್ಟು ಹೋಗುವುದು ರಾಯರಿಗೆ ಸರಿ ಕಾಣಲಿಲ್ಲ. ಆದ್ದರಿಂದ ಕಾಲೇಜಿಗೆ ಹೋಗುವುದೇ ಸರಿ. ಬೆರೆ ಕಡೆ ಹೋದರೂ ಮನಸ್ಸಿಗೆ ಹಿಂಸೆ ಆಗುತ್ತದೆ. ಕಾಲೇಜಿನಲ್ಲಿ ತಮ್ಮ ಸಹೋದ್ಯೋಗಿಗಳಿಂದ ಮತ್ತು ವಿದ್ಯಾರ್ಥಿಗಳಿಂದ ರಾಯರು ಮಾಡಿದ ಭಾಷಣಕ್ಕಾಗಿ ಚಪ್ಪಾಳೆ ಮತ್ತು ಮೆಚ್ಚುಗೆ ವ್ಯಕ್ತವಾಗುತ್ತದೆ. ಮುಖದ ಮೇಲೆ ನಗುವಿನ ಮುಖವಾಡ ಧರಿಸಿ ಒಳಗೆ ಬೇಸರ ಪಟ್ಟುಕೊಳ್ಳುತ್ತಿದ್ದರು. ನಂತರ ತಮ್ಮ ಯೋಚನೆಗಳನ್ನು ಮರೆತು ಕೆಲಸದಲ್ಲಿ ಮಗ್ನರಾಗುತ್ತಾರೆ. ಆ ದಿನದ ಕೆಲಸಗಳನ್ನು ಮುಗಿಸಿದ ಮೇಲೆ ಸಂಜೆ ಮನೆಗೆ ತೆರಳಿ ಅಂದಿನ ದಿನಪತ್ರಿಕೆಯನ್ನು ಓದುತ್ತಾ ಕೂರುತ್ತಾರೆ. ಕೆಲ ಹೊತ್ತಾದ ಮೇಲೆ ಹೆಣ್ಣುಮಗಳೊಬ್ಬಳು "ಮಿ. ಅಚ್ಯುತರಾವ್ ಒಳಗೆ ಬರಬಹುದ?" ಎಂದು ಕೇಳಿ ಒಳಗೆ ಬರುತ್ತಾರೆ. "ಬನ್ನಿ ಕುಳಿತುಕೊಳ್ಳಿ" ಎಂದು ಬಂದವರನ್ನು ಕೂರಿಸುತ್ತಾ ತಾನು ಕುಳಿತುಕೊಂಡು "ಹೇಳಿ ಮೇಡಂ ಯಾರು ನೀವು ಏನು ಸಮಾಚಾರ" ಎಂದು ಬಂದವರನ್ನು ವಿಚಾರಿಸಿಕೊಳ್ಳುತ್ತಾರೆ.
"ನಾನು ಸರೋಜ ಅಂತ, ಇಲ್ಲೇ ಇನ್ಫೊಟೆಕ್ಕಲ್ಲಿ ಕೆಲಸ ಮಾಡಿಕೊಂಡಿದ್ದೇನೆ, ನಿನ್ನೆ ಕುವೆಂಪು ಸಭಾಂಗಣದಲ್ಲಿ ನಡೆದ ಚರ್ಚೆಯಲ್ಲಿ ನಿಮ್ಮ ಮಾತುಗಳನ್ನು ಕೇಳಿದೆ ತುಂಬಾ ಖುಷಿಯಾಯಿತು. ಹಾಗು ಮೆಚ್ಚುಗೆ ಕೂಡ ವ್ಯಕ್ತವಾಯಿತು ಆದ್ದರಿಂದ ನಿಮಗೆ ಅಭಿನಂದನೆ ಹೇಳುವ ಎಂದು ನಿಮ್ಮನ್ನು ಹುಡುಕಿಕೊಂಡು ಬಂದೆ" ಎಂದು ಹೇಳುತ್ತಾಳೆ. ಅವರ ಅಭಿನಂದನ ಪೂರಕವಾದ ಮಾತುಗಳು ಮನಸ್ಸಿಗೆ ಮತ್ತೆ ಮತ್ತೆ ತಾಗುತ್ತದೆ. ಆದರು ತೋರ್ಪಡಿಸಿಕೊಳ್ಳುಬಾರದು ಎಂಬ ಜಾಗರೂಕತೆಯಿಂದ "ಥಾಂಕ್ಯು" ಎಂದು ಹೇಳಿ "ನನಗೆ ಅನಿಸಿದನ್ನು ಹೇಳಿದೆ ಅದಕ್ಕೆ ನೀವು ಇಷ್ಟು ಹೊಗಳುವುದು ಅಗತ್ಯವಿರಲಿಲ್ಲ" ಎಂದು ಹೇಳುತ್ತಾರೆ.
"ಅದು ನಿಮ್ಮ ದೊಡ್ದತನ, ನಿನ್ನೆ ನೀವು ಮಾತಾಡಿದ ವಿಚಾರ ನನಗೆ ತುಂಬಾ ಹಿಡಿಸಿತು. ಕೆಲಸದ ಸಲುವಾಗಿ ಮೈಸೂರಿಗೆ ಬಂದು ಈಗ ಇಲ್ಲೇ ಜಯಲಕ್ಷ್ಮೀಪುರದಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡು ವಾಸವಾಗಿದ್ದೇನೆ. ನಿಮ್ಮನ್ನು ಮಾತಾಡಿಸಿಕೊಂಡು ಹೋಗೋಣ ಎಂದು ಅನಿಸಿತು ಹಾಗಾಗಿ ಬಂದೆ" ಎಂದು ಹೇಳುತ್ತಾರೆ. "ತುಂಬಾ ಸಂತೋಷ, ನನ್ನ ಮಾತುಗಳು ಇಷ್ಟೊಂದು ಪ್ರಭಾವ ಬೀರುತ್ತದೆ ಎಂದು ನನಗೆ ಅನಿಸಿರಲಿಲ್ಲ. ಅದಿರಲಿ ಏನು ತಗೋತೀರ ಟೀ ಅಥವಾ ಕಾಫಿ?" ಎಂದು ಉಪಚಾರದ ಮಾತು ಆಡುತ್ತಾರೆ. "ಅಯ್ಯೋ ಅವೆಲ್ಲ ಬೇಡ ನಿಮ್ಮನ್ನು ಪರಿಚಯ ಮಾಡಿಕೊಂಡು ಮಾತಾಡಿಸಿಕೊಂಡು ಹೋಗೋಣ ಎಂದು ಬಂದೆ" ಎಂದು ನಗುತ್ತಾಳೆ. "ಹಾಗೆಂದರೆ ಹೇಗೆ? ನೀವು ನನ್ನನ್ನು ನೋಡುವ ಸಲುವಾಗಿ ಬಂದಿದ್ದೀರ, ಹಾಗೆ ಹೋಗೋದು ಸರಿ ಕಾಣುವುದಿಲ್ಲ" ಎಂದು ಅವರನ್ನು ಕೂರಿಸಿ ರಾಯರು ಅಡುಗೆ ಮನೆಕಡೆಗೆ ಹೋಗುತ್ತಾರೆ.
ಅಲ್ಲೇ ಕೂತಿದ್ದ ಸರೋಜ ಮನೆಯನ್ನು ಸುತ್ತ ಗಮನಿಸುತ್ತಾಳೆ. ತಾನು ಕೂತೆದ್ದ ೬ ಅಡಿ ಮುಂದೆ ತೇಗದಿಂದ ಮಾಡಿದ್ದ ಟೇಬಲ್, ಅದರ ಮೇಲೆ ಒಂದು ಟಿ.ವಿ., ಅದೇ ಮೂಲೆಯಲ್ಲಿ ಶ್ರೀಗಂಧದಲ್ಲಿ ಮಾಡಿದ್ದ ಶ್ರೀರಾಮ ಸೀತೆಯರ ಮೂರ್ತಿ. ಪಕ್ಕದ ಗೋಡೆಯ ಮೇಲ್ಭಾಗದಲ್ಲಿ ತೂಗು ಹಾಕಿದ್ದ ತುಸು ಹಳೆ ಕಾಲದ್ದು ಎನ್ನಬಹುದಾದ ಪೆಂಡುಲಂ ಗಡಿಯಾರ, ಎದುರು ಗೋಡೆಯ ಮೇಲೆ ಗಂಡ ಹೆಂಡತಿಯರ ಚಿತ್ರ; ನರಹರಿರಾವ್, ಅನುಸೂಯ. ಎರಡಕ್ಕೂ ತೂಗುಹಾಕಿದ್ದ ಶ್ರೀಗಂಧದ ಹಾರ. ನೋಡಿದರೆ ಅಚ್ಯುತರಾಯರ ತಂದೆ ತಾಯಿ ಎಂದು ತಿಳಿಯತ್ತಿತ್ತು. ತಾನು ಕೂತಿದ್ದ ಮುಂದೆ ಹೋದರೆ ಎಡಗಡೆಗೆ ಅಡುಗೆ ಮನೆಗೆ ಹೋಗುವ ದಾರಿಯಿತ್ತು. ಬಲಗಡೆ ಮಹಡಿಗೆ ಹೋಗಲು ಮೆಟ್ಟಲುಗಳು. ಅಲ್ಲಿ ಗೋಡೆಯ ಮೇಲೆ ಆನೆಯ ತೂಗು ಚಿತ್ರವನ್ನು ನೇತು ಹಾಕಿದ್ದರು, ತನ್ನ ಎಡಗಡೆಗೆ ತೆರೆದ ಜಾಗ, ಅಲ್ಲೊಂದು ತೇಗದಿಂದ ಮಾಡಿದ್ದ ಡೈನಿಂಗ್ ಟೇಬಲ್. ಒಂದೇ ನೋಟದಲ್ಲಿ ಹೇಳುವುದಾದರೆ ತಕ್ಕ ಮಟ್ಟಿಗೆ ಅನುಕೂಲಸ್ಥರ ಮನೆ. ಒಬ್ಬರೇ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರಲ್ಲ? ಎಂದು ಆಶ್ಚರ್ಯವಾಯಿತು. ಮನೆ ಕೆಲಸದವರು ಇರಬಹುದು ಎಂಬ ಉತ್ತರ ಹೊಳೆಯಿತು. ಅಷ್ಟರಲ್ಲಿ ಅಚ್ಯುತರಾಯರು ಎರಡು ಲೋಟ ಕಾಫೀ ಮತ್ತು ಬಿಸ್ಕತ್ತುಗಳನ್ನು ತಂದು ಎದುರಿಗಿದ್ದ ಟೀಪಾಯ್ ಮೇಲೆ ಇಟ್ಟು ತೆಗೆದುಕೊಳ್ಳಲು ಹೇಳುತ್ತಾರೆ. ಕೆಲಹೊತ್ತು ಮಾತಾಡಿದ ನಂತರ ಸರೋಜರವರು ಅಲ್ಲಿಂದ ಹೋರಡುತ್ತಾರೆ.
ಅವರು ಹೋದ ನಂತರ, ರಾಯರು ಮನೆಗೆಲಸ ಮತ್ತು ಕಾಲೇಜಿನ ಕೆಲಸಗಳನ್ನು ಮುಗಿಸಿ ಊಟದ ಮುಂಚೆ ಸೋಫಾ ಮೇಲೆ ಹಾಗೆ ಕೂರುತ್ತಾರೆ. ಮನಸ್ಸಿಗೆ ನಿನ್ನೆ ಉಂಟಾಗಿದ್ದ ಖೇದ ಇಂದು ಆಗುತ್ತಿಲ್ಲ, ಒಂದು ರೀತಿ ಸಮಾಧಾನಕರ ಭಾವವಿತ್ತು. ಅದೇ ಖುಷಿಯಲ್ಲಿ ಊಟಕ್ಕೆ ತನಗೆ ಇಷ್ಟವಾದ ಚಪಾತಿ, ಕೋಸಿನ ಪಲ್ಯ ಮಾಡಿಕೊಂಡು ತಿನ್ನುತ್ತಾರೆ.
ನಂತರ, ತನ್ನ ಕೋಣೆಗೆ ಹೋಗಿ ಎಲ್ಲಾ ದೀಪಗಳನ್ನು ಆರಿಸಿ, ಬೆಡ್ ಲೈಟ್ ಒಂದನ್ನು ಹಾಕಿ ಮಂಚದ ಮೇಲೆ ಹಾಗೆ ತಮ್ಮ ಮನಸ್ಸನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಸಂಜೆ ಬಂದಿದ್ದ ಸರೋಜರವರ ಬಗ್ಗೆ ನೆನೆಯುತ್ತಾ "ಸ್ವಂತಕಾಲಿನ ಮೇಲೆ ನಿಂತು, ಯಾರ ಹಂಗೂ ಇಲ್ಲದೇ ಒಬ್ಬಳೇ ಬದುಕುತ್ತಿದ್ದೇನೆ ಎಂಬ ಆತ್ಮವಿಶ್ವಾಸ ಅವರ ಮುಖದಲ್ಲಿ ಕಾಣಿಸುತ್ತಿತ್ತು. ತುಸು ಆಗಲವಾದ ಹಣೆ, ಗಿಣಿಮೂಗು, ಪ್ರತಿ ಮಾತಿನಲ್ಲೂ ನಗು, ಪೋನಿಟೈಲ್, ಚೂಡಿದಾರ್ ಹಾಕಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಲಕ್ಷಣವಾದ ಮುಖ ತೀರ ಚಿಕ್ಕದು ಅಲ್ಲದ, ದೊಡ್ಡದು ಅಲ್ಲದ ಬಾಯಿ. ಅವರ ಜೊತೆ ಮಾತಾಡಿ ತುಸು ಸಮಾಧಾನವಾಯಿತು. ನಿನ್ನೆ ನಾನು ಮಾತಾಡಿದ್ದು ನನಗೆ ಬೇಸರ ಉಂಟುಮಾಡಿತು. ಆದರೆ, ಜನರಿಗೆ ಮೆಚ್ಚಿಗೆ ಉಂಟಾಗಿದೆ. ಇಂದು ಅವರು ಬಂದು ನನ್ನ ಹೊಗಳಿದರು. ತಾನಾಗೆ ಮನೆಗೆ ಬಂದು ಮಾತಾಡಿಸಿದರು. ನಿಜಕ್ಕೂ ಅವರು ಹೇಳುವುದಷ್ಟು ಪ್ರಭಾವಿಯಾಗಿತ್ತೆ ತನ್ನ ಮಾತು? ಎನಿಸುತ್ತದೆ. ಇಲ್ಲ, ಈ ಪ್ರಶ್ನೆಗೆ ನನ್ನ ಮನಸ್ಸಿಗೆ ಒಪ್ಪುವಂತಹ ಉತ್ತರ ನನಗಿನ್ನು ಸಿಕ್ಕಿಲ್ಲ. ಹಾಗಾದರೆ, ಈ ಪ್ರಶ್ನೆಗೆ ಉತ್ತರ ಯಾರು ಹೇಳುತ್ತಾರೆ ಅಥವಾ ನನಗೆ ಹೊಳೆಯುತ್ತದ? ಗೊತ್ತಿಲ್ಲ. ಆದರೂ ಮನಸ್ಸಿಗೆ ಒಂದು ರೀತಿ ಸಮಾಧಾನ, ಖುಷಿ. ಅವರು; ಸರೋಜ ಬಂದು ಹೋದಾಗಿಂದ ಈ ರೀತಿಯ ಅನುಭವ. ಹಾಗಾದರೆ ಈ ನನ್ನ ಪ್ರಶ್ನೆಗೆ ಅವರೇ ಸರಿಯಾದ ಉತ್ತರ ಕೊಡಬಲ್ಲರು ಎಂದು ಅಂದುಕೊಳ್ಳುತ್ತಾರೆ. ಹೌದು, ಅವರೊಂದಿಗೆ ಇದರ ಬಗ್ಗೆ ಚರ್ಚಿಸಬೇಕು ಎನಿಸುತ್ತದೆ. ಸರಿ ಮಲಗೋಣ ಎಂದು ದೀಪ ಆರಿಸುತ್ತಾರೆ. ಮರುಕ್ಷಣ ಅವರನ್ನು ಮತ್ತೊಮ್ಮೆ ಸಂಧಿಸುವ ಬಗೆ ಹೇಗೆ? ಎಂಬ ಪ್ರಶ್ನೆ. ಮಾತಿನ ಭರಾಟೆಯಲ್ಲಿ ಅವರ ಫೋನ್ ನಂಬರ್ ತೆಗೆದುಕೊಳ್ಳುವುದನ್ನು ಮರೆತೆ. ಮತ್ತೆ ಅವರೇ ಭೇಟಿ ಮಾಡಬೇಕು ಅಥವಾ ಕರೆಮಾಡಬೇಕು ಇಲ್ಲವಾದಲ್ಲಿ ಮಾತು ಸಾಧ್ಯವಿಲ್ಲ ಎಂದುಕೊಂಡು ಮಲಗುತ್ತಾರೆ.
************************
ಸಭಾಂಗಣದಿಂದ ಸರೋಜ ಆಟೋ ಹತ್ತಿ ತನ್ನ ಮನೆಗೆ ಬರುತ್ತಾಳೆ. ಅಚ್ಯುತರಾಯರ ಅವಿಭಕ್ತ ಕುಟುಂಬದ ವಿಚಾರಧಾರೆ ನಿಜಕ್ಕೂ ತುಂಬಾ ಹಿಡಿಸುತ್ತೆ. ಅಲ್ಲಿ ನಡೆದ ಚರ್ಚೆಯಲ್ಲಿ ಇಬ್ಬರ ವಾದವನ್ನು ಕೇಳಿದ ಸರೋಜಳಿಗೆ ಆಧುನಿಕ ಬದುಕಲ್ಲಿ ವಿಭಕ್ತ ಕುಟುಂಬಗಳೇ ಹೆಚ್ಚು ಪ್ರಾಯೋಗಿಕವಾಗಿ ಕಂಡರೂ, ಅಚ್ಯುತರಾಯರು ಹೇಳಿದ್ದು ಸರಿ ಎನಿಸುತ್ತದೆ. ಅವರು ಹೇಳಿದ ಮಾತುಗಳು ಸತ್ಯವೆನಿಸುತ್ತದೆ. ಅವರನ್ನು ಒಂದು ಸಲವಾದರೂ ಭೇಟಿಯಾಗಲೇ ಬೇಕು ಎಂದು ತೀರ್ಮಾನಿಸುತ್ತಾಳೆ. ಆದರೆ, ಅವರು ಎಲ್ಲಿ ಸಿಗುತ್ತಾರೋ ತನಗೆ ತಿಳಿಯದು. ಹಾಗಾದರೆ, ಕುವೆಂಪು ಸಭಾಂಗಣದಲ್ಲಿ ಅವರ ವಿಳಾಸ ಕೇಳಿದರೆ ಅಲ್ಲಿ ಸಿಗುತ್ತದೆ ಎಂದುಕೊಳ್ಳುತ್ತಾಳೆ. ಮಾರನೆ ದಿವಸ ಸರೋಜ ಕುವೆಂಪು ಸಭಾಂಗಣಕ್ಕೆ ಹೋಗಿ ಅಚ್ಯುತರಾಯರ ದೂರವಾಣಿ ಮತ್ತು ವಿಳಾಸವನ್ನು ತೆಗೆದುಕೊಳ್ಳುತ್ತಾಳೆ.
ರಾಯರನ್ನು ಮಾತಾಡಿಸಿಕೊಂಡು ಸರೋಜ ಮನೆಗೆ ಬರುತ್ತಾಳೆ. ನಿನ್ನೆ ಸಭಾಂಗಣದಲ್ಲಿ ಮತ್ತು ಇಂದು ಮನೆಯಲ್ಲಿ ರಾಯರು ಮಾತಾಡಿದ ರೀತಿಯನ್ನು ಹೋಲಿಸಿ ನೋಡುತ್ತಾಳೆ. ಸಭಾಂಗಣದಲ್ಲಿ ಮಾತಾಡಬೇಕಾದರೆ ಅವರು ಗಂಭೀರವದನರಾಗಿದ್ದರು. ಅವರ ಮಾತುಗಳಲ್ಲಿ ದೃಢತೆ ಕಾಣಿಸುತ್ತಿತ್ತು. ಇಂದು ಮನೆಯಲ್ಲಿ ಚೆನ್ನಾಗಿ ಮಾತಾಡಿದರು, ಅಷ್ಟೇನು ಗಂಭೀರ ಸ್ವಭಾವ ಅನ್ನಿಸಲಿಲ್ಲ. ತುಂಬಾ ಸಹಜವಾಗೆ ಮಾತಾಡಿದರು. ಮನೆ ನೋಡಿದರೆ ತಕ್ಕ ಮಟ್ಟಿಗೆ ಅನುಕೂಲಸ್ಥರು ಎಂದು ತೋರುತ್ತದೆ. ತಂದೆ, ತಾಯಿ ಸಹ ಇಲ್ಲ. ಇಂದು ಅಷ್ಟು ಮಾತಾಡಲಾಗಲಿಲ್ಲ, ಮತ್ತೊಂದು ದಿವಸ ಬಿಡುವಾದಾಗ ಅವರನ್ನು ನೋಡಿ ಮಾತಾಡಿಸಬೇಕು ಎಂದುಕೊಳ್ಳುತ್ತಾಳೆ.
ಮುಂದಿನ ಒಂದೆರಡು ವಾರ ರಾಯರು ಮತ್ತು ಸರೋಜ ಭೇಟಿಯಾಗುವುದಿಲ್ಲ. ದಿನಕ್ಕೆ ಒಂದು ಸಲವಾದರೂ ಇಬ್ಬರು ಒಬ್ಬರನ್ನೊಬ್ಬರು ನೆನಪಿಸಿಕೊಳ್ಳುತ್ತಿದ್ದರು. ಆದರೆ, ಪರಸ್ಪರ ನೋಡುವ ಅಥವಾ ಭೇಟಿಯಾಗುವ ಪ್ರಯತ್ನ ಮಾಡಲಿಲ್ಲ. ಹದಿನೈದು ದಿನಗಳಾದ ಮೇಲೆ ರಾಯರೇ ಸರೋಜಳನ್ನು ಭೇಟಿಯಾಗುವುದಾಗಿ ಅಂದುಕೊಳ್ಳುತ್ತಾರೆ. ಆದರೆ ಹೇಗೆ? ಎಂಬುದಕ್ಕೆ ಅವರ ಹತ್ತಿರ ಉತ್ತರವಿಲ್ಲ. ಅವರಾಗೆ ತನ್ನನ್ನು ಭೇಟಿ ಮಾಡಬೇಕು ಇಲ್ಲವಾದರೆ ಸಾಧ್ಯವಿಲ್ಲ ಎಂದು ಸುಮ್ಮನಾಗುತ್ತಾರೆ.
ಅಂದು ಕಾಲೇಜಿನ ಕೆಲಸ ಮುಗಿಸಿಕೊಂಡು ರಾಯರು ಹೊರಟಿರುತ್ತಾರೆ. ಅದೇ ಸಮಯಕ್ಕೆ ತಮ್ಮ ಮೊಬೈಲ್ಗೆ ಕರೆ ಬರುತ್ತದೆ. ಸಂಖ್ಯೆ ನೋಡಿದಾಗ ಯಾವುದೋ ಅಪರಿಚಿತ ಸಂಖ್ಯೆ ಎನ್ನಿಸಿತು. ಯಾರು ಕರೆ ಮಾಡಿರಬಹುದು ಎಂದುಕೊಂಡೇ ಕರೆ ಸ್ವೀಕರಿಸುತ್ತಾರೆ. "ಹಲೋ, ಮಿ.ಅಚ್ಯುತರಾವ್" ಎಂಬ ಹೆಣ್ಣಿನ ಧ್ವನಿ. "ಹೌದು, ಹೇಳಿ, ನೀವ್ಯಾರೆಂದು ತಿಳಿಯಲಿಲ್ಲ" ಎಂದು ರಾಯರು ಉತ್ತರಿಸುತ್ತಾರೆ. "ನಾನು ಸರೋಜ, ಅಂದು ನಿಮ್ಮ ಮನೆಗೆ ಬಂದಿದ್ದೆ" ಎಂಬ ತನ್ನ ಪರಿಚಯವನ್ನು ಮತ್ತೊಮ್ಮೆ ಹೇಳಿಕೊಳ್ಳುತ್ತಾರೆ ಸರೋಜ. ಆ ಹೆಸರು ಕೇಳಿದ ಕ್ಷಣ ರಾಯರು ಮುಖ ಸಂತಸದಿಂದ ಅರಳುತ್ತದೆ. ತಾನಾಗೆ ಕರೆ ಮಾಡಿದರಲ್ಲ ಎಂಬ ಖುಷಿಯಿಂದ "ಹಾಂ ನೆನಪಿದೆ" ಎಂದು ಹೇಳುತ್ತಾರೆ.
"ತುಂಬಾ ಸಂತೋಷ, ನಾಳೆ ಭಾನುವಾರ, ನಿಮಗೆ ಪುರುಸೊತ್ತಿದೆಯಾ?"
"ಹಾಂ, ನಾಳೆ ಕಾಲೇಜಿಗೆ ರಜವಿದೆ, ಆದ್ದರಿಂದ ನನಗೆ ಅಂತಹುದೇನು ಕೆಲಸವಿಲ್ಲ. ಬೆಳಿಗ್ಗೆ ೧೧:೦೦ ನಂತರ ಸಮಯವಿದೆ. ಹೇಳಿ, ಏನು ಸಮಾಚಾರ?" ಎಂದು ಹೇಳುತ್ತಾರೆ ರಾಯರು ಕುತೂಹಲದಿಂದ. ಅವರ ಮನಸ್ಸು ಸರೋಜಳನ್ನು ಭೇಟಿಯಾಗುವುದನ್ನೇ ಬಯಸುತ್ತಿತ್ತು.
"ಏನಿಲ್ಲ, ನಾಳೆ ಭೇಟಿಯಾಗಿ ಮಾತಾಡೋಣ ಎನಿಸಿತು. ನಿಮ್ಮ ಮೊಬೈಲ್ ಸಂಖ್ಯೆ ತೆಗೆದುಕೊಂಡು ಕರೆ ಮಾಡಿದೆ. ಹೇಳಿ, ನಾಳೆ ಭೇಟಿಯಾಗಬಹುದ?" ಎಂದು ಕೇಳುತ್ತಾಳೆ. ತಕ್ಷಣ ಎರಡನೇ ಯೋಚನೆ ಇಲ್ಲದೆ "ಖಂಡಿತವಾಗಿ, ಹೇಳಿ ಎಲ್ಲಿ ಭೇಟಿಯಾಗೋಣ?" ಎಂದು ರಾಯರು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ.
"ಸರಿ ಹಾಗಾದರೆ, ನಾಳೆ ನೀವು ನನ್ನ ಮನೆಗೆ ಬರಬೇಕು. ಕೂತು ಆರಾಮಾಗೆ ಮಾತಾಡಬಹುದು, ನಿಮ್ಮ ಅಭ್ಯಂತರವಿಲ್ಲದಿದ್ದರೆ" ಎಂದು ರಾಯರನ್ನು ಮನೆಗೆ ಆಹ್ವಾನಿಸುತ್ತಾಳೆ. 
"ಖಂಡಿತವಾಗಿ ಬರುತ್ತೇನೆ, ಅದರಲ್ಲಿ ಅಭ್ಯಂತರವೇನು?" ಎಂದು ಹೇಳಿ ಆಕೆಯ ಮನೆಯ ವಿಳಾಸ ಮತ್ತು ದಾರಿ ತಿಳಿದುಕೊಳ್ಳುತ್ತಾರೆ.
"ಇದು ನನ್ನ ಮೊಬೈಲ್ ನಂಬರ್. ಸೇವ್ ಮಾಡಿಕೊಳ್ಳಿ. ಇನ್ನೊಂದು ಸಲ ಕರೆ ಮಾಡಿದರೆ ನಾನು ಯಾರೆಂದು ಕೇಳಬೇಡಿ" ಎಂದು ತಮಾಷೆ ಮಾಡುತ್ತಾಳೆ. 
ಸರೋಜ ಸಲುಗೆಯಿಂದ ಮಾತಾಡಿದರೂ, ತಾನು ಸಲುಗೆಯನ್ನು ಮುಂದುವರೆಸದೆ "ಖಂಡಿತವಾಗಿ, ನಾಳೆ ೧೨:೦೦ ಹೊತ್ತಿಗೆ ನಿಮ್ಮ ಮನೆಗೆ ಬರುತ್ತೇನೆ" ಎಂದು ಹೇಳಿ ಕರೆಯನ್ನು ಮುಗಿಸಿ ಮನೆಗೆ ಹೋಗುತ್ತಾರೆ.
ಮನೆಗೆ ಹೋದ ರಾಯರ ಮನಸ್ಸು ತುಂಬಾ ಉಲ್ಲಾಸ ಬರಿತವಾಗಿರುತ್ತದೆ. ಅಂತೂ ಎರಡು ವಾರಗಳಾದ ಮೇಲೆ ಕರೆ ಮಾಡಿ, ಭೇಟಿಯಾಗಿ ಎಂದು ಕೇಳಿದರಲ್ಲ ಎಂಬ ಸಂತಸ. ಒಂದು ವಿಧದಲ್ಲಿ ಯಾರಿಗೂ ಹೇಳಿಕೊಳ್ಳಲಾಗದ ಭಾವ ಮನದಲ್ಲಿ ಮೂಡುತ್ತದೆ. ಅವರಾಗೆ ಸಲುಗೆಯಿಂದ ಮಾತಾಡುತ್ತಿದ್ದಾರೆ, ಅದನ್ನು ತಾನು ಹೇಗೆ ಸ್ವೀಕರಿಸಬೇಕು ಮತ್ತು ಹೇಗೆ ಪ್ರತಿಕ್ರಿಯೆ ನೀಡಲಿ ಎಂದು ತಿಳಿಯಲಿಲ್ಲ. ಸ್ನೇಹವನ್ನು ಸಂಪಾದಿಸುವ ವಿದ್ಯೆ ತನಗೆ ತಿಳಿದಿಲ್ಲ ಎಂದು ಮನಸ್ಸು ಹೇಳುತ್ತದೆ. ಅದೇ ಯೋಚನೆಯನ್ನು ಮುಂದುವರೆಸುತ್ತಾ ಸ್ನೇಹ ಒಂದೇ ಅಲ್ಲ ಯಾವುದೇ ವಿಧವಾದ ಸಂಬಂಧವನ್ನು ಸಂಪಾದಿಸುವ ಅಥವಾ ಕಾಪಾಡಿಕೊಳ್ಳುವ ವಿದ್ಯೆ ತನಗೆ ತಿಳಿದಿಲ್ಲ ಎಂದು ತನ್ನ ಬಗ್ಗೆ ಬೇಸರವಾಗುತ್ತದೆ. ಹಾಗೆ ನೋಡಿದರೆ, ತನಗೆ ಹೇಳಿಕೊಳ್ಳುವಂತಹ ಸ್ನೇಹಿತರಾರು ಇಲ್ಲ. ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದ್ಯೋಗಿಗಳೊಡನೆ ಎಷ್ಟು ಬೇಕೊ ಅಷ್ಟೇ ಮಾತು. ಇನ್ನು ಸಂಬಂಧಿಕರ ವಿಷಯಕ್ಕೆ ಬಂದರೆ, ತನಗೆ ತಂದೆ ತಾಯಿ ಬಿಟ್ಟರೆ ಬೇರೆ ಯಾರು ಇಲ್ಲ. ಈಗ ಅವರು ಇಲ್ಲ ಎಂದು ಬೇಸರವಾಗುತ್ತದೆ. 
ಮನಸ್ಸು ಮತ್ತೆ ಸರೋಜರವರ ಕಡೆ ತಿರುಗುತ್ತದೆ. ಅರವಾಗೆ ಸ್ನೇಹವನ್ನು ಬಯಸಿಬಂದಿದ್ದಾರೆ ನೋಡೋಣ, ನನ್ನ ಮನಸ್ಸಿನ ಭಾವನೆಗಳನ್ನು ಇವರೊಂದಿಗೆ ಹೇಳಿಕೊಳ್ಳಬಹುದು. ಹಾಗೆ ಅವರೂ ಕೂಡ ತಮ್ಮ ಬಗ್ಗೆ ಏನಾದರೂ ಹೇಳಬಹುದು ಎಂದು ಯೋಚಿಸುತ್ತಾರೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ತಮ್ಮ ಕೆಲಸಗಳಲ್ಲಿ ತೊಡಗುತ್ತಾರೆ. ಮನಸ್ಸು ಮಾತ್ರ ನಾಳೆ ಸರೋಜರವರ ಭೇಟಿಗಾಗಿ ಕಾಯುತ್ತಿದ್ದೆ ಮತ್ತು ಅದನ್ನೇ ಯೋಚಿಸುತ್ತಿರುತ್ತದೆ.
Comments
Post a Comment