ಅಧ್ಯಾಯ - 5

ಅಂದು ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಸಭೆ ಸೇರಿದ್ದರು. ಪಿ.ಯು. ತರಗತಿಯ ವಿದ್ಯಾರ್ಥಿಗಳು ಈ ವರ್ಷ ಪ್ರವಾಸಕ್ಕೆಂದು ಕೋರಿಕೆ ಸಲ್ಲಿಸಿದ್ದರ ಬಗ್ಗೆ ಚರ್ಚಿಸುತ್ತಿದ್ದರು. ಕೆಲವು ಪ್ರಾಧ್ಯಾಪಕರು ಶೈಕ್ಷಣಿಕ ಪ್ರವಾಸವೆಂದು ಮತ್ತು ಕೆಲವರು ಮನೋರಂಜನಾತ್ಮಕ ಪ್ರವಾಸವೆಂದು ಪ್ರಸ್ತಾಪಿಸಿದ್ದರು. ವಿದ್ಯಾರ್ಥಿಗಳು ಸಹ ಮನೋರಂಜನಾತ್ಮಕ ಪ್ರವಾಸವನ್ನೇ ಬೇಡಿಕೆಯನ್ನಾಗಿ ಸಲ್ಲಿಸಿದ್ದರು. ವಾದ ಪ್ರತಿವಾದದ ನಂತರ ಚಾರಣವೆಂದು ಕೊಡಚಾದ್ರಿಗೆ ಹೋಗುವುದಾಗಿ ತೀರ್ಮಾನಿಸಿದರು. ಆ ಚರ್ಚೆಯಲ್ಲಿ ಭಾಸ್ಕರ ಪಾಲ್ಗೊಂಡಿರಲಿಲ್ಲ. ತದ ನಂತರ ಅಮೃತಾ "ಅಪ್ಪಾಜಿ, ಈ ದಿನ ನಡೆದ ಚರ್ಚೆಯಲ್ಲಿ ಎಲ್ಲರೂ ಬಂದಿದ್ದರೂ ಭಾಸ್ಕರ್ ರವರು ಬಂದಿರಲಿಲ್ಲ. ಇದು ನನಗೇನೋ ಸರಿ ಕಾಣುತ್ತಿಲ್ಲ. ಇದು ಒಂದು ತರಹ ಬೇಜವಾಬ್ದಾರಿ ವರ್ತನೆ ಎಂದು ನನಗನಿಸುತ್ತದೆ" ಎಂದು ರಾಯರ ಎದುರಿಗೆ ಭಾಸ್ಕರನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. "ಹೌದು, ಆದರೆ, ಅವನು ಬರದಿದ್ದೆ ಒಳ್ಳೆದಾಯಿತು. ಯಾಕೆಂದರೆ ಚರ್ಚೆಗೆ ಅಂತ ಆತ ಬಂದರೆ ಆತನ ಮನಸ್ಸಿನಲ್ಲಿ ಒಂದು ತೀರ್ಮಾನವಿರುತ್ತದೆ. ಆ ಚರ್ಚೆಯಲ್ಲಿ ಅವನ ಇಚ್ಚೆಗೆ ವಿರುದ್ದವಾಗಿ ತೀರ್ಮಾನವಾದರೆ ಆತ ಸಹಿಸುವುದಿಲ್ಲ" ಎಂದು ರಾಯರು ಹೇಳುತ್ತಾರೆ. 

ಬೇಸರವಾಗುತ್ತದೆ ಎಂದು ಚರ್ಚೆಗೆ ಬರದಿದ್ದರೆ ಅದು ಸರಿ ಕಾಣುವುದಿಲ್ಲ. ಅದು ಒಂದು ರೀತಿ ಶಿಸ್ತು ಉಲ್ಲಂಘನೆ ಆದ ಹಾಗೆ ಎಂದು ನನ್ನ ಅನಿಸಿಕೆ ಅಥವಾ ನನ್ನ ಮಾತೆ ನಡೆಯಬೇಕು ಎಂಬ ಧೋರಣೆ ಎಂಬುದು ಅಮೃತಾಳ ಮಾತು. ರಾಯರು ಸಹ ಅಮೃತಾಳ ಮಾತನ್ನು ಒಪ್ಪಿದರೂ ಅಸಹಾಯಕರಾಗಿದ್ದರು. ಆತ ಬರದಿದ್ದಕ್ಕೆ ಕಾರಣ ಮಾತ್ರ ಕೊಡಬಲ್ಲವರಾಗಿದ್ದರು. ಕೆಲ ಹೊತ್ತಿನ ನಂತರ ಅಮೃತಾ "ಅಂತೂ ನಿಮ್ಮ ಶಿಷ್ಯನ ಪ್ರತಿ ನಡವಳಿಕೆಗೂ ಒಂದು ಕಾರಣವಿದೆ ಎಂದಾಯಿತು, ಹೋಗಲಿಬಿಡಿ. ಅವರು ಪ್ರವಾಸಕ್ಕಾದರೂ ಬರುತ್ತಾರೆ ತಾನೆ? ಇಷ್ಟ ಇಲ್ಲದಿದ್ದರೂ ಕರ್ತವ್ಯವೆಂದಾದರೂ ಬರಬೆಕಲ್ಲವೇ" ಎಂದು ಸಿಟ್ಟಿನಿಂದಲೇ ಹೇಳುತ್ತಾಳೆ. ನಾನೊಂದು ಮಾತು ಹೇಳುತ್ತೇನೆ ಬಂದರೂ ಬರಬಹುದು ಆದರೆ, ಖಚಿತವಾಗಿ ಹೇಳಲಾರೆ. "ಬೇಡ ಅಪ್ಪಾಜಿ, ನೀವು ಸದರಕೊಟ್ಟಷ್ಟು ಹೆಚ್ಚು ಮಾಡುತ್ತಾರೆ, ಕರೆಯಬೇಡಿ" ಎಂದು ಅಸಮಾಧಾನ ವ್ಯಕ್ತಪಡಿಸುತ್ತಾಳೆ ಅಮೃತಾ. "ಈ ಅಸಮಾಧಾನವನ್ನು ನೇರವಾಗಿ ಅವನಿಗೆ ತೋರಿಸು, ಅಗ ನಿನಗೆ ದಾರಿ ಕಾಣಬಹುದು. ನೋಡೋಣ ಹೇಗೆ ಪ್ರತಿಕ್ರಯಿಸುತ್ತಾನೆ" ಎಂದು ರಾಯರು ಸವಾಲು ಹಾಕುವಂತೆ ಹೇಳುತ್ತಾರೆ. 

ಅದೇ ಸರಿ ಎಂದು ಅನ್ನಿಸಿ ಇಬ್ಬರೂ ಗ್ರಂಥಾಲಯಕ್ಕೆ ಹೋಗುತ್ತಾರೆ. ಅಲ್ಲಿ ಭಾಸ್ಕರ ಪುಸ್ತಕವೊಂದನ್ನು ಓದುತ್ತಾ ತನ್ನದೇ ಲೋಕದಲ್ಲಿ ಮಗ್ನನಾಗಿರುತ್ತಾನೆ. ಅವನನ್ನು ನೋಡಿದ ರಾಯರಿಗೆ ಆತ ಚರ್ಚೆಗೆ ಬಂದಿರಲಿಲ್ಲ ಎಂದು ಸಿಟ್ಟು ಬರುತ್ತದೆ. ಅವನ ಬಳಿ ಕೂತುಕೊಂಡು "ಎಲ್ಲರೂ ಚರ್ಚೆಗೆ ಬಂದಿದ್ದರು, ನೀನೊಬ್ಬ ಬಂದಿರಲಿಲ್ಲ ಯಾಕೋ? ಅಲ್ಲಿ ನಾವೆಲ್ಲ ಕೂತು ಅರ್ಥವಿಲ್ಲದ ಮಾತಾಡುತ್ತಿದ್ದೇವೆ ಎಂಬಂತೆ. ಕೊಬ್ಬು ತಾನೆ ನಿನ್ನದು" ಎಂದು ರೇಗುತ್ತಾರೆ ರಾಯರು. "ಹೌದು ಸರ್, ನನಗೆ ಕೊಬ್ಬು. ನನ್ನ ಮಾತಿಗೆ ಒಂದು ಚೂರು ಬೆಲೆ ಇಲ್ಲ ಎಂದ ಮೇಲೆ ಅಲ್ಲಿಗೆ ಬಂದು ಏನು ಮಾಡಲಿ? ನಿಮಗೆಲ್ಲಾ ಹೇಗೆ ಬೇಕೋ ಹಾಗೆ ಮಾಡಿ, ನನ್ನ ಕೇಳೋದು ಏನಿಲ್ಲ. ನಾ ಏನು ಮಾಡಬೇಕು ಅದನ್ನ ಹೇಳಿ ಮಾಡುತ್ತೇನೆ" ಎಂದು ಉತ್ತರಿಸಿ ಎದುರು ಕೂತಿದ್ದಾರೆಂಬ ಗೌರವವೂ ಇಲ್ಲದೇ ತನ್ನ ಪಾಡಿಗೆ ಓದನ್ನು ಮುಂದುವರೆಸುತ್ತಾನೆ. ಇವನ ವರ್ತನೆಯಿಂದ ಅಸಮಧಾನಗೊಂಡ ರಾಯರು ಕೋಪವನ್ನು ತೋರಿಸಿಕೊಳ್ಳದೆ "ಸರಿ ಬರೋದು ಬೇಡ. ಅಲ್ಲಿ ಏನು ನಡೆಯಿತು ಎಂದು ಕೇಳುವ ಸೌಜನ್ಯವೂ ಇಲ್ಲವಲ್ಲೋ ನಿನಗೆ" ಎಂದು ಕ್ಷಿಣಿಸಿದ ಧ್ವನಿಯಲ್ಲಿ ಹೇಳುತ್ತಾರೆ. ರಾಯರ ಮಾತು ಭಾಸ್ಕರನಿಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡುತ್ತದೆ. ತನ್ನ ತಪ್ಪು ಆತನಿಗೆ ಕಾಣಿಸುತ್ತಿಲ್ಲ. ಅದೇ ಭಾವದಲ್ಲಿ "ಅದು ಏನು ನಡೆಯಿತು ಹೇಳಿ ಸರ್. ಯಾವ ಕಾರಣಕ್ಕೆ ಮೀಟಿಂಗ್ ಇತ್ತು? ಏನು ತೀರ್ಮಾನ ಮಾಡಿದಿರಿ?" ಎಂದು ಕೇಳುತ್ತಾನೆ. ನಡೆದ ವಿಚಾರವನ್ನೆಲ್ಲಾ ರಾಯರು ಆಸ್ತೆಯಿಂದ ಶಿಷ್ಯನಿಗೆ ತಿಳಿಸುತ್ತಾರೆ. ರಾಯರ ಮಾತನ್ನು ಕೇಳಿಸಿಕೊಂಡು ಒಂದು ಸಲ "ಸರಿ" ಎಂದು ಹೇಳಿ ಓದುವುದರಲ್ಲಿ ಮಗ್ನನಾಗುತ್ತಾನೆ. ಇನ್ನು ಮಾತು ಮುಂದುವರೆಸುವುದು ಸರಿ ಕಾಣುವುದಿಲ್ಲ ಎಂದು ರಾಯರು ಅಲ್ಲಿಂದ ಹೊರಡುತ್ತಾರೆ. ಅವರು ಹೊರಟಿದ್ದನ್ನು ಸಹ ಭಾಸ್ಕರ ಗಮನಿಸುವುದಿಲ್ಲ.

ರಾಯರ ಮಾತು ಮತ್ತು ಭಾಸ್ಕರನ ನಡುವಳಿಕೆಯನ್ನು ಅಮೃತಾ ಅಲ್ಲೇ ಇದ್ದು ಗಮನಿಸುತ್ತಿರುತ್ತಾಳೆ. ಹೊರ ಬಂದ ರಾಯರು ಅಮೃತಾಳೊಂದಿಗೆ ಕ್ಯಾಂಟಿನಿಗೆ ಹೋಗುತ್ತಾರೆ. ರಾಯರು ಮೌನವಹಿಸುತ್ತಾರೆ. ಅಮೃತಾಳಿಗೆ ಈ ಮೌನ ಸಹನಿಯವಾಗಲಿಲ್ಲ. ಭಾಸ್ಕರನ ನಡುವಳಿಕೆಯಿಂದ ಕೋಪಗೊಂಡಿದ್ದ ಅವಳು ರಾಯರ ಮೌನದಿಂದ ಮತ್ತಷ್ಟು ಸಿಡಿಮಿಡಿಗೊಳ್ಳುತ್ತಾಳೆ. ಅದೇ ಧ್ವನಿಯಲ್ಲಿ ರಾಯರನ್ನು "ಅಪ್ಪಾಜಿ ಆತ ಹೀಗೆ ಅಗೌರವ, ಅಹಂಕಾರದಿಂದ ಮಾತಾಡುತ್ತಿದ್ದರೂ ನೀವು ಏನು ಹೇಳದೆ ಮೌನವಾಗಿ ಬಂದದ್ದು ಯಾಕೆ? ಆತ ಏನು ಆಕಾಶದಿಂದ ಬಂದವನೆ? ನೀವೇನೋ ಆತ ನಿಮ್ಮ ಶಿಷ್ಯ ಎಂದು ಹೇಳಿಕೊಳ್ಳುತ್ತೀರಿ. ಆದರೆ, ಗುರು ಎಂಬ ಭಾವವೇ ಆತನಿಗಿಲ್ಲವಲ್ಲ. ಆತನಲ್ಲಿ ಏನು ವಿಶೇಷತೆ ಇದೆ ಎಂದು ಅವನನ್ನು ಹಚ್ಚಿಕೊಂಡಿದ್ದೀರ ನನಗಂತೂ ಅರ್ಥವಾಗುತ್ತಿಲ್ಲ. ಅದರ ಬದಲು ನಿಮ್ಮ ಮನೆಯವರನ್ನು ಚೆನ್ನಾಗಿ ನೋಡಿಕೊಂಡಿರಬಹುದಿತ್ತು" ಎಂದು ಹೇಳಿ ಸುಮ್ಮನೆ ಕೂರುತ್ತಾಳೆ. ಮನಸ್ಸಿಗೆ ದುಃಖವಾಗಿದ್ದರೂ ಹೊರ ತೋರಿಸಿಕೊಳ್ಳದೆ ಅಮೃತಾಳನ್ನು ಒಂದು ಸಾರಿ ನೋಡಿ ನಗುತ್ತಾರೆ. ಆ ನಗುವಿನ ಅರ್ಥವಾಗದೆ ರಾಯರನ್ನು ಈ ನಗುವಿನ ಅರ್ಥವೇನು? ಎನ್ನುವಂತೆ ನೋಡುತ್ತಾಳೆ.  

ಅಮೃತಾ, ನಿನ್ನಿಂದ ಈ ಮಾತನ್ನು ನಿರೀಕ್ಷಿಸಿರಲಿಲ್ಲ. ಆತ ಒರಟ ಹೌದು, ನನ್ನೊಂದಿಗೆ ಗೌರವವಿಲ್ಲದೇ ನಡೆದುಕೊಂಡ ಹೌದು. ಆದರೆ, ಆತನಲ್ಲಿ ಒಂದು ಮುಗ್ಧತೆಯಿದೆ, ಸಮಾಜ, ಸಂಸ್ಕೃತಿಯ ಮೇಲೆ ಕಾಳಜಿಯಿದೆ, ಅದಕ್ಕಾಗಿ ಕೆಲವು ಕೆಲಸಗಳನ್ನೂ ಮಾಡುತ್ತಾನೆ. ಆದರೆ, ಅವನ ಆ ಒಳ್ಳೆಯ ವ್ಯಕ್ತಿತ್ವ ಅನಾವರಣಗೊಳ್ಳುವಂತಹ ವೇದಿಕೆ ಸಿಗುತ್ತಿಲ್ಲ. ನಮ್ಮ ಸುತ್ತಾಮುತ್ತ ನಡೆಯುತ್ತಿರುವ ಅನ್ಯಾಯ, ಅಧರ್ಮವನ್ನು ನೋಡಿಕೊಂಡು ಆತನಿಗೆ ಏನು ಮಾಡಲಾಗುತ್ತಿಲ್ಲವೆಂಬ ಚಡಪಡಿಕೆ. ಏನು ಸಾಧಿಸಿಲ್ಲ ಎಂಬ ಹತಾಶೆ ಇದೆ. ಆತನಲ್ಲಿ ಶಕ್ತಿಯೂ ಇದೆ ಅದರೆ, ಅದು ಹೊರಬರುತ್ತಿಲ್ಲ. ಹೊರತರಲು ಆಗುತ್ತಿಲ್ಲ. ಅದೆ ಕಾರಣದಿಂದ ಆತನ ಕೋಪ ಈ ರೀತಿ ಹೊರಬರುತ್ತದೆ. ಅದು ಸರಿಯಿಲ್ಲ, ಒಪ್ಪುವಂತಹ ಮಾತು ಆದರೆ, ಆತನನ್ನು ಸರಿ ಮಾಡುವುದು ಗುರುವಾದ ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ನಿಟ್ಟುಸಿರು ಬಿಟ್ಟು ರಾಯರು ಮೌನಿಯಾಗುತ್ತಾರೆ. ಮಾತಾಡಲು ಯತ್ನಿಸಿದ ಅಮೃತಾಳನ್ನು ಸುಮ್ಮನಿರುವಂತೆ ತಿಳಿಸಿ ಗ್ರಂಥಾಲಯದ ಕಡೆ ತಿರುಗಿ ಸುಮ್ಮನೆ ಕೂರುತ್ತಾರೆ. ತಾನು ಹೇಳಿದ್ದರಲ್ಲಿ ಏನು ತಪ್ಪಿಲ್ಲ ಎಂಬ ಭಾವ ಅಮೃತಾಳದ್ದು. ರಾಯರು ಮಾತನ್ನು ಮುಂದುವರೆಸಲಿ ಎಂದು ಸುಮ್ಮನಾಗುತ್ತಾಳೆ. ೫ ನಿಮಿಷದ ನಂತರ ರಾಯರು "ಹೆಂಡತಿ ಮಗನನ್ನು ನೋಡಿಕೊಳ್ಳಬಹುದಿತ್ತಲ್ಲ ಎಂದೆ. ಹೌದು, ನೀನು ಹೇಳುವುದು ಸತ್ಯ. ಕೆಲಸಕ್ಕೆಂದು ನಾನು ದೂರ ಇದ್ದದ್ದು ನನ್ನ ತಪ್ಪು. ಆದರೆ, ಹದ್ದು ಮೀರಿ ಹೋಗಿದ್ದಾರೆ. ಅವರಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ, ಆದ್ದರಿಂದ ಅವರನ್ನು ನೋಡಿಕೊಳ್ಳುವುದಾಗಲಿ, ಬದಲಾಯಿಸುವುದಾಗಲಿ ನಾನು ಮಾಡುವುದಿಲ್ಲ, ಮಾಡಿದರೂ ಅದು ವ್ಯರ್ಥ ಪ್ರಯತ್ನವಾಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ನಾನು ಪ್ರಯತ್ನವಿಲ್ಲದೇ ಈ ಅಭಿಪ್ರಾಯಕ್ಕೆ ಬಂದಿಲ್ಲ ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು". ಮನೆಯವರನ್ನು ನೆನೆಸಿಕೊಂಡು ರಾಯರು ಕೋಪಿಸಿಕೊಂಡು ಮತ್ತೆ ಮೌನಿಯಾಗುತ್ತಾರೆ. 

ರಾಯರ ಕೋಪವನ್ನು ಅರ್ಥೈಸಿಕೊಂಡ ಅಮೃತಾ ಏನನ್ನೋ ಹೇಳಲು ಮುಂದಾಗುತ್ತಾಳೆ. ಮತ್ತೊಮ್ಮೆ ಅವಳನ್ನು ತಡೆದು ರಾಯರು - "ನಿನ್ನ ಮಾತಿನ ಅರ್ಥವೇನು ಎಂಬುದು ನನಗೆ ಗೊತ್ತು. ಆದರೆ, ಮನೆಯವರನ್ನು ನೆನೆಸಿಕೊಂಡರೆ ನನಗೆ ಕೋಪ ಬರುತ್ತದೆ. ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಭಾಸ್ಕರನನ್ನು ತಿದ್ದುವ ಹಿಂದೆ ಆತ ಒಬ್ಬ ಒಳ್ಳೆ ಪ್ರಜೆಯಾಗುತ್ತಾನೆ, ಸುತ್ತಮುತ್ತಲಿನ ಜನಕ್ಕೆ ಏನಾದರೂ ಒಳ್ಳೆ ಕೊಡುಗೆ ನೀಡುತ್ತಾನೆ ಎಂಬ ನಂಬಿಕೆ, ಉದ್ದೇಶವಿದೆ. ನಿನಗೆ ಸಾಧ್ಯವಾದರೆ ಸಹಾಯ ಮಾಡು, ಇಲ್ಲವಾದಲ್ಲಿ ನನ್ನ ಬಲವಂತವೇನಿಲ್ಲ. ನಾನೇ ಮತ್ತೊಮ್ಮೆ ಪ್ರಯತ್ನಿಸುತ್ತೇನೆ" ಎಂದು ರಾಯರು ಕೋಪದಿಂದ ನುಡಿಯುತ್ತಾರೆ. ಏನು ಮಾತಾಡಬೇಕೆಂದು ತಿಳಿಯದೆ ಅಮೃತಾ ತಲೆ ತಗ್ಗಿಸಿ ಕೂರುತ್ತಾಳೆ, ರಾಯರ ನೇರ ಮಾತುಗಳು ಅವಳ ಮನಸ್ಸನ್ನು ತಾಗಿತ್ತು. ಒಂದು ತರಹ ತಪ್ಪಿತಸ್ಥ ಭಾವ ಮನಸ್ಸನ್ನು ಆವರಿಸಿತು. ತಾನು ಮಾತಾಡಿದ ರೀತಿ ಸರಿಯಿಲ್ಲವೆಂದು ಅನ್ನಿಸಿ ಮನಸ್ಸಿಗೆ ಹಿಂಸೆಯಾಗುತ್ತಿತ್ತು. ಕ್ಷಮೆ ಕೇಳುವ ಎಂದುಕೊಂಡು "ಅಪ್ಪಾಜಿ, ನಾನು ಈ ರೀತಿ ಮಾತಾಡಬಾರದಿತ್ತು. ನಿಮ್ಮೊಂದಿಗೆ ಆತ ನಡೆದುಕೊಂಡ ರೀತಿ ನೋಡಿ ನನಗೆ ಬೇಸರ, ಕೋಪ ಬಂದಿತ್ತು. ಆದ್ದರಿಂದ ಆವೇಶದಲ್ಲಿ ಮಾತಾಡಿದೆ. ದಯವಿಟ್ಟು ಕ್ಷಮಿಸಿ. ನೀವು ಹೇಳಿದ ಹಾಗೆ ಕೇಳುತ್ತೇನೆ. ಅಂದು ನಾನು ಹೇಳಿದ ಹಾಗೆ ಭಾಸ್ಕರನನ್ನು ಬದಲಾಯಿಸಲು ಪ್ರಯತ್ನಪಡುತ್ತೇನೆ" ಎಂದು ಕ್ಷಮೆ ಕೇಳುತ್ತಾಳೆ. ಬೇಸರಗೊಂಡಿದ್ದ ರಾಯರು ಏನು ಹೇಳಲಾಗದೆ "ನನಗೆ ಏನು ತಿಳಿಯುತ್ತಿಲ್ಲ. ನಿನಗೆ ಹೇಗೆ ತೋಚತ್ತೋ ಹಾಗೆ ಮಾಡು. ನನ್ನ ಮಾತಿಂದ ಏನು ಬೇಸರ ಮಾಡಿಕೊಳ್ಳಬೇಡ, ನಾನು ಬರುತ್ತೇನೆ" ಎಂದು ಅಲ್ಲಿಂದ ರಾಯರು ಹೊರಡುತ್ತಾರೆ. ತನಗಾಗಿದ್ದ ಬೇಸರದಿಂದಾಗಿ ಮನೆಗೆ ಹೋಗಿ ಊಟವನ್ನು ಮಾಡದೆ ಮಲಗುತ್ತಾರೆ. 

ಕೋಣೆಗೆ ಹಿಂತಿರುಗಿದ ಅಮೃತಾಳಿಗೆ ಅಸಮಾಧಾನ ಕಾಡುತ್ತಿತ್ತು. ರಾಯರ ಮೇಲೆ ವಿಧೇಯತೆ ಇಲ್ಲದೆ ರೇಗಿದ್ದು ಅವಳಿಗೆ ತಪ್ಪು ಎನ್ನಿಸುತ್ತಿತ್ತು. ತಾನು ಯಾಕೆ ಆ ರೀತಿ ವರ್ತಿಸಿದೆ ಎಂದು ಮನಸ್ಸು ವಿಮರ್ಶೆಯಲ್ಲಿ ತೊಡಗಿತು. ಯಾವತ್ತೂ ಯಾರ ಮೇಲೂ ಸಿಟ್ಟು ಮಾಡಿಕೊಳ್ಳದ ಅವಳು ಇಂದಿನ ತನ್ನ ವರ್ತನೆಯಿಂದಾಗಿ ಮನಸ್ಸಿಗೆ ಘಾಸಿಯಾಗಿತ್ತು. ರಾಯರಿಗೆ ನೋವು ಮಾಡಿದ್ದು ಆಕೆಯನ್ನು ಕಾಡುತ್ತಿತ್ತು. ತಾನು ಹಾಗೆ ಮಾತಾಡಬಾರದಿತ್ತು ಎಂದು ಮನಸ್ಸು ಮತ್ತೆ ಮತ್ತೆ ಆರೋಪಿಸುತ್ತಿತ್ತು. ಬೇರೇನು ಮಾಡಲಾಗದೆ ಭಾಸ್ಕರನ ಬಗ್ಗೆ ಯೋಚಿಸುತ್ತಾಳೆ. ಗುರುಗಳು ಎಂಬ ಗೌರವವೂ ಇಲ್ಲದೆ ಮಾತಾಡಿದನಲ್ಲಾ, ಎಷ್ಟು ಕೊಬ್ಬಿರಬೇಡ? ಅಪ್ಪಾಜಿಯವರು ಆತನನ್ನು ಮಗ ಅಂತ ತಿಳಿದಿದ್ದಾರೆ. ಆದರೆ, ಆತ ನೋಡಿದರೆ ಛೇ...! ಆ ಕೋಪದಲ್ಲಿ ಹೋಗಿ ಆತನ ಮೇಲೆ ರೇಗಬೇಕು ಎಂದು ಆಕೆಗೆ ಅನಿಸುತ್ತದೆ. ತನಗೆ ಆತನ ಮೇಲೆ ರೇಗಲು ಸಾಧ್ಯವಾಗಲಿಲ್ಲ ಅದರ ಬದಲು ಅಪ್ಪಾಜಿ ಮೇಲೆ ರೇಗಿದೆ. ತನಗೆ ಬುದ್ದಿಯಿಲ್ಲ. ನಾನೂ ಒರಟಾಗಿ ವರ್ತಿಸಿದೆ ಎಂದು ಅನಿಸುತ್ತದೆ. ಒರಟು ಎಂದ ತಕ್ಷಣ ಭಾಸ್ಕರನ ಬಗ್ಗೆ ಮತ್ತೊಂದು ರೀತಿ ಯೋಚಿಸಲು ಶುರುಮಾಡುತ್ತಾಳೆ. ತಾನು ಕೆಲವು ಕ್ಷಣ ಆತನ ಮಾತು ಕೇಳಿ ಕೋಪಗೊಂಡು ಮತ್ತೊಬ್ಬರ ಮೇಲೆ ರೇಗುವಂತಾಯಿತು. ಎಲ್ಲರ ಮೇಲೆ ರೇಗುತ್ತಾ ಒರಟಾಗಿ ನಡೆದುಕೊಳ್ಳುತ್ತಿರುವ ಭಾಸ್ಕರನ ಮನಸ್ಸು ಯಾವುದಾದರು ಒತ್ತಡಕ್ಕೆ ಒಳಗಾಗಿರಬಹುದ? ಆತ ಎಷ್ಟು ಹಿಂಸೆ ಅನುಭವಿಸುತ್ತಿರಬಹುದು? ಅದೇ ಕಾರಣದಿಂದ ಈ ರೀತಿ ವರ್ತಿಸುತ್ತಿರಬಹುದ? ಎಂಬ ಪ್ರಶ್ನೆಗಳು ಮೂಡುತ್ತದೆ. ಈ ದಿಕ್ಕಿನಲ್ಲಿ ಯೋಚಿಸಿದಾಗ ಹೌದೆನ್ನಿಸಿ ಭಾಸ್ಕರನ ಬಗ್ಗೆ ಕರುಣೆ ಉಂಟಾಗುತ್ತದೆ. ಆತನಿಗೆ ಹೇಗೆ ಅನ್ನಿಸುತ್ತಿರಬಹುದು? ಪಾಪ ಎನ್ನಿಸುತ್ತದೆ. ದೂರದಿಂದ ನೋಡಿದರೆ ಗುಲಾಬಿ ಹೂವಂತೆ ಶಾಂತವಾಗಿರುವ ಮುಖ. ಆದರೆ, ಸ್ವಭಾವ ಹೂವಿನೊಟ್ಟಿಗಿರುವ ಮುಳ್ಳಿನಂತೆ. ವ್ಯತ್ಯಾಸವಿಷ್ಟೇ ವಾಸ್ತವದಲ್ಲಿ ಮುಳ್ಳು ಹೂವನ್ನು ರಕ್ಷಿಸಿದರೆ ಇಲ್ಲಿ ಆತನ ಮುಳ್ಳಿನಂತಹ ಸ್ವಭಾವ ಗುಲಾಬಿಯಂತಹ ಬದುಕನ್ನು ಹಾಳು ಮಾಡುತ್ತಿದೆ. ನಿಜಕ್ಕೂ ಇದು ಬೇಸರದ ಸಂಗತಿ. ಆತನೂ ಎಲ್ಲರಂತೆ ಬದುಕುವಂತಾದರೆ ಸರಿ ಅನಿಸುತ್ತದೆ. ಮರುಕ್ಷಣ ಹೇಗೆ? ಎಂಬ ಪ್ರಶ್ನೆ ಮನಸ್ಸನ್ನು ಮತ್ತೆ ಆವರಿಸುತ್ತದೆ. ಎಷ್ಟು ಯೋಚಿಸಿದರೂ ಉತ್ತರವಿಲ್ಲ. ಅದೇ ಗೊಂದಲ, ಬೇಸರದೊಂದಿಗೆ ದಿನ ಕಳೆಯುತ್ತದೆ. 

ಅದೊಂದು ದಿವಸ ಎಂ.ಎಸ್.ಸಿ ವಿಭಾಗದಲ್ಲಿ ಶಿಕ್ಷಕರ ಕೊಠಡಿಯ ಹತ್ತಿರ ವಿಚಿತ್ರವಾದ ದೃಶ್ಯ. ಎಂ.ಎಸ್.ಸಿ. ವ್ಯಾಸಂಗ ಮಾಡುತ್ತಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳಿಬ್ಬರು - ಗೌತಮ, ಪ್ರಿಯ ಮತ್ತವರ ಮನೆಯವರು ಅಲ್ಲಿದ್ದರು. ಪ್ರಿಯ ಮತ್ತು ಗೌತಮ ೨-೩ ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ಕಾಲೇಜಿನಲ್ಲಿ ಅನೇಕರಿಗೆ ತಿಳಿದಿತ್ತು. ಶಿಕ್ಷಕರ ವಲಯಕ್ಕೂ ಈ ವಿಚಾರ ಇತ್ತೀಚೆಗೆ ತಿಳಿದಿತ್ತು. ಈ ವಿಚಾರ ಅವರಿಬ್ಬರ ಮನೆಗಳಲ್ಲಿ ತಿಳಿದು, ಅಸಮಾಧಾನ ಮೂಡಿ, ಕಾಲೇಜಿನ ತನಕ ವಿಷಯ ಬಂದಿತ್ತು. ಹಾಗೆ ನೋಡಿದಲ್ಲಿ ಹಣಕಾಸಿನ ಸ್ಥಿತಿಯಲ್ಲಿ ಇಬ್ಬರಲ್ಲೂ ಅಂತಹುದೇನು ಅಂತರವಿರಲಿಲ್ಲ. ಅಥವಾ ಜಾತಿ ವಿಷಯದಲ್ಲೂ ವ್ಯತ್ಯಾಸವೇನು ಇರಲಿಲ್ಲ. ಆದರೆ, ಇಬ್ಬರ ಮನೆಯಲ್ಲೂ ಪ್ರೀತಿ, ಪ್ರೇಮದ ಬಗ್ಗೆ ತೀವ್ರ ವಿರೋಧವಿತ್ತು. ಪ್ರಿಯ ಮನೆಯಲ್ಲಿ ಗೌತಮನ ಮನೆಯಲ್ಲಿದ್ದಷ್ಟು ವಿರೋಧವಿರಲಿಲ್ಲ. ಮಕ್ಕಳ ಭವಿಷ್ಯ ಮುಖ್ಯ ಮತ್ತು ಮದುವೆ ವಿಚಾರದಲ್ಲಿ ತಮ್ಮ ಮಾತನ್ನೇ ಕೇಳಬೇಕು ಎಂಬ ಮನಸ್ಥಿತಿ ಇಬ್ಬರ ಮನೆಯವರದು. ಇವರುಗಳ ಪ್ರೀತಿ ವಿಚಾರವಾಗಿ ಹಿರಿಯ ಪ್ರಾಧ್ಯಪಕರೊಂದಿಗೆ ವಾದ ನಡೆಯುತ್ತಿತ್ತು. ಪ್ರಿಯ ಮತ್ತು ಗೌತಮ ಏನು ಹೇಳಲಾಗದೆ ಸುಮ್ಮನೆ ನಿಂತಿದ್ದರು. ಇದನ್ನೆಲ್ಲ ಅಮೃತಾ ರಾಯರ ಬಳಿ ನಿಂತು ಗಮನಿಸುತ್ತಾಳೆ. ಅಮೃತಾ ಬಂದಿದ್ದನ್ನು ಗಮನಿಸಿದ ರಾಯರು ಸಹಾಯಕನಿಗೆ ಭಾಸ್ಕರನನ್ನು ಕರೆಯಲು ಹೇಳುತ್ತಾರೆ. ಈ ಮಾತನ್ನು ಕೇಳಿದ ಅಮೃತಾಳಿಗೆ ಆಶ್ಚರ್ಯವಾಗಿ, ಪ್ರಶ್ನಾರ್ಥಕ ದೃಷ್ಟಿಯಲ್ಲಿ ರಾಯರನ್ನು ನೋಡುತ್ತಾಳೆ. ರಾಯರು ಸಮಾಧಾನದಿಂದ "ನೋಡುತ್ತಿರು" ಎಂದು ಹೇಳಿ ಶಿಷ್ಯನಿಗಾಗಿ ಕಾಯುತ್ತಾರೆ. ಗೌತಮನ ತಂದೆ "ಏನೇ ಆಗಲಿ ನಾನು ಇವರುಗಳ ಪ್ರೀತಿಯನ್ನು ಒಪ್ಪುವುದಿಲ್ಲ" ಎಂದು ಖಡಾಖಂಡಿತವಾಗಿ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸುತ್ತಾರೆ. ಅಷ್ಟರಲ್ಲಿ ಭಾಸ್ಕರ ಅಲ್ಲಿಗೆ ಬರುತ್ತಾನೆ.

ಕೊಠಡಿಗೆ ಬರುತ್ತಿದ್ದ ಹಾಗೆ ಈ ಮಾತನ್ನು ಕೇಳಿದ ಭಾಸ್ಕರ ಯಾರು ಈ ಮಾತುಗಳನ್ನು ಆಡಿದರು ಎಂದು ನೋಡುತ್ತಾನೆ. ಅಲ್ಲಿ ನೆರೆದಿರುವವರನ್ನು ನೋಡಿದ ಮೇಲೆ "ಎಲ್ಲರ ಕಥೆಯೂ ಅಷ್ಟೆ" ಎಂದುಕೊಂಡು ಒಳಗೆ ಬರುತ್ತಾನೆ. ಭಾಸ್ಕರನನ್ನು ನೋಡುತ್ತಿದ್ದ ಹಾಗೆ ಗೌತಮ ಮತ್ತು ಪ್ರಿಯ ಅವನ ಬಳಿ ಹೋಗುತ್ತಾರೆ. "ಸರ್, ಮನೆದಲ್ಲಿ ವಿಷಯ ಗೊತ್ತಾಗಿದೆ, ಒಪ್ಪುತ್ತಿಲ್ಲ. ಹೀಗೆ ಆದರೆ, ನಾವು ನಮ್ಮ ಪಾಡಿಗೆ ಮದುವೆಯಾಗಿ ಯಾರಿಗೂ ತೊಂದರೆ ಕೊಡದೆ ಇದ್ದು ಬಿಡುತ್ತೇವೆ" ಎಂದು ದೃಢವಾಗಿ ಹೇಳುತ್ತಾನೆ ಗೌತಮ. ಈ ಮಾತನ್ನು ಕೇಳಿದ ಗೌತಮನ ತಂದೆಗೆ ಕೋಪ ನೆತ್ತಿಗೇರಿದಂತಾಗಿ ಮಗನ ಮೇಲೆ ಕೈ ಮಾಡಲು ಮುಂದಾಗುತ್ತಾರೆ. ಅದಕ್ಕೆ ಭಾಸ್ಕರ ಅಡ್ಡ ಬರುತ್ತಾನೆ. ಪ್ರಿಯ ಮತ್ತು ಗೌತಮ ಎರಡು ಹೆಜ್ಜೆ ಹಿಂದೆ ತೆರಳುತ್ತಾರೆ. ಭಾಸ್ಕರ ತಾಳ್ಮೆಯಿಂದ "ಸರ್, ಸಮಾಧಾನ ಮಾಡ್ಕೊಳ್ಳಿ ವಯಸ್ಸಿಗೆ ಬಂದಿರುವ ಮಕ್ಕಳ ಮೇಲೆ ಈ ರೀತಿ ವರ್ತಿಸೋದು ಸರಿ ಕಾಣಲ್ಲ. ಕೂತು ಮಾತಾಡೋಣ. ಎಲ್ಲಾ ಸಮಸ್ಯೆಗೂ ಒಂದು ಪರಿಹಾರವಿರುತ್ತದೆ" ಎಂದು ಗೌತಮನ ತಂದೆಯನ್ನು ಸಮಾಧಾನ ಹೇಳುತ್ತಾನೆ. ಭಾಸ್ಕರನ ಈ ವರ್ತನೆಯನ್ನು ನೋಡಿ ಅಮೃತಾಳಿಗೆ ಆಶ್ಚರ್ಯವಾಗುತ್ತದೆ. ಏನು ನಡೆಯುತ್ತದೆ ಎಂಬುದನ್ನು ಮರೆತು ಭಾಸ್ಕರನನ್ನೇ ಒಂದು ಹೊಸ ವ್ಯಕ್ತಿಯನ್ನಾಗಿ ನೋಡುತ್ತಾ ನಿಲ್ಲುತ್ತಾಳೆ. 

ಒಂದೆರಡು ನಿಮಿಷ ಭಾಸ್ಕರ ಹಾಗೆ ಯೋಚಿಸುತ್ತಾ ನಿಲ್ಲುತ್ತಾನೆ. ಕೊಠಡಿಯಲ್ಲಿ ಮೌನ ಅವರಿಸುತ್ತದೆ. ತಮ್ಮ ಸಮಸ್ಯೆಗೆ ಒಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು ಪ್ರೇಮಿಗಳು. ಮಕ್ಕಳು ತಮ್ಮ ಹತೋಟಿಯಲ್ಲಿರಬೇಕು, ಅವರ ಭವಿಷ್ಯ ನಮ್ಮ ಕೈಲಿದೆ ಎಂದು ತಿಳಿದುಕೊಂಡಿದ್ದ ತಂದೆ ತಾಯಿಂದಿರು. ಭಾಸ್ಕರನನ್ನು ಒಬ್ಬ ಹೊಸ ವ್ಯಕ್ತಿಯಾಗಿ ನೋಡುತ್ತಿರುವ ಅಮೃತಾ. ಹೀಗೆ ಎಲ್ಲರೂ ಈ ಪರಿಸ್ಥಿತಿಯಲ್ಲಿ ಅವರವರದೇ ದಿಕ್ಕಿನಲ್ಲಿ ಯೋಚಿಸುತ್ತಿದ್ದರು. ಆದರೆ, ಭಾಸ್ಕರ ಒಬ್ಬ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸುವುದರೆಡೆಗೆ ಚಿಂತಿಸುತ್ತಿದ್ದ. ಮತಾಡದೇ ಸಮಸ್ಯೆ ಬಗೆಹರಿಯುವುದಿಲ್ಲ ಎಂದುಕೊಂಡು ಭಾಸ್ಕರ ಗೌತಮ ಮತ್ತು ಪ್ರಿಯಳ ತಂದೆ ತಾಯಿಯರನ್ನು ಕುರಿತು "ನೋಡಿ, ಇವರಿಬ್ಬರು ನಾವು ನೋಡಿರುವ ಹಾಗೆ ೨-೩ ವರ್ಷಗಳಿಂದ ಪ್ರೇಮಿಗಳಾಗಿದ್ದಾರೆ. ಅದಕ್ಕೆ ನಿಮ್ಮ ವಿರೋಧವಿದೆ ಅನ್ನುವುದು ಸತ್ಯ. ಸರಿ ಒಪ್ಪಿಕೊಳ್ಳೋಣ. ಆದರೆ ವಿರೋಧವೇಕೆ? ಎಂಬುದು ನನ್ನ ಪ್ರಶ್ನೆ. ಇದಕ್ಕೆ ನಿಮ್ಮಿಂದ ಸ್ಪಷ್ಟ ಉತ್ತರ ಬಯಸುತ್ತೇನೆ. ದಯವಿಟ್ಟು ಹಣ, ಅಂತಸ್ತು ಜಾತಿ, ಕುಲ, ಗೋತ್ರ ಎಂಬ ಕಾರಣಗಳನ್ನು ನೀಡಬೇಡಿ. ಪ್ರೀತಿ ಎಲ್ಲವನ್ನು ಮೀರಿದ್ದು. ಆದರೂ ನಿಮ್ಮ ಉತ್ತರ ಇದೇ ಆಗಿದಲ್ಲಿ ನನ್ನ ಮಾತುಳಿಗೆ ಅರ್ಥವಿರುವುದಿಲ್ಲ" ಎಂದು ಹೇಳುತ್ತಾನೆ. 

ಇವನ ಮಾತು ಕೇಳಿದ ಮೇಲೆ ನಾಲ್ವರ ಪರವಾಗಿ ಗೌತಮನ ತಂದೆ "ಆಸ್ತಿ, ಅಂತಸ್ತು ಜಾತಿ ಇರುವುಗಳಲ್ಲಿ ನಮಗೂ ಕೂಡ ನಂಬಿಕೆ ಇಲ್ಲ. ಆದರೆ, ಮಕ್ಕಳಿಗೆ ತಮ್ಮಗಳ ಭವಿಷ್ಯವನ್ನು ನಿರ್ಧರಿಸುವ ಬುದ್ಧಿಮಟ್ಟವಾಗಲಿ, ವಿವೇಕವಾಗಲಿ ಇರುವುದಿಲ್ಲ. ಪ್ರೀತಿ, ಪ್ರೇಮ ಇವುಗಳೆಲ್ಲ ಜೀವನದ ಒಂದು ಭಾಗವಾಗಬೇಕು. ಅದೇ ಜೀವನವಲ್ಲ. ಅದೂ ಅಲ್ಲದೇ ಪ್ರೀತಿ ಪ್ರೇಮ ಮಾಡುವುದಕ್ಕೆಲ್ಲಾ ಒಂದು ವಯಸ್ಸು ಅಂತ ಇರುತ್ತದೆ. ಓದೋ ಸಮಯದಲ್ಲಿ ಪ್ರೀತಿ ಎಂದು ಓಡಾಡಿಕೊಂಡಿದ್ದರೇ ಬದುಕು ಹಾಳಾಗುತ್ತದೆ. ಅದಲ್ಲದೇ ಇವನ ಮದುವೆ ಯಾರೊಂದಿಗೆ ಆಗಬೇಕು ಎಂಬುದನ್ನು ನಿರ್ಧರಿಸುವುದು ನಾವು, ಅವನ ಒಳ್ಳೆಯದು, ಕೆಟ್ಟದ್ದು ನಮಗೆ ಸೇರಿದ್ದು. ಅವನಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಾವಿನ್ನೂ ಕೊಟ್ಟಿಲ್ಲ" ಎಂದು ಹೇಳುತ್ತಾರೆ. ಮಿಕ್ಕವರು ಹೌದೆನ್ನುವಂತೆ ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ.

ಇವರ ಮಾತುಗಳನ್ನು ಕೇಳಿದ ಭಾಸ್ಕರ "ನೀವು ಹೇಳಿದ್ದನ್ನು ಒಪ್ಪಿಕೊಳ್ಳೋಣ, ಮಕ್ಕಳಿಗೆ ಅವರ ಭವಿಷ್ಯಯದ ಬಗ್ಗೆ ಯೋಚಿಸುವ, ನಿರ್ಧರಿಸುವ ಸಾಮರ್ಥ್ಯವಿರುವುದಿಲ್ಲ, ನಿಜ. ಪ್ರೀತಿ, ಪ್ರೇಮ ಓದಿನ ಜೀವನ ಹಾಳುಮಾಡುತ್ತದೆ, ಹೌದು ಒಪ್ಪಿಕೊಳ್ಳಬಹುದು. ಆದರೆ, ಪ್ರೀತಿ ಪ್ರೇಮವೆನ್ನುವುದು ನಮಗೆ ಬೇಕಾದಾಗ ಮಾಡುವಂತಹುದಲ್ಲ. ಅದು ಆಗುವುದು, ಎರಡು ಮನಸ್ಸು ಒಂದನೊಂದು ಅರ್ಥ ಮಾಡಿಕೊಳ್ಳುವ ಮಧುರವಾದ ಭಾವನೆ. ನೀವು ಧಿಕ್ಕರಿಸಿ ನಿಂತಂತೆ ಅವರು ಕೂಡ ಧಿಕ್ಕರಿಸಿ ತಮ್ಮ ಪಾಡಿಗೆ ಮದುವೆಯಾದರೆ?" ಎಂದು ಕೇಳುತ್ತಾನೆ. 

"ಹಾಗಾದರೆ ನಮ್ಮ ಪಾಲಿಗೆ ಅವರು ಸತ್ತಂತೆ" ಎಂದು ಗೌತಮನ ತಂದೆ. ಈ ಮಾತನ್ನು ಕೇಳಿ ಗೌತಮ ಮತ್ತು ಪ್ರಿಯರಿಗೆ ದುಗುಡವುಂಟಾಗಿ ಮುಂದೇನು ಎಂಬ ಯೋಚನೆ ಬರುತ್ತದೆ. ಭಾಸ್ಕರ ಮುಂದುವರೆಸುತ್ತಾ "ನಿಮ್ಮ ಪಾಲಿಗೆ ಅವರು ಸತ್ತಂತೆ? ಹಾಗಾದರೆ ನೀವು ಏನು ಸಾಧಿಸಿದ ಹಾಗಾಯಿತು?" ಎಂದು ಕೇಳುತ್ತಾನೆ. ಈ ಪ್ರಶ್ನೆಗೆ ತಂದೆ ತಾಯಂದಿರ ಬಳಿ ಉತ್ತರವಿರುವುದಿಲ್ಲ, ಸುಮ್ಮನಾಗುತ್ತಾರೆ. ಏನು ಹೇಳಬೇಕು ಎಂಬುದು ತಿಳಿಯದಾಗುತ್ತದೆ. "ಹೇಳಿ ಸರ್, ಏನು ಸಾಧಿಸಿದ ಹಾಗಾಗುತ್ತದೆ? ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ, ದೊಡ್ಡವರಾದ ನೀವು ದುಡುಕಬಾರದು. ಅದರ ಬದಲು ಕೂತು ಸಮಾಧಾನದಿಂದ ಮಾತಾಡಿದರೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ" ಎಂದು ಹೇಳುತ್ತಾನೆ.  "ಅಂದರೆ, ನೀವು ಹೇಳೋದು ಮಕ್ಕಳು ಹೇಳಿದ ಹಾಗೆ ಕೇಳಿಕೊಂಡು, ಅವರ ಇಚ್ಚೆಗೆ ತಕ್ಕಂತೆ ಮಾತಾಡಿ, ನಂತರ ಅವರಿಗೆ ಮದುವೆ ಮಾಡಿ ಎಂದು ತಾನೆ?" ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ಇದನ್ನು ಕೇಳಿ ಭಾಸ್ಕರ ತಕ್ಷಣವೇ "ತಪ್ಪೇನು? ಕೂತು ಮಾತಾಡಿ, ಒಪ್ಪಿಕೊಂಡದ್ದೇ ಆದಲ್ಲಿ ನಿಮಗೂ ಸಮಾಧಾನ, ಅವರ ಪ್ರೀತಿಗೆ ಗೌರವಕೊಟ್ಟ ಹಾಗೆ ಆಗುತ್ತದೆ. ಯಾಕಾಗಬಾರದು?" ಎಂದು ಸಮಾಧಾನದಿಂದಲೇ ಮಾತಾಡುತ್ತಾನೆ. ಇವನ ಈ ಮಾತಿಗೂ ಅವರ ಬಳಿ ಉತ್ತರವಿರುವುದಿಲ್ಲ. ಭಾಸ್ಕರ ಮುಂದುವರೆಸುತ್ತಾ "ನೀವು ಬಲವಂತವಾಗಿ ಅವರನ್ನು ಬೇರೆ ಮಾಡಿ, ನಿಮಗೆ ಬೇಕಾದವರೊಂದಿಗೆ ಮದುವೆ ಮಾಡಿದಿರಿ ಎಂದುಕೊಳ್ಳೋಣ. ಅವರು ಸುಖವಾಗಿರುತ್ತಾರ? ಜೀವನದಲ್ಲಿ ಕಳೆದು ಹೋದದ್ದನ್ನು ನೆನೆಸಿಕೊಳ್ಳಬಾರದು ಎನ್ನುತ್ತಾರೆ. ಹಾಗೆಯೆ ಅವರು ನಡೆದದ್ದನ್ನು ಮರೆತು ಸುಖವಾಗಿರುತ್ತಾರೆ ಎಂದೇ ಅಂದುಕೊಳ್ಳೋಣ. ಆದರೆ, ಅವರ ಪ್ರೀತಿಯನ್ನು ಕೊಂದರು ಅನ್ನಿಸುವುದಿಲ್ಲವಾ? ಅದಕ್ಕೆ ಕಾರಣ ನೀವಾಗುತ್ತೀರ. ಬೇಕೋ ಬೇಡವೋ ಅದರ ಪಾಪ ನಿಮಗೆ ತಾಗುತ್ತದೆ. ನಿಮಗೆ ಇದರಲ್ಲಿ ನಂಬಿಕೆ ಇಲ್ಲದಿರಬಹುದು ಆದರೂ, ನೀವುಗಳೇ ಅದಕ್ಕೆ ನೇರ ಹೊಣೆಯಾಗುತ್ತೀರ. ಅವರಲ್ಲಿ ಪ್ರೀತಿ ಮೊಳಕೆಯೊಡೆದಿದೆ, ಅದಕ್ಕೆ ನಿಮ್ಮ ಪ್ರೀತಿಯನ್ನೂ ಧಾರೆ ಎರೆದು, ಪೋಷಿಸಿ. ಎಳೆಯದರಲ್ಲೇ ಚಿವುಟಬೇಡಿ" ಎಂದು ವಿನಯದಿಂದಲೇ ಹೇಳುತ್ತಾನೆ.

ಭಾಸ್ಕರನ ಈ ವಾದಕ್ಕೂ ತಂದೆತಾಯಂದರಿಂದ ಉತ್ತರ ಬರುವುದಿಲ್ಲ. ಭಾಸ್ಕರನೂ ಏನು ಹೇಳದೆ ಪ್ರಿಯ ಮತ್ತು ಗೌತಮರ ಬಳಿ ಹೋಗುತ್ತಾನೆ. "ತಂದೆ ತಾಯಿ ಒಪ್ಪಲಿಲ್ಲವೆಂದು ದೂರ ಹೋಗಿ ಮದುವೆಯಾಗಿ ಯಾರಿಗೂ ತೊಂದರೆ ಕೊಡದೆ ಇರುತ್ತೀರಾ? ಈ ಮಾತನ್ನು ಹೇಳಲಿಕ್ಕೆ ನಿಮಗೆ ನಾಚಿಕೆಯಾಗಬೇಕು" ಎಂದು ಪ್ರಿಯ ಮತ್ತು ಗೌತಮರ ಮೇಲೆ ಕೋಪದಿಂದ ರೇಗುತ್ತಾನೆ. ಈ ಮಾತು ಕೇಳಿದ ಪ್ರೇಮಿಗಳಿಬ್ಬರಿಗೆ ಅವಮಾನವಾದಂತಾಗಿ ತಮ್ಮ ಮಾತಿನ ತಪ್ಪು ಅರಿವಾಗುತ್ತದೆ. ಆದ್ದರಿಂದ ತಲೆ ತಗ್ಗಿಸಿ ನಿಲ್ಲುತ್ತಾರೆ. "ಇಷ್ಟು ವರ್ಷ ನಿಮ್ಮ ತಂದೆ ತಾಯಿ ನಿಮ್ಮನ್ನು ಸಾಕಿದ್ದಾರಲ್ಲ ಅದನ್ನು ಒಂದೇ ಕ್ಷಣದಲ್ಲಿ ಮರೆಯುತ್ತೀರಾ? ಪ್ರೀತಿ ನಮ್ಮ ಬದುಕನ್ನು ಹಸನು ಮಾಡಬೇಕು, ಇನ್ನೊಬ್ಬರನ್ನು ನೋಯಿಸಬಾರದು. ನೀವು ಆ ರೀತಿ ಮಾತಾಡಿದ್ದು ತಪ್ಪು" ಎಂದು ಪ್ರೇಮಿಗಳ ತಪ್ಪನ್ನು ಭಾಸ್ಕರ ಅರ್ಥ ಮಾಡಿಸುತ್ತಾನೆ. 

ಏನೊಂದು ತೋಚದೆ ಇಬ್ಬರೂ ತಲೆತಗ್ಗಿಸಿ ನಿಲ್ಲುತ್ತಾರೆ. ಅವರನ್ನು ನೋಡಿ ಭಾಸ್ಕರ "ನೋಡಿ, ನೀವು ಪ್ರೀತಿ ಮಾಡಿದ್ದೀರ. ತಂದೆ ತಾಯಿ ಒಪ್ಪುತ್ತಿಲ್ಲ ಎಂಬ ನೋವಿನಿಂದ ನೀವು ಈ ರೀತಿ ಮಾತಾಡಿದ್ದೀರ, ನಿಮ್ಮ ತಪ್ಪು ನಿಮಗೆ ಅರಿವಾಗಿದ್ದಲ್ಲಿ ತಲೆ ಎತ್ತಿ ನಿಲ್ಲಿ. ಪ್ರೀತಿ ಧೈರ್ಯವನ್ನು ತುಂಬಬೇಕು, ಭಯವನ್ನಲ್ಲ" ಎಂದು ಅಭಯ ನೀಡುತ್ತಾನೆ. "ನೋಡಿ ಚಿಕ್ಕವಯಸ್ಸಿನಲ್ಲಿ ನಿಮ್ಮ ತಂದೆ ತಾಯಿಯರನ್ನು ನಿಮಗೆ ಬೇಕು ಅನ್ನಿಸಿದ್ದನ್ನು ಕೇಳಿ ತೆಗೆಸಿಕೊಳ್ಳುತ್ತೀರಾ. ಹಾಗೆ, ಅದೇ ರೀತಿ ಈಗಲೂ ನಾನು ಪ್ರೀತಿಸುತ್ತಿದ್ದೀನಿ ಎಂದು ಯಾಕೆ ನಿಮ್ಮ ತಂದೆ ತಾಯರಿಗೆ ಹೇಳಿ ಒತ್ತಾಯ ಮಾಡುವುದಿಲ್ಲ? ಹೆದರಬಾರದು, ಧೈರ್ಯದಿಂದ ಹೋಗಿ ಕೇಳಿ, ಒಪ್ಪುವುದು ಬಿಡುವುದು ಮುಂದಿನ ವಿಚಾರ. ಆದರೆ, ನಿಮ್ಮಿಷ್ಟಕ್ಕೆ ನೀವೇ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ತಂದೆ ತಾಯರಿಗೆ ಅಗೌರವ ತೋರಿಸಿದಂತೆ. ಈಗಲೂ ಕಾಲ ಮಿಂಚಿಲ್ಲ ನಮ್ಮದು ತಪ್ಪಾಯಿತು ಎಂದು ಹೇಳಿ, ನಿಮ್ಮ ಪ್ರೀತಿ ಬಗ್ಗೆ ಹೇಳಿಕೊಳ್ಳಿ. ನಿಮ್ಮ ತಂದೆ ತಾಯಿ ಕೂಡ ಒಪ್ಪುತ್ತಾರೆ" ಎಂದು ಭರವಸೆ ಕೊಡುತ್ತಾನೆ.

ತಂದೆ ತಾಯರ ಕಡೆ ತಿರುಗಿ "ಅವರ ತಪ್ಪು ಅವರಿಗೆ ಅರಿವಾಗಿದೆ, ಇನ್ನು ನಿಮಗೆ ಬಿಟ್ಟದ್ದು" ಎಂದು ತನ್ನ ಮಾತು ಮುಗಿಯಿತು ಎನ್ನುವಂತೆ ನಿಲ್ಲುತ್ತಾನೆ. ರಾಯರ ಮುಖದಲ್ಲಿ ಶಿಷ್ಯನ ಬಗೆಗಿನ ಹೆಮ್ಮೆ ಕಾಣಿಸುತಿತ್ತು, ಅಮೃತಾ ಸೇರಿದಂತೆ ಅಲ್ಲಿದ್ದ ಪ್ರಾಧ್ಯಾಪಕರೆಲ್ಲರೂ ಮೂಕ ವಿಸ್ಮಿತರಾಗಿ ಭಾಸ್ಕರನನ್ನೇ ನೋಡುತ್ತಾರೆ. ಒಂದೆರಡು ನಿಮಿಷ ಮೌನ ಆವರಿಸುತ್ತದೆ. ನಂತರ ಗೌತಮನ ತಂದೆ ತಮ್ಮ ಪಟ್ಟನ್ನು ಬಿಡದೆ "ಸರ್, ನೀವು ಹೇಳುವುದು ಸರಿ ಅದರೆ, ಆ ಹುಡುಗಿ ಹೇಗೋ, ಅವರ ಮನೆಯವರು ಹೇಗೋ ಏನೋ ಒಂದು ತಿಳಿದಿಲ್ಲ" ಎಂದು ತಮ್ಮ ಅಸಮ್ಮತಿ ತೋರಿಸುತ್ತಾರೆ.

ಇಲ್ಲಿಯವರೆಗೂ ತಾಳ್ಮೆಯಿಂದ ಇದ್ದ ಭಾಸ್ಕರನಿಗೆ ಈ ಮಾತುಗಳನ್ನು ಕೇಳಿ ಇದ್ದಕ್ಕಿದ್ದಂತೆ ಕೋಪ ಬರುತ್ತದೆ. ಅವರ ಅಸಮ್ಮತಿಯನ್ನು ತನ್ನ ನಂಬಿಕೆಗೆ ವಿರುದ್ಧ ಎಸೆದ ಸವಾಲು ಎಂಬಂತೆ ಸ್ವೀಕರಿಸುತ್ತಾನೆ. ಕೋಪದ ಭಾವ ಆತನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಭಾಸ್ಕರ ಇನ್ನು ರೇಗಬಹುದು ಎಂದು ಆತನ ಮುಖಭಾವದಿಂದ ಅರ್ಥೈಸಿಕೊಂಡ ರಾಯರು ಆತನನ್ನು ಸಮಾಧಾನ ಮಾಡಲು ಮುಂದಾಗುತ್ತಾರೆ. ರಾಯರ ಕಡೆ ತಿರುಗಿ ಏನು ಪರವಾಗಿಲ್ಲ ಯೋಚಿಸಬೇಡಿ ಎನ್ನುವಂತೆ ಕಣ್ಣಲ್ಲೇ ಸನ್ನೆಮಾಡುತ್ತಾನೆ. ರಾಯರು ಅದನ್ನು ಗಮನಿಸಿ ಅಲ್ಲೇ ನಿಲ್ಲುತ್ತಾರೆ.

ನಂತರ ಭಾಸ್ಕರ ತನ್ನಷ್ಟಕ್ಕೆ ತಾನು ಸಮಾಧಾನ ತಂದುಕೊಂಡು ಗೌತಮನ ತಂದೆಯ ಬಳಿ ಹೋಗಿ "ಆ ಹುಡುಗಿ ಬಗ್ಗೆ ಅಥವಾ ಅವರ ಮನೆಯವರ ಬಗ್ಗೆ ನಿಮಗೆ ಗೊತ್ತಿಲ್ಲ ಅಲ್ಲ...? ಗೊತ್ತು ಮಾಡಿಕೊಳ್ಳಿ...! ಏನು ನಿಮಗೆ ಪ್ರಪಂಚದಲ್ಲಿ ಇರುವವರೆಲ್ಲಾ ಗೊತ್ತಾ? ಅದಿರಲಿ, ನಿಮಗೆ ಆ ಹುಡುಗಿ ಮತ್ತು ಅವರ ಮನೆಯವರುಗಳ ಬಗ್ಗೆ ಏನು ಗೊತ್ತಾಗಬೇಕು ಮತ್ತು ತಿಳಿದುಕೊಂಡು ಏನು ಮಾಡುತ್ತೀರಿ?" ಕೋಪದಿಂದ ಕೇಳುತ್ತಾನೆ.

"ಅದು ನಮ್ಮ ಕರ್ತವ್ಯ. ನಮ್ಮ ಮನೆಗೆ ಬರುವವರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಹಕ್ಕು, ನಮ್ಮ ಕರ್ತವ್ಯ" ಎಂದು ಗೌತಮನ ತಂದೆಯೂ ಕೋಪದಿಂದಲೇ ನುಡಿಯುತ್ತಾರೆ. "ಹೌದು, ಅದು ನಿಮ್ಮ ಕರ್ತವ್ಯ, ತಿಳಿದುಕೊಳ್ಳಿ ತಪ್ಪೇನು ಇಲ್ಲ" ಎಂದು ವ್ಯಂಗ್ಯವಾಗಿ ಭಾಸ್ಕರ ನುಡಿಯುತ್ತಾನೆ. ಇವರ ಮಾತುಗಳ ಮಧ್ಯೆ ಪ್ರಿಯಾಳ ತಾಯಿ "ಏನೋ ನಾವೇ ನೋಡಿ ಮಾಡಿ ಮದುವೆ ಮಾಡಿದರೆ ಸರಿ ಇರುತ್ತದೆ." ಎನ್ನುತ್ತಾರೆ. ಇವರ ಮಾತುಗಳಿಂದ ಗೌತಮ, ಪ್ರಿಯ ಮತ್ತು ಅವರಿಗಿಂತಲೂ ಹೆಚ್ಚು ಭಾಸ್ಕರನಿಗೆ ಕಿರಿಕಿರಿ ಉಂಟು ಮಾಡುತ್ತದೆ. ಭಾಸ್ಕರ ಅವರ ಬಳಿ ತೆರಳಿ "ಯಾಕಮ್ಮ ಈಗೆನಾಗಿದೆ? ಏನು ಚೆನ್ನಾಗಿಲ್ಲ?" ಎಂದು ಸವಾಲೆಸೆಯುವಂತೆ ಕೇಳುತ್ತಾನೆ.

"ನಾವೇ ನೋಡಿ ಮದುವೆ ಮಾಡಿದರೆ ನಮಗೆ ತಕ್ಕವಾದದನ್ನ ಹುಡುಕುತ್ತೇವೆ. ಮುಂದೆ ಏನಾದರು ತೊಂದರೆಯಾದರೆ ನಾವು ದೊಡ್ಡವರು ಜವಾಬ್ದಾರಿ ವಹಿಸಿ ಮಾತಾಡಬಹುದು. ಇಲ್ಲವಾದಲ್ಲಿ ಅವರವರಿಗೆ ಹೇಗೆ ಬೇಕೋ ಹಾಗೆ ಮಾಡಿಕೊಳ್ಳಲಿ" ಎಂದು ಅಸಮಾಧಾನದಿಂದ ನುಡಿಯುತ್ತಾಳೆ. ಈ ಮಾತುಗಳು ಭಾಸ್ಕರನನ್ನು ಮತ್ತಷ್ಟು ರೇಗಿಸುತ್ತದೆ. "ಹಾಗಾ? ನಿಮ್ಮ ಮಕ್ಕಳ ಬಗ್ಗೆ ನಿಮ್ಮ ಬಗ್ಗೆ ನಿಮ್ಮವರ ಪ್ರೀತಿ, ಸಂಬಂಧಗಳ ಮೇಲೆ ನಿಮಗೆ ನಂಬಿಕೆ ಇಲ್ಲ ಅಂತಾಯಿತು". ಈ ಮಾತು ಎಲ್ಲರಿಗೂ ಮುಖಕ್ಕೆ ಹೊಡೆದಂತಾಯಿತು. ಭಾಸ್ಕರ ಮುಂದುವರೆಯುತ್ತಾ "ಮುಂದೆ ತೊಂದರೆ ಆದರೆ ದೊಡ್ಡವರು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ? ಹಾಗೆಂದರೆ ನಿಮ್ಮ ಸಂಸಾರದಲ್ಲಿ ತೊಂದರೆ ಆಗುತ್ತದೆ ಎಂದು ನಿಮಗೆ ಖಚಿತವಾಗಿ ಗೊತ್ತು. ಅದೇ ಪ್ರೀತಿ ಪ್ರೇಮದಲ್ಲಿ ಈ ಯೋಚನೆ ಇರುವುದಿಲ್ಲ. ಹಾಗೆಂದು ಅವರಿಗೆ ಮುಂದಾಲೋಚನೆ ಇಲ್ಲವೆಂದು ನೀವು ತಿಳಿದರೆ ನಿಮ್ಮಂತಹ ಮೂರ್ಖರಾರೂ ಇಲ್ಲ. ಅವರಲ್ಲಿ ತಮ್ಮ ಸಂಬಂಧಗಳ ನಡುವೆ ತೊಂದರೆಗಳು ಬರುವುದಿಲ್ಲ ಎಂದಲ್ಲ. ಬಂದರೂ ತಾವು ಒಬ್ಬರನ್ನೊಬ್ಬರು ಬಿಡುವುದಿಲ್ಲ ಎಂಬ ಭರವಸೆ, ನಂಬಿಕೆ ಇರುತ್ತದೆ. ನನ್ನ ಪ್ರಕಾರ ಪ್ರೀತಿ ಎಂದರೆ ನಂಬಿಕೆ. ಅದು ಅವರಲ್ಲಿ ಇದೆ" ಹೇಳುತ್ತಾನೆ.

ಮತ್ತಷ್ಟು ವ್ಯಂಗ್ಯದಿಂದ "ನೀವು ದೊಡ್ಡವರು ಗಾದೆ ಮಾಡಿದ್ದೀರ 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂದು. ಇದರ ತಳಹದಿಯಲ್ಲಿ ನಿಮ್ಮ ಸಂಬಂಧ ಬೆಳೆದಿದೆ. ಸತ್ಯ ಹರಿಶ್ಚಂದ್ರ, ಸತ್ಯಮೇವ ಜಯತೆ ಅನ್ನುವ ನಾವು ಮದುವೆ ಎಂದ ತಕ್ಷಣ ಸುಳ್ಳು ಹೇಳಬಹುದು ವಾಹ್. ಆದರೆ, ಪ್ರೀತಿ ಪ್ರೇಮದಲ್ಲಿ ಸುಳ್ಳು ಎಂಬುದು ಇರುವುದಿಲ್ಲ. ಅವರಿಗೆ ಪ್ರೀತಿ ಎಂದರೆ ನಂಬಿಕೆ, ಸತ್ಯ. ನಂಬಿಕೆ ಎಂದರೆ ಸತ್ಯ ಅದೇ ಜೀವನ. ನಿಮ್ಮ ಹಾಗೆ ಸುಳ್ಳಿನ ಅಡಿಪಾಯದ ಮೇಲೆ ಬೆಳೆದ ಸಂಬಂಧವಲ್ಲ... ನೀವು ಹುಡುಕಿ, ನೋಡಿ, ಮಾಡಿ ಮದುವೆ ಮಾಡುತ್ತೀರಾ? ನೀವು ನೋಡಿದವರು ಎಲ್ಲಾ ರೀತಿಯಲ್ಲಿ ಸರಿ ಹಾಗು ನಿಮಗೆ ಹೊಂದಿಕೆ ಆಗುತ್ತಾರೆ ಎಂದು ಹೇಗೆ ಹೇಳುತ್ತೀರಾ? ಅದು ಅಲ್ಲದೇ ನೀವು ನೋಡುವ ಸಂಬಂಧಗಳು ಎಲ್ಲಿ? Matrimonial Sites ಅಲ್ಲಿ. ಅಲ್ಲಿರುವುದೆಲ್ಲಾ ಸತ್ಯ ಎಂದು ನಂಬುತ್ತೀರಾ? ನಿಮ್ಮ ಹಾಗೆ, ನೀವು ನಂಬಿರುವ ಗಾದೆ ಹಾಗೆ ಮಿಕ್ಕವರು ಸುಳ್ಳು ಹೇಳಿದರೆ ಏನು ಮಾಡುತ್ತೀರಾ? ಮದುವೆ ಏನೋ ಮಾಡುತ್ತೀರ ನಂತರ, ಅವರ ಮಾತು ಸುಳ್ಳೆಂದು ಗೊತ್ತಾದರೆ ಮಕ್ಕಳಿಗೆ ಅನುಸರಿಸಿಕೊಂಡು ಹೋಗೆಂದು ಬಿಟ್ಟಿ ಉಪದೇಶ ಕೊಡುತ್ತೀರ. ನಿಮ್ಮ ಮಾತಿಗೆ ಕಟ್ಟುಬಿದ್ದು ಜೀವನ ಪೂರ ನರಳುವವರು ನಿಮ್ಮ ಮಕ್ಕಳು" ಎಂದು ಭಾಸ್ಕರ ಹೇಳುತ್ತಾನೆ.

"ನಾನು ಹೇಳುವಷ್ಟು ಹೇಳಿದ್ದೇನೆ ಇಷ್ಟರ ಮೇಲೆ ನಿಮ್ಮಿಷ್ಟ" ಎಂದು ಹೇಳಿ ಯಾರ ಮಾತಿಗೂ ಕಾಯದೆ ಅಲ್ಲಿಂದ ಹೊರ ಹೋಗುತ್ತಾನೆ. ಸ್ವಾತಿ ಮಳೆ ಬಿದ್ದ ನಂತರ ಆವರಿಸುವ ಮೌನ ಅಲ್ಲಿ ಆವರಿಸಿತು. ಯಾರಿಗೂ ಏನು ಹೇಳಲು ತೋಚುವುದಿಲ್ಲ. ರಾಯರು ನಾಲ್ಕೂ ಜನರಿಗೆ ಸಮಾಧಾನ ಮಾಡುತ್ತಾ "ಭಾಸ್ಕರ ಹೇಳಿದ್ದನ್ನು ಸ್ವಲ್ಪ ಯೋಚಿಸಿ. ಆತ ಹೇಳಿದ್ದು ಸರಿಯಿಲ್ಲವೆಂದು ನಿಮಗೆ ಈ ಕ್ಷಣದಲ್ಲಿ ಅನ್ನಿಸುತ್ತಿರಬಹುದು. ಆದರೂ, ಶಾಂತವಾಗಿ ಮಕ್ಕಳೊಂದಿಗೆ ಮಾತಾಡಿ, ಕೂತು ಯೋಚಿಸಿ" ಎಂದು ಹೇಳುತ್ತಾರೆ. ಹೇಗೆ ಪ್ರತಿಕ್ರಯಿಸಬೇಕು ಎಂದು ತಿಳಿಯದೆ "ಆಯ್ತು ಸರ್ ಏನು ಮಾಡಬೇಕೆಂದು ಯೋಚಿಸುತ್ತೇವೆ" ಎಂದು ಹೇಳಿ ಅಲ್ಲಿಂದ ತಮ್ಮ ಮನೆಗಳಿಗೆ ಮಕ್ಕಳ ಸಮೇತ ತೆರಳುತ್ತಾರೆ.

Comments