ಯಾರಿವನು? ಎಂಬ ಪ್ರಶ್ನೆಯೊಂದಿಗೆ ಹೊರಟ ಅಮೃತಾ "ಅಪ್ಪಾಜಿ, ನಿಮ್ಮ ಶಿಷ್ಯ ಅಂತೀರ, ವಿಶೇಷವಾದ ವ್ಯಕ್ತಿ ಅಂತ ಬೇರೆ ಹೇಳಿದೀರಿ, ಯಾರಿವನು? ಅವರ ಹೆಸರಾದರೂ ಹೇಳಿ" ಎಂದು ತನ್ನ ಮನಸ್ಸಿನ ಕುತೂಹಲವನ್ನು ಹೊರಹಾಕುತ್ತಾಳೆ. ಬಾ ಹೇಳ್ತೀನಿ ಎಂದು ಅಮೃತಾಳನ್ನು ಒಂದು ತರಗತಿಯ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸುತ್ತಾರೆ. 'ಭಾರತದ ಸ್ವಾತಂತ್ಯ್ರ ಸಂಗ್ರಾಮ' ಎಂದು ಹಲಗೆ ಮೇಲೆ ಬರೆದಿತ್ತು. ತರಗತಿಯೊಳಗಿಂದ ಪಾಠ ಮಾಡುತ್ತಿದ್ದ ಧ್ವನಿ ಕೇಳಿ ಬರುತ್ತದೆ. "ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಎದ್ದು ಕಾಣ ಬೇಕಾಗಿರುವ ಹೆಸರು ಎಂದರೇ 'ವಿನಾಯಕ ದಾಮೋದರ ಸಾವರ್ಕರ್' ಆದರೇ, ನಾವಿಂದು ಅವರನ್ನು ತೀರ ಮರೆತು ಹೋಗಿದ್ದೇವೆ. ಪಠ್ಯಕ್ರಮದಲ್ಲಿ ಸಹ ಅವರ ಹೆಸರು ಪ್ರಕಟವಾಗುವುದಿಲ್ಲ. ಇಷ್ಟು ವರ್ಷ ೧೫೮೭ರಲ್ಲಿ ನಡೆದ ಘಟನೆಯನ್ನು ಆಂಗ್ಲರನ್ನು ಹೆಸರಿಸಿರುವಂತೆ 'ಸಿಪಾಯಿ ದಂಗೆ (Sepoy Mutiny)'ಎಂದೇ ಓದುತ್ತಿದ್ದೇವೆ. ಅವರೇನೋ ಆಂಗ್ಲ ದೇಶದವರು ಆದರೆ ನಮ್ಮ ದೇಶದವರೇ ಇಂದಿಗೂ ಹಾಗೇ ಪಠಿಸುತ್ತಿರುವುದು ನಾಚಿಕೆಗೇಡು. ಆಂಗ್ಲದವರು ಮೋಸದಿಂದ ನಮ್ಮನ್ನು ಗೆದ್ದು ನಮ್ಮ ಸೈನಿಕರದ್ದೇ ತಪ್ಪು ಎನ್ನುವ ರೀತಿಯಲ್ಲಿ 'ಸಿಪಾಯಿ ದಂಗೆ' ಎಂದು ಕರೆದರು. ಅದೊಂದು ದಂಗೆ ಎಂದೇ ನಮ್ಮ ದೇಶದವರೂ ನಂಬಿದರು! ಅದು ಬರಿ ದಂಗೆಯಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಹೊಸ ದಿಕ್ಕನ್ನು, ಒಂದು ಹೊಸ ಆಯಾಮವನ್ನು ತಂದುಕೊಟ್ಟ ಸಂಗ್ರಾಮ, ಭಾರತದ ಪ್ರಥಮ ಸ್ವಾತಂತ್ಯ್ರ ಸಂಗ್ರಾಮ (The 1st War of Indian Independence) ಎಂದು ಹೆಸರಿಸಿ ಸತ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ - ಸಾವರ್ಕರ್" ಎಂಬ ವರ್ಣನೆ ಅಮೃತಾಳನ್ನು ಆಶ್ಚರ್ಯ ಚಕಿತಳನ್ನಾಗಿ ಮಾಡಿತ್ತದೆ. ಇಡೀ ಸಮಾಜವೇ ಆ ವ್ಯಕ್ತಿಯನ್ನು ಮರೆಯುತ್ತಿರುವ ಸಂದರ್ಭದಲ್ಲಿ ಮುಂದಿನ ಪೀಳೀಗೆಗೆ ಅವರ ಪರಿಚಯವನ್ನು ಮಾಡಿತ್ತಿದ್ದಾರಲ್ಲ ಎಂದು ಸಂತೋಷ ಪಡುತ್ತಾಳೆ. ಈ ಕಾಲದಲ್ಲೂ ಈ ರೀತಿ ವ್ಯಕ್ತಿ ಇದಾರಾ? ಎಂಬ ಭಾವದಿಂದ ರಾಯರನ್ನು ನೋಡುತ್ತಾಳೆ.
ತಕ್ಷಣ ತರಗತಿಯಿಂದ ಬಂದ ವಾಕ್ಯವೊಂದು ಅಮೃತಾಳ ಗಮನವನ್ನು ಸೆಳೆಯುತ್ತದೆ. "ಮೇ ೧೮, ೧೮೮೮ ಈ ಪುಣ್ಯಾತ್ಮನ ಜಯಂತಿ" ಎಂದು ಬೇಕೆಂತಲೇ ತಪ್ಪಾಗಿ ಹೇಳುತ್ತಾರೆ. ವಿದ್ಯಾರ್ಥಿಗಳು ಉತ್ತರಿಸುವ ಮೊದಲೇ ಅಮೃತಾ "ಮಕ್ಕಳಿಗೆ ತಪ್ಪು ಮಾಹಿತಿ ಕೊಡಬೇಡಿ. ಸಾವರ್ಕರ್ ರವರ ಜನ್ಮದಿನ 'ಮೇ ೨೮, ೧೮೮೬'" ಎಂದು ರೇಗುವಂತೆ ಹೇಳುತ್ತಾಳೆ. ಅನಿರೀಕ್ಷಿತವಾದ ಧ್ವನಿಯನ್ನು ಕೇಳಿ ಎಲ್ಲರೂ ಸುಮ್ಮನಾಗುತ್ತಾರೆ. ಆಗ ಆತ ಹೊರಗೆ ಬಂದು "ದಯವಿಟ್ಟು ನಿಮ್ಮ ಕೆಲಸ ನೀವು ನೋಡಿಕೊಂಡರೆ ಒಳ್ಳೆಯದು, ಬೇರೆಯವರ ಉಸಾಬರಿ ನಿಮಗೆ ಬೇಕಿಲ್ಲ ಮಕ್ಕಳಿಗೆ ಏನು ಹೇಳಬೇಕು, ಏನು ಹೇಳಬಾರದು, ಯಾವುದು ಸರಿ, ಯಾವುದು ತಪ್ಪು ಅಂತ ನೀವು ನನಗೆ ಹೇಳಿ ಕೊಡಬೇಕಾಗಿಲ್ಲ. ತಾವಿನ್ನು ದಯವಿಟ್ಟು ಹೊರಡಬಹುದು" ಎಂದು ಉತ್ತರಿಸುತ್ತಾರೆ. "ಅಲ್ಲ ಸಾರ್ ನೀವು ಹೇಳಿ..." ಎಂದು ಅಮೃತಾ ಮುಂದುವರೆಯುವಷ್ಟರಲ್ಲಿ "ತಾವಿನ್ನು ದಯವಿಟ್ಟು ಹೊರಡಬಹುದು, ಇಲ್ಲವಾದಲ್ಲಿ ನಾನೇ ಹೊರಡುತ್ತೇನೆ, ತಾವು ಪಾಠ ಮಾಡಿ" ಎಂದು ರಾಯರ ಕಡೆ ನೋಡುತ್ತಾನೆ. ರಾಯರು ಪರಿಸ್ಥಿತಿಯನ್ನು ಗಮನಿಸಿ "ನೀನು ಮುಂದುವರೆಸು, ನಾನು ಈಕೆಯನ್ನು ಕರೆದುಕೊಂಡು ಹೋಗುತ್ತೇನೆ" ಎಂದು ಅಮೃತಾಳನ್ನು ಬಲವಂತವಾಗಿ ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ.
ಅಲ್ಲಿಂದ ಹೊರಟ ರಾಯರು ಮತ್ತು ಅಮೃತಾ ಕಾಲೇಜಿನ ಕ್ಯಾಂಟೀನ್ ಆವರಣಕ್ಕೆ ತೆರಳಿ ಕೂರುತ್ತಾರೆ. "ಅಲ್ಲ ಅಪ್ಪಾಜಿ ಅವರು ತಪ್ಪಾಗಿ ಹೇಳಿದರೂ ನೀವು ಸುಮ್ಮನೆ ಇದ್ರಿ. ಹೋಗಲಿ ಅದನ್ನು ತಪ್ಪು ಎಂದು ಹೇಳಿದ ನನ್ನ ಮೇಲೆ ಆತ ಜೋರು ಮಾಡಬೇಕಾದರೆ ನೀವು ಹೇಗೆ ಸುಮ್ಮನಿದ್ದೀರಿ?" ಎಂದು ಅಮೃತಾ ಕೋಪಿಸಿಕೊಳ್ಳುತಾಳೆ. ಅವಳ ಕೋಪವನ್ನು ಶಮನ ಮಾಡುವ ಬದಲು ರಾಯರು ಶಾಂತವಾಗಿ "ಅವನಲ್ಲಿ ನಿನಗೇನಾದರೂ ವಿಶೇಷತೆ ಕಾಣಿಸಿತಾ?" ಎಂದು ಕೇಳುತ್ತಾರೆ. "ಇದೇನಿದು ಅಪ್ಪಾಜಿ, ಅವರು ತಪ್ಪು ಮಾಡಿದನ್ನು ತಪ್ಪು ಎಂದು ಹೇಳಿದರೆ ನನ್ನ ಮೇಲೆ ಕೂಗಾಡಿದರು, ಇಲ್ಲಿ ನೀವು ನೋಡಿದರೆ ಅವರಲ್ಲಿ ವಿಶೇಷತೆ ಏನಾದರು ಕಂಡೆಯಾ ಎಂದು ಕೇಳುತ್ತಿದ್ದೀರಿ" ಎಂದು ವ್ಯಂಗ್ಯ ಮಾಡುತ್ತಾಳೆ. ರಾಯರು ಅಮೃತಾಳ ಮೇಲೆ ಕೋಪಿಸಿಕೊಳ್ಳದೆ "ಕೋಪಿಸಿಕೊಳ್ಳಬೇಡ ಅಮೃತಾ, ಅವನು ಮಕ್ಕಳ ಮುಂದೆ ಬೇಕೆಂತಲೇ ತಪ್ಪಾಡಿದ" ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಅಮೃತಾ ಆಶ್ಚರ್ಯ ಚಕಿತಳಾಗಿ ರಾಯರನ್ನು ನೋಡುತ್ತಾಳೆ. "ಹೌದು, ಅವನು ಬೇಕಂತಲೇ ತಪ್ಪು ಹೇಳಿದ, ಮಕ್ಕಳು ಎಷ್ಟು ಚೆನ್ನಾಗಿ ತನ್ನ ಪಾಠ ಕೇಳುತ್ತಿದ್ದಾರೆ ಎಂದು ಈ ತರಹ ಮಾಡುತ್ತಾನೆ. ಅವನು ತಪ್ಪು ಹೇಳಿದ್ದೆ ತಡ ಮಕ್ಕಳು ಸರಿಯಾದ ಉತ್ತರ ಕೊಡುತ್ತಾರೆ, ಆಗ ಅವನಿಗೆ ಎಲ್ಲಿಲ್ಲದ ಸಂತಸ. ಆದರೆ, ಇಂದು ನೀನು ಮಧ್ಯದಲ್ಲಿ ಉತ್ತರ ಹೇಳಿದ್ದು ಅವನಿಗೆ ಸರಿ ಕಾಣಲಿಲ್ಲ, ಆದ್ದರಿಂದ ರೇಗಿದ. ನೀನು ಸಮಜಾಯಿಶಿ ಕೊಡಲು ಹೊದೆ, ಅವನಿಗೆ ಅದು ಮತ್ತಷ್ಟು ರೇಗಿತು. ನಾನು ಸುಮ್ಮನಿದ್ದೆ ಆದ್ದರಿಂದ ನನ್ನ ಮೇಲೂ ರೇಗಿದ" ಎಂದು ರಾಯರು ತಿಳಿಸುತ್ತಾರೆ. ವಿಷಯ ತಿಳಿದ ಅಮೃತಾ ರಾಯರನ್ನು ವ್ಯಂಗ್ಯ ಮಾಡಿದಕ್ಕಾಗಿ ಬೇಸರಪಟ್ಟು ಕೊಳ್ಳುತಾಳೆ. ತಕ್ಷಣ "ಅಪ್ಪಾಜಿ ನನ್ನಿಂದ ತಪ್ಪಾಯಿತು, ಅವರು ರೇಗಿದರಲ್ಲ ಎಂಬ ಕಾರಣಕ್ಕೆ ನಿಮ್ಮ ಮೇಲೂ ನಾನು ರೇಗಿದೆ, ದಯವಿಟ್ಟು ನನ್ನ ಕ್ಷಮಿಸಿ" ಎಂದು ಕೇಳಿಕೊಳ್ಳುತ್ತಾಳೆ. "ಬಿಡಮ್ಮ, ನೀನು ರೇಗಿದ್ದು ಸಹಜ, ಗೊತ್ತಿದ್ದು ಗೊತ್ತಿದ್ದು ನೀನು ತಪ್ಪು ಮಾಡಲಿಲ್ಲ ಅಲ್ವ, ಅದಕ್ಕಾಗಿ ಯಾಕೆ ಈ ಕ್ಷಮೆ ಎಲ್ಲ. ನಿನಗೆ ಅಷ್ಟು ಬೇಸರವಾಗಿದ್ದರೆ ನೀನು ನನಗೆ ಒಂದು ಕೆಲಸ ಮಾಡಿಕೊಡಬೇಕು" ಎಂದು ಶರತ್ತೊಂದನ್ನು ಹಾಕುತ್ತಾರೆ. "ಅಯ್ಯೋ, ಅಪ್ಪಾಜಿ, ನೀವು ಕೇಳಬೇಕ, ಹೇಳಿ ನಾನೇನು ಮಾಡಬೇಕು?" ಎಂದು ಅಮೃತಾ ಕೇಳುತ್ತಾಳೆ. ರಾಯರು "ಈಗ ಸಮಯವಾಗಿದೆ. ಇಲ್ಲಿ ಮಾತಾಡುವುದು ಬೇಡ, ನೀನು ಹಾಸ್ಟೆಲಿಗೆ ಹೊರಡು. ನಿನ್ನ ಕೆಲಸಗಳಲ್ಲವನ್ನು ಮುಗಿದ ಮೇಲೆ ನಡೆದ ಘಟನೆಯನ್ನೊಮ್ಮೆ ನೆನಸಿಕೂ, ನಿನ್ನ ನೆನಪಿಗೆ ಬಂದದೆಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸು, ನಂತರ ಅವನಲ್ಲಿ ನಿನಗೆ ನಿಜವಾಗಲೂ ಏನಾದರು ವಿಶೇಷತೆ ಕಂಡರೆ ತಿಳಿಸು. ನಾನಿನ್ನು ಬರುತ್ತೇನೆ" ಎಂದು ಹೇಳಿ ಹೊರಡಲು ಮೇಲೇಳುತ್ತಾರೆ. ಏನಿರಬಹುದು ಎಂದು ಮನಸ್ಸಿಗೆ ತಕ್ಷಣ ಸುಳೀದರೂ ರಾಯರು ಮೇಲೆದ್ದ ಕಾರಣ "ಸರಿ ಅಪ್ಪಾಜಿ, ನಾಳೆ ಸಿಗೋಣ" ಎಂದು ಅಮೃತಾ ಹೇಳುತ್ತಾಳೆ. ರಾಯರು ೫-೬ ಹೆಜ್ಜೆ ಹೋಗಿರಬೇಕು ಅಮೃತಾಳಿಗೆ ಏನೋ ಹೊಳೆದಂತಾಗಿ ರಾಯರನ್ನು ಕರೆದು ನಿಲ್ಲಿಸಿ ಅವರ ಬಳಿ ಹೋಗುತ್ತಾಳೆ. ಏನು ಅನ್ನುವಂತೆ ರಾಯರು ತಿರುಗಿ ನೋಡುತ್ತಾರೆ. ಅಮೃತಾ "ಯೋಚಿಸುವುದು ಸರಿ, ಯಾಕೆಂದು ನಾನು ಕೇಳುವುದಿಲ್ಲ, ಆದರೆ ಅವರ ಹೆಸರನ್ನಾದರೂ ಹೇಳುತ್ತೀರ?" ಎಂದು ಕೇಳುತ್ತಾಳೆ. "ಓಹೋ ಅಗತ್ಯವಾಗಿ, ಇಷ್ಟು ಹೊತ್ತು ಯಾಕೆ ನೀನು ಕೇಳಿಲ್ಲವಲ್ಲ ಎಂದುಕೊಳ್ಳುತ್ತಿದ್ದೆ. ಅವನ ಹೆಸರು ಭಾಸ್ಕರ್ ಚಂದ್ರ" ಎಂದು ರಾಯರು ಹೆಸರನ್ನು ಹೇಳಿ ರಾಯರು ಅಲ್ಲಿಂದ ಹೊರಡುತ್ತಾರೆ.
ಮನೆಗೆ ಬಂದ ರಾಯರು ಹೆಂಡತಿ ಕೂತಿರುವುದನ್ನು ನೋಡಿ "ಇಂದಾದರೂ ರಾತ್ರಿ ಒಟ್ಟಿಗೆ ಕೂತು ಊಟ ಮಾಡೋಣ" ಎನ್ನುತ್ತಾರೆ. "ಇಲ್ಲಾರೀ, ಇಂದು ಸಮಾಜದಲ್ಲಿ ಒಂದು ಮುಖ್ಯವಾದ ಕೆಲಸವಿದೆ, ರಾತ್ರಿ ಬರುವುದು ತಡವಾಗಬಹುದು. ನೀವು ಊಟ ಮಾಡಿ ಮಲಗಿ" ಎಂದು ತನ್ನ ದೃಷ್ಠಿಯನ್ನು ದೂರದರ್ಶನದ ಕಡೆಗೆ ತಿರಿಗಿಸುತ್ತಾಳೆ ರಾಯರ ಹೆಂಡತಿ. "ಮತ್ತೆ ವಿಶ್ವ...?" ಎಂದು ಮಗನ ಬಗ್ಗೆ ವಿಚಾರಿಸುತ್ತಾರೆ. "ಅವನಿಗೆ ಯಾವುದೋ ಪಾರ್ಟಿ ಇದೆಯಂತೆ, ಬೆಳಗ್ಗೆ ಬರುತ್ತಾನಂತೆ " ಎಂದು ಹೇಳಿ ಮತ್ತೆ ದೂರದರ್ಶನದ ಕಡೆ ತಿರುಗುತ್ತಾರೆ ರಾಯರ ಹೆಂಡತಿ, ಸರೋಜ. ಹೆಂಡತಿಯ ಮಾತು ಕೇಳಿ ದಿನಾ ಇದ್ದದ್ದೆ ಎಂದುಕೊಂಡು ತಮ್ಮ ಕೋಣೆ ಸೇರುತ್ತಾರೆ ರಾಯರು. ಕೊಣೆಗೆ ಬಂದ ತಕ್ಷಣ ಭಾಸ್ಕರ ಮತ್ತು ಅಮೃತಾಳ ಬಗ್ಗೆ ನೆನೆಯುತ್ತಾರೆ. ನಾನಂದುಕೊಂಡಂತೆ ಅಮೃತಾ ಯೋಚಿಸಿದರೆ ಖಂಡಿತ ನಾನು ಮಾಡಲಾಗದನ್ನು ಅವಳು ಮಾಡುತ್ತಾಳೆ. ಮುಂದೆ ಒಳ್ಳೆಯದ್ದನ್ನೇ ನಿರೀಕ್ಷಿಸಬಹುದು ತಾನು ಅಂದುಕೊಂಡದ್ದು ಆಗುವುದು ಎಂಬ ಭರವಸೆ ಅವರಲ್ಲಿ ಮೂಡಿತ್ತು.
ಇತ್ತ ಅಮೃತಾ ತನ್ನ ಕೋಣೆಗೆ ಬಂದು ತನ್ನ ಕೆಲಸಗಳನ್ನು ಮುಗಿಸಿ, ರಾತ್ರಿ ೮:೩೦ ಹೊತ್ತಿಗೆಲ್ಲ ಊಟ ಮುಗಿಸಿ, ನಂತರ ಕುಲಕರ್ಣಿಯವರಿಗೆ ಕರೆ ಮಾಡಿ ಮಾತಾಡುತ್ತಾಳೆ. ನಂತರ ಮಾರನೆ ದಿವಸದ ಕ್ಲಾಸಿಗೆ ತಯಾರಿ ಮಾಡಿಕೊಂಡು ಕೂತಲ್ಲಿಯೇ ರಾಯರ ಪುಸ್ತಕದ ವಿಚಾರದಿಂದ ಯೋಚಿಸಲು ಶುರುಮಾಡುತ್ತಾಳೆ. ರಾಯರು ಬೆಳಿಗ್ಗೆ ಪುಸ್ತಕ ಕಾಣದೆ ಇದ್ದಾಗ ತುಂಬಾ ಚಡಪಡಿಸಿದರು. ಅವರ ಮಾತು ಕೇಳಿದರೆ ತಾವಾಗೆ ಯಾರಿಗೂ ಆ ಪುಸ್ತಕವನ್ನು ಕೊಟ್ಟಿಲ್ಲ. ಅಂದರೆ ಅವರ ಶಿಷ್ಯ ಭಾಸ್ಕರ ಹೇಳದೆ ಕೇಳದೆ ತೆಗೆದುಕೊಂಡು ಹೋಗಿದ್ದಾರೆಂದು ಆಯಿತು. ಆದರೆ, ಆ ವಿಷಯ ಗೊತ್ತಾದಾಗ ಅಪ್ಪಾಜಿಗೆ ಎಳ್ಳಷ್ಟು ಸಿಟ್ಟಾಗಲಿಲ್ಲ. ಬದಲಾಗಿ 'ಅವನಾ ಬಿಡು' ಎಂದು ಹೇಳಿ ಸುಮ್ಮನಾದರು.  ಎಲ್ಲಕ್ಕಿಂತ ಆಶ್ಚರ್ಯವೆಂದರೆ ಈಗಿನ ಕಾಲದಲ್ಲಿ, ಪಠ್ಯದಲ್ಲಿ ಇಲ್ಲದಿರುವ ವಿಷಯದ ಬಗ್ಗೆ, ಅದರಲ್ಲೂ ಸಾವರ್ಕರ್ ಬಗ್ಗೆ ಅವರು ಮಾತಾಡಿದ್ದು. ಸಾವರ್ಕರ್ ರವರ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಕೊಡುತ್ತಿದ್ದಾರೆಂಬುದೇ ಒಂದು ಅಚ್ಚರಿ ಮತ್ತು ವಿದ್ಯಾರ್ಥಿಗಳಲ್ಲಿ ಅವರ ಬಗ್ಗೆ ಕುತೂಹಲ ಹುಟ್ಟಿಸುತ್ತಿದ್ದಾರೆ ಎಂಬುದು ಸಂತಸದ ಸಂಗತಿ. ಅವರ ವರ್ಣನೆ ಕೂಡ ಅಷ್ಟೇ ಸೊಗಸಾಗಿತ್ತು. ಅವರ ಪಾಠವನ್ನು ಪುನಃ ಕೇಳುವಂತಿತ್ತು. ಮುಂದಿನ ಪೀಳಿಗೆಗೆ ನಮ್ಮ ಸ್ವಾತಂತ್ರ್ಯದ ಇತಿಹಾಸ, ನಮ್ಮ ಸಂಸ್ಕೃತಿ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಸಂತಸದ ವಿಚಾರ. ಆದರೆ, ನಾನು ಮಧ್ಯೆ ಮಾತಾಡಿದಾಗ ಹೊಸಬರು ಅಂತಲೂ ನೋಡದೆ, ಗುರುಗಳಿದ್ದಾರೆ ಎಂಬುದನ್ನು ನೋಡದೆ ಅಷ್ಟು ಒರಟಾಗಿ ಯಾಕೆ ನಡೆದುಕೊಂಡರು? ಇತಿಹಾಸದ ಬಗ್ಗೆ ಅಷ್ಟು ಚೆನ್ನಾಗಿ ವರ್ಣನೆ ಮಾಡುತ್ತಿದ್ದ ಅವರಿಗೆ ನಮ್ಮ ಸಂಸ್ಕೃತಿ ಪ್ರಕಾರ ಹೆಣ್ಣು ಮಕ್ಕಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿಲ್ಲವಾ? ಅಥವಾ ತಾನೊಬ್ಬ ಒಳ್ಳೆಯ ಪ್ರಾಧ್ಯಾಪಕ ಎಂಬ ಅಹಂ ಭಾವನೆಯೆ? ಅವರು ಹಾಗೆ ನಡೆದುಕೊಂಡರೂ ಅಪ್ಪಾಜಿ ಏನೊಂದೂ ಮಾತಾಡಲಿಲ್ಲ ಬದಲಾಗಿ, ಅವರಲ್ಲಿ ವಿಶೇಷತೆ ಅಥವಾ ವಿಚಿತ್ರವೇನಾದರೂ ಇದ್ಯ ಎಂದು ಕೇಳಿದರು. ಯಾಕೆ? ಬಹುಶಃ ಅವರ ಗುಣ ಸ್ವಭಾವವೇ ಹಾಗಿದ್ದು ಆದರೂ ನಮ್ಮ ಸ್ವಾತಂತ್ರ್ಯದ ಇತಿಹಾಸ, ಸಂಸ್ಕೃತಿ ಬಗ್ಗೆ ಮಾತಾಡುತ್ತಾರಲ್ಲ ಎಂಬ ವಿಶೇಷತೆಯೇ? ಅಥವಾ ಇಷ್ಟೆಲ್ಲಾ ಗೊತ್ತಿದ್ದು ಅಷ್ಟು ಒರಟನಾಗಿದ್ದಾನೆ ಎಂಬ ವೈಚಿತ್ರ್ಯವೇ? ಹೌದು, ಅವರು ವರ್ಣನೆ ಮಾಡುತ್ತಿದ್ದ ರೀತಿ ಬಲು ಸೊಗಸಾಗಿತ್ತು. ವಿಷಯವನ್ನು ಚೆನ್ನಾಗಿ ಗ್ರಹಿಸಿದ್ದಾರೆ. ಅವರು ಪಾಠ ಮಾಡುತ್ತಿರುವ ಉದ್ದೇಶ ಒಳ್ಳೆಯದು. ಇಷ್ಟಿದ್ದರೂ ನಮ್ಮ ಜೊತೆ ಅಷ್ಟು ಒರಟಾಗಿ ನಡೆದುಕೊಂಡರಲ್ಲ ಯಾಕೆ? ಇದಕ್ಕೇನಾದರೂ ಬಲವಾದ ಕಾರಣವಿರಬೇಕು, ಇಲ್ಲದಿದ್ದರೆ ಅಪ್ಪಾಜಿ ಯಾಕೆ ನನಗೆ ಅವರ ವಿಚಾರ ಹೇಳುತ್ತಿದ್ದರು? ಎಂಬಂತಹ ಪ್ರಶ್ನೆಗಳು ಮನದಲ್ಲಿ ಮೂಡುತ್ತದೆ. ತುಸು ಹೊತ್ತಲ್ಲಿ ನಿದ್ರೆ ಬರುತ್ತಿದ್ದಂತೆ ಆಕಳಿಸುತ್ತಾ ಹೀಗೆ ಯೋಚಿಸುತ್ತಾ ಕೂತರೆ ಪ್ರಯೋಜನವಿಲ್ಲ, ನಾಳೆ ಅಪ್ಪಾಜಿ ಹತ್ತಿರ ಮತಾಡಿದರೆ ಇದಕ್ಕೆಲ್ಲಾ ಉತ್ತರ, ಈಗ ಮಲಗೋಣ ಎಂದು ನಿದ್ರೆಗೆ ಜಾರುತ್ತಾಳೆ. 
ಅಮೃತಾಳನ್ನು ಭೇಟಿ ಮಾಡಲು ರಾಯರು ಹೆಚ್ಚು ಉತ್ಸುಕರಾಗಿದ್ದರು. ಅವಳು ಏನು ಯೋಚಿಸಿರಬಹುದು? ನಾನಂದುಕೊಂಡಂತೆ ಅವಳು ಯೋಚಿಸಿದ್ದೇ ಆದರೆ ಭಾಸ್ಕರ ಒಬ್ಬ ಒಳ್ಳೆ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿ ಬಾಳುವುದಂತೂ ಖಂಡಿತ. ನನಗೆ ಸಾಧ್ಯವಾಗದಿದ್ದನ್ನು ಅವಳು ಸಾಧ್ಯವಾಗಿಸಬಹುದು. ಇದರಿಂದ ನನ್ನ ಉದ್ದೇಶವೂ ಸಾರ್ಥಕವಾಗುತ್ತದೆ ಎಂದು ಯೋಚಿಸುತ್ತಾ ಅಮೃತಾ ಬರುವುದನ್ನೇ ಎದುರು ನೋಡುತ್ತಾರೆ ಅಚ್ಯುತರಾಯರು.
"ಕ್ಷಮಿಸಿ ಅಪ್ಪಾಜಿ, ಸ್ವಲ್ಪ ತಡವಾಯಿತು" ಎಂದು ಕಾಲೇಜಲ್ಲಿ ಅಂದಿನ ಕೆಲಸ ಮುಗುಸಿಕೊಂಡು ಬಂದ ಅಮೃತಾ ಅಚ್ಯುತರಾಯರ ಎದುರಿಗೆ ಕೂರುತ್ತಾಳೆ.  "ಇರಲಿ ಪರವಾಗಿಲ್ಲ, ಹಾಸ್ಟೆಲಿಗೆ ಹೋಗಿ ಬಂದ್ಯ" ಎಂದು ರಾಯರು ಕೇಳುತ್ತಾರೆ. "ಹುಂ, ಎಲ್ಲ ಕ್ಲಾಸುಗಳು ಬೇಗ ಮುಗಿದಿತ್ತು ಆದ್ದರಿಂದ ರೂಮಿಗೆ ಹೋಗಿ ಬಂದೆ" ಎಂದು ಮುಂದುವರೆಸುತ್ತಾ, "ಅಪ್ಪಾಜಿ, ನೀವು ಏನು ತಿಳಿಯಲಿಲ್ಲ ಎಂದರೆ ಹೊರಗೆ ಹೋಗೋಣವ?" ಎಂದು ಕೇಳುತ್ತಾಳೆ ಅಮೃತಾ. "ಖಂಡಿತವಾಗಿ, ಇಲ್ಲೇ ಒಂಟಿಕೊಪ್ಪಲ್ ಹತ್ತಿರ ಹೋಗೋಣ, ಅಲ್ಲೇ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಾ ಮಾತಾಡಬಹುದು" ಎಂದು ರಾಯರ ಕಾರಿನಲ್ಲಿ ಹೊರಡುತ್ತಾರೆ. ಹೋಟೆಲೊಂದರಲ್ಲಿ ತಿಂಡಿ ಆರ್ಡರ್ ಮಾಡಿ ಮಾತು ಮುಂದುವರೆಸುತ್ತಾರೆ. "ಹೇಳು ಅಮೃತಾ, ಯೋಚನೆ ಮಾಡಿದ್ಯಾ? ಏನನ್ನಿಸಿತು ಭಾಸ್ಕರನ ಬಗ್ಗೆ?" ಎಂದು ಕುತೂಹಲದಿಂದ ಕೇಳುತ್ತಾರೆ ರಾಯರು. "ನೀವು ಹೇಳಿದ ಹಾಗೆ ನಾನೂ ಯೋಚಿಸಿದೆ. ನಿನ್ನೆ ನಡೆದ ಘಟನೆಗಳನ್ನೆಲ್ಲಾ ಮೆಲಕು ಹಾಕಿದೆ, ನಂತರ ನನ್ನ ಮನಸ್ಸಿನಲ್ಲಿ ೨ ಪ್ರಶ್ನೆಗಳು ಎದ್ದಿವೆ, ಅವನ್ನು ನಿಮ್ಮ ಹತ್ತಿರ ಕೇಳಬೇಕು ಎಂದನ್ನಿಸಿತು" ಎಂದು ಅಮೃತಾ ಹೇಳುತ್ತಾಳೆ. ನನ್ನ ಮಾತಿಗೆ ಬೆಲೆ ಕೊಟ್ಟು ಯೋಚಿಸಿದ್ದಾಳೆ ಒಳ್ಳೇದು ಎಂದು ಯೋಚಿಸುತ್ತಾ ಏನು ಪ್ರಶ್ನೆಗಳಿರಬಹುದು? ಎಂದು ಕುತೂಹಲವಾದರೂ ತೋರಿಸಿಕೊಳ್ಳದೆ "ಅದೇನು ಪ್ರಶ್ನೆಗಳು ಕೇಳಮ್ಮ" ಎಂದು ಸಹಜವಾಗೆ ಕೇಳುತ್ತಾರೆ.
೨. ನಮ್ಮ ದೇಶದ ಇತಿಹಾಸ, ಸಂಸ್ಕೃತಿ ಬಗ್ಗೆ ಅವರು ತಿಳಿದುಕೊಂಡಿದಾರೆಂದು ಅವರು ಪಾಠ ಮಾಡುವಾಗಲೇ ಅರ್ಥ ಮಾಡಿಕೊಂಡೆ ಆದರೆ, ಅಷ್ಟು ತಿಳಿದವರು ನಮ್ಮ ಜೊತೆ ಅಷ್ಟು ಒರಟಾಗಿ ಯಾಕೆ ನಡೆದುಕೊಂಡರು? ಹೇಳೊದೊಂದು ಮಾಡೋದೊಂದು ಅವರ ಸ್ವಭಾವವೆ ಅಥವಾ ಇದರ ಹಿಂದೆ ಬೇರೇನೋ ಬಲವಾದ ಕಾರಣ ಏನು? ಇವೇ ನನ್ನ ಪ್ರಶ್ನೆಗಳು ಎಂದು ಅಮೃತಾ ಕೇಳುತ್ತಾಳೆ.
ತಾನು ಅಂದುಕೊಂಡಂತೆ ಅಮೃತಾ ಯೋಚಿಸಿದ್ದಾಳೆ ಎಂದು ಮನಸ್ಸಿನಲ್ಲೇ ಖುಷಿಪಡುತ್ತಾ ರಾಯರು "ಅವನು ತುಂಬಾ ಒಳ್ಳೆಯ ಹುಡುಗ, ಯಾರ ತಂಟೆಗೂ ಹೋಗುವುದಿಲ್ಲ, ತಾನಾಯಿತು ತನ್ನ ಕೆಲಸವಾಯಿತು ಎಂದು ಇರುತ್ತಾನೆ. ನೀನೇ ಹೇಳಿದಂತೆ ಭಾರತದ ಇತಿಹಾಸ, ಸಂಸ್ಕೃತಿಯನ್ನು ಚೆನ್ನಾಗಿ ಪಾಠ ಮಾಡುವುದಲ್ಲದೇ, ನಮ್ಮ ಮಕ್ಕಳಿಗೆ ಅದನ್ನು ತಿಳಿಹೇಳಬೇಕು, ನಮ್ಮ ಹಿಂದೂ ಸಂಸ್ಕೃತಿಯನ್ನು ತಳಹದಿಯಿಂದಲೇ ಬಲ ಪಡಿಸಬೇಕು ಎಂಬ ಉದ್ದೇಶದೊಂದಿಗೆ ಅವನು ದುಡಿಯುತ್ತಿದ್ದಾನೆ. ಅವನ ಈ ಉದ್ದೇಶ ಅವನು ವಿದ್ಯಾರ್ಥಿಯಾಗಿದ್ದಾಗಲೇ ನಾನು ಗಮನಿಸಿದ್ದೆ. ಕೆಲವು ಪ್ರಭಂದಗಳನ್ನು ಬರೆದಿದ್ದ. ಅವು ನನ್ನನ್ನು ಆಕರ್ಷಿಸಿತು. ಆದ್ದರಿಂದ ಅವನು ನನಗೆ ಶಿಷ್ಯನಾದ. ನನ್ನ ಜೊತೆ ಕೆಲವು ಸಲ ಮಾತಾಡೋನು. ನನ್ನನ್ನು ಅವನು ಗುರು ಅಂದುಕೊಂಡಿದ್ದಾನೋ ಇಲ್ಲವೋ, ಆದರೂ ಸ್ವಲ್ಪ ಗೌರವಿಸುತ್ತಾನೆ. ಒರಟುತನ ನನಗೂ ಹಿಡಿಸುವುದಿಲ್ಲ. ಆದರೆ, ಅವನಿಗಿರುವ ಸಾಮಾಜಿಕ ಕಳಕಳಿ, ನಮ್ಮ ದೇಶ, ಸಂಸ್ಕೃತಿಗಳ ಬಗೆಗಿನ ಉದ್ದೇಶ ಬೇರೆಯವರಲ್ಲಿ ಕಾಣುವುದಿಲ್ಲ. ಈ ಒರಟುತನ ಯಾಕೆ ಎಂಬುದು ನನಗೂ ಒಗಟಾಗೆ ಉಳಿದಿದೆ" ಎಂದು ರಾಯರು ಉತ್ತರಿಸುತ್ತಾರೆ.
ರಾಯರ ಮಾತನ್ನು ಕೇಳಿ ಅಮೃತಾಳಿಗೆ, ಭಾಸ್ಕರನ ಬಗ್ಗೆ ಗೌರವ ಮೂಡುತ್ತದೆ. ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿ, ತಕ್ಷಣ ರಾಯರನ್ನು "ಇಂತಹ ಒಳ್ಳೆ ಗುಣಗಳಿರುವವರು ಯಾಕಿಷ್ಟು ಒರಟಿರಬಹುದು?" ಎಂದು ಕೇಳುತ್ತಾಳೆ. ಪ್ರಶ್ನೆ ಕೇಳಿದ ಮರುಕ್ಷಣವೇ "ಇದಕ್ಕೆ ನಿನ್ನಿಂದಲೇ ಉತ್ತರ ಸಿಗಬೇಕು!" ಎಂದು ರಾಯರು ಹೇಳುತ್ತಾರೆ. "ಏನು?" ಎನ್ನುತ್ತಾ ಆಶ್ಚರ್ಯ ಮತ್ತು ಪ್ರಶ್ನಾರ್ಥಕವಾಗಿ ಅಮೃತಾ ರಾಯರನ್ನು ನೋಡುತ್ತಾರೆ. "ಏಳು ಹೊರಡೋಣ, ಹೋಗುತ್ತಾ ಮಾತಾಡೋಣ" ಎಂದು ಹೇಳಿ ಹೋಟೆಲಿನಿಂದ ಕಾರಿಗೆ ಬಂದು ಕೂತು ಕಾಲೇಜಿನ ಕಡೆ ಗಾಡಿ ತಿರುಗಿಸುತ್ತಾರೆ. ಮತ್ತೆ ಮಾತು ಮುಂದುವರೆಸುತ್ತಾ "ಹೌದು ಅದೊಂದು ಪ್ರಶ್ನೆಗೆ ನೀನೇ ಉತ್ತರಿಸಬೇಕು ಯಾಕೆಂದರೆ ಅವನ ಒರಟು ತನವನ್ನು ಬದಿಗಿಟ್ಟು ಅವನು ಉದ್ದೇಶವನ್ನು ಗಮನಿಸಿದ್ದು ಇಷ್ಟು ದಿನಕ್ಕೆ ನಾವಿಬ್ಬರೆ. ನಾನು ಈ ಹಿಂದೆ ಕಾರಣವನ್ನು ತಿಳಿದು ಆತನಿಂದ ಮತ್ತಷ್ಟು ಒಳ್ಳೆಯದನ್ನು ಮಾಡಿಸಲು ಪ್ರಯತ್ನ ಪಟ್ಟೆ, ಆದರೆ ಸಾಧ್ಯವಾಗಲಿಲ್ಲ. ಆದ್ದರಿಂದ ನಿನ್ನನ್ನು ಕೇಳುತ್ತಿದ್ದೇನೆ" ಎಂದು ಭಾವುಕರಾಗಿ ಹೇಳುತ್ತಾರೆ. "ಅಯ್ಯೋ ಅಪ್ಪಾಜಿ ನೀವು ಹಿರಿಯರು ಹೀಗೆಲ್ಲಾ ಕೇಳಬಾರದು ನನಗೆ ಶ್ರೇಯಸ್ಸಲ್ಲ, ಅಲ್ಲದೆ ಅವರು ಯಾರು ಅಂತಾನೆ ತಿಳಿದಿಲ್ಲ, ಅವರ ಆ ನಡೆತೆಗೆ ನಾನು ಹೇಗೆ ಉತ್ತರಿಸಬಲ್ಲೇ?" ಎಂದು ಕೇಳುತ್ತಾಳೆ. ಸಾಧ್ಯವಿಲ್ಲ ಎಂದು ಹೇಳಬೇಕು ಎಂದುಕೊಂಡರೂ, ಹೇಳುವುದಿಲ್ಲ. "ಕ್ಷಮಿಸು, ನಾನು ಭಾವುಕನಾಗಿಬಿಟ್ಟೆ, ಹೇಗೆ ಎಂಬುದನ್ನು ಮುಂದೆ ಯೋಚಿಸೋಣ. ಈಗ ಹೊರಡು, ನಿನ್ನೆ ತರಹ ಒಬ್ಬರೆ ಯೋಚನೆ ಮಾಡು, ಸ್ವಲ್ಪ ದಿನಗಳು ಬೇಕಾದರು ತಗೋ, ನಂತರ ಯೋಚಿಸೋಣ" ಎಂದು ಹೇಳಿ ರಾಯರು ಮನೆಗೆ ಮತ್ತು ಅಮೃತಾ ಹಾಸ್ಟೆಲಿಗೆ ಹೊರಡುತ್ತಾರೆ.
ಮನೆಗೆ ಬಂದ ರಾಯರ ಮುಖದಲ್ಲಿ ಒಂದು ವಿಧವಾದ ಸಮಾಧಾನ ಕಾಣಿಸುತ್ತಿತ್ತು. ಹೆಂಡತಿಯೊಂದಿಗಾಗಲಿ, ಮಗನೊಂದಿಗಾಗಲಿ ಅಷ್ಟಾಗಿ ಬೆರೆಯದಿದ್ದ ರಾಯರು ಯಾರೊಂದಿಗೂ ಮಾತಾಡದೆ, ನೇರವಾಗಿ ತಮ್ಮ ಕೋಣೆಯನ್ನು ಸೇರುತ್ತಾರೆ. ತಮ್ಮ ಕೆಲಸಗಳನ್ನು ಮುಗಿಸಿ, ಮನೆಗೆಲಸದವ ಬಂದು ಊಟಕ್ಕೆ ಕರೆದಾಗ ಕೆಳಗೆ ಹೋಗುತ್ತಾರೆ. ಊಟ ಮಾಡುವಾಗಲೂ ಏನೊಂದು ಮಾತಿಲ್ಲ. ಆದರೆ, ಅವರ ಮುಖದಲ್ಲಿ ಮಾತ್ರ ಸಮಾಧಾನಕರ ಭಾವ ಕಾಣುತ್ತಿತ್ತು. ಸರೋಜ ಮತ್ತು ಮಗ ವಿಶ್ವ ಅಚ್ಚರಿಯೊಂದಿಗೆ ಏನಾಗಿದೆ ಎನ್ನುವಂತೆ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ. ಆದರೂ ಇಬ್ಬರೂ ಪ್ರಶ್ನೆ ಮಾಡುವುದಿಲ್ಲ. ಮತ್ತೊಮ್ಮೆ ಅದೇ ಮೌನದೊಂದಿಗೆ ರಾಯರು ತಮ್ಮ ಕೋಣೆ ಸೇರುತ್ತಾರೆ. "ಹೌದು, ಆ ಹುಡುಗಿ ನಾನು ಅಂದುಕೊಂಡಂತೆ ಯೋಚಿಸುತ್ತಿದ್ದಾಳೆ. ನಾನು ಎಷ್ಟು ಪ್ರಯತ್ನ ಪಟ್ಟೆ ಆದರೆ, ನನ್ನ ಕೈಲಿ ಸಾಧ್ಯವಾಗಲಿಲ್ಲ, ಬಹುಶಃ ನಾನು ಅಂದುಕೊಂಡಂತೆ ಇವಳು ತಾಳ್ಮೆಯಿಂದ ಯೋಚಿಸಿದ್ದೆ ಆದರೆ, ಅವನು ಎಲ್ಲರೊಂದಿಗೆ ಬೆರೆತು ಜೀವನ ನಡೆಸುವಂತಾಗುತ್ತದೆ. ಹೌದು, ಇದು ಖಂಡಿತ ಸಾಧ್ಯ" ಎಂದು ಮಲಗಲು ತೆರಳುತ್ತಾರೆ. ಎಲ್ಲಾ ಒಳ್ಳೆಯದಾಗುತ್ತದೆ ಎಂದುಕೊಳ್ಳುತ್ತಾ ಸಮಾಧಾನಕರವಾದ ನಗುವಿನೊಂದಿಗೆ ಮಲಗುತ್ತಾರೆ ರಾಯರು.
ರಾಯರ ಮಾತನ್ನು ಕೇಳಿದ ಆ ಕ್ಷಣದಿಂದ ಅಮೃತಾಳ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಕಾಡಲು ಶುರು ಮಾಡುತ್ತದೆ. "ಯಾವುದೇ ವಿಚಾರದ ಬಗ್ಗೆ ಮಾತಾಡಬೇಕಾದರೆ ಸಹಜವಾಗೆ ಮಾತಾಡುವ ಅಪ್ಪಾಜಿ, ಭಾಸ್ಕರನ ಬಗ್ಗೆ ಮಾತಾಡಬೇಕಾದರೆ ತುಂಬಾ ಭಾವುಕರಾಗುತ್ತಾರಲ್ಲ? ನಿನ್ನೆ ನನ್ನ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಗಳು - ಅವರು ಯಾಕಷ್ಟು ಒರಟು ಎಂದು ಅಪ್ಪಾಜಿಯನ್ನು ಕೇಳಿದಾಗ ನಾನೇ ಅದಕ್ಕೆ ಉತ್ತರಿಸಬೇಕು ಎಂದು ನನ್ನನ್ನೇ ಕೇಳಿಕೊಂಡರಲ್ಲ ಯಾಕೆ?" ಅವನ ಒರಟುತನಕ್ಕೆ ಕಾರಣ ತಿಳಿಯಲು ಅವರ ಪ್ರಯತ್ನಪಟ್ಟಿದ್ದಾರೆ ಆದರೆ, ಸಾಧ್ಯವಾಗಲಿಲ್ಲ ಎಂದು ಹೇಳಿದರು. ಹಾಗಾದರೆ, ನನ್ನಿಂದ ತಾನೇ ಅದು ಹೇಗೆ ಸಾಧ್ಯವಾದೀತು? ಕಾಲೇಜಿನಿಂದ ಹೊರಟ ನಾವು ಅವರ ಮನೆಗೆ ಕರೆದೊಯ್ಯುತ್ತಾರೆ ಎಂದುಕೊಂಡಿದ್ದೆ ಆದರೆ, ಅದಾಗಲಿಲ್ಲ. ಅವರ ಮನೆಯವರ ಬಗ್ಗೆ ಏನೊಂದು ಮಾತಾಡಲಿಲ್ಲ. ನನ್ನ ಶಿಷ್ಯ ಎಂದು ಹೇಳಿಕೊಳ್ಳುವ ಭಾಸ್ಕರನ ಬಗ್ಗೆ ಯಾಕಿಷ್ಟು ಕಾಳಜಿ? ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನಿಂದ ಅವರು ಅಪೇಕ್ಷಿಸುತ್ತಿವುದಾದರೂ ಏನು?" ಎಂದು ತನ್ನನ್ನು ತಾನೇ ಪದೆ ಪದೇ ಕೇಳುಕೊಳ್ಳುತ್ತಾಳೆ. ಯಾವುದಕ್ಕೂ ಉತ್ತರ ಹೊಳೆಯುವುದಿಲ್ಲ ಬದಲಾಗಿ ಮತ್ತಷ್ಟು ಯೋಚನೆ, ಪ್ರಶ್ನೆಗಳು ಮನಸ್ಸಿಗೆ ಬರುತ್ತದೆ.  "ಅವನು ಯಾರೋ ಒರಟಾಗಿ ನಡೆದುಕೊಳ್ಳುತ್ತಾನೆ ಅಂದರೇ ಅಪ್ಪಾಜಿ ಯಾಕೆ ತಲೆಕೆಡೆಸಿಕೊಳ್ಳಬೇಕು? ಅದೂ ಅಲ್ಲದೆ ಅವರ ಯೋಚನೆಗಳನ್ನು ನನ್ನ ತಲೆ ಮೇಲೆ ಹಾಕಿ ನಾನೂ ಯೋಚಿಸುವ ರೀತಿ ಮಾಡುತ್ತಿದ್ದಾರಲ್ಲ ಯಾಕೆ? ಹೌದು, ನಾನಾದರೂ ಯಾಕೆ ಇದರಲ್ಲಿ ಮೂಗು ತೂರಿಸಬೇಕು. ನಾನಾಯ್ತು ನನ್ನ ಕಥೆಯಾಯ್ತು ಎಂದಿರುತ್ತೇನೆ" ಎಂದು ಅಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳುತ್ತಾಳೆ.
ನಂತರ ಎಂದಿನಂತೆ ಊಟಕ್ಕೆಂದು ಕಾಂಟೀನಿಗೆ ಹೋಗಿ ಇತರ ಅಧ್ಯಾಪಕರೊಂದಿಗೆ ಊಟಕ್ಕೆ ಕೂರುತ್ತಾಳೆ. ಅವರೊಂದಿಗೆ ಊಟ ಮಾಡುತ್ತಿದ್ದ ಶಾಲಿನಿ "ಎನ್ರಿ ಅಮೃತಾ, ರಾಯರ ಜೊತೆ ಎಲ್ಲೋ ಹೊರಗೆ ಹೋಗಿದ್ರಾ?" ಎಂದು ಪ್ರಶ್ನಿಸುತ್ತಾರೆ. "ಹೂಂ ಕೆಲಸವೇನು ಇರಲಿಲ್ಲ, ಅಪ್ಪಾಜೀ ಜೊತೆ ಹಾಗೆ ಮಾತಾಡುತ್ತಾ ಹೊರಗೆ ಹೋಗಿದ್ದೆ" ಎಂದು ಸಹಜವಾಗೆ ಉತ್ತರಿಸುತ್ತಾಳೆ. ಅಲ್ಲೇ ಊಟ ಮಾಡುತ್ತಿದ್ದ ಸುಹಾಸಿನಿ "ಹಾಗಾದರೆ ಚೆನ್ನಾಗೆ ಪಾಠವಾಗಿರಬೇಕು. ಹಿಂದೂ ಸಮಾಜ, ನಮ್ಮ ದೇಶ, ಸಂಸ್ಕೃತಿ ಬಗ್ಗೆ ತುಂಬಾನೆ ಹೇಳೀರಬೇಕಲ್ವ?" ಎಂದು ವ್ಯಂಗ್ಯವಾಡುತ್ತಾರೆ. ವ್ಯಂಗ್ಯವನ್ನರಿತ ಅಮೃತಾ ತುಸು ಕೋಪದಿಂದಲೇ "ನಮ್ಮ ದೇಶ, ಸಂಸ್ಕೃತಿಗಳ ಬಗ್ಗೆ ಚೆನ್ನಾಗೆ ತಿಳಿದಿದ್ದಾರೆ, ಅವರ ಬಳಿ ಕಲಿಯುವುದು ತುಂಬಾ ಇದೆ" ಎಂದು ಹೇಳುತ್ತಾಳೆ. ಅಮೃತಾಳ ಮಾತು ಕೇಳಿ ವ್ಯಂಗ್ಯದ ನಗುವಿನೊಂದಿಗೆ "ಚೆನ್ನಾಗೆ ಪಾಠವಾಗಿದೆ" ಎಂದು ಆಡಿಕೊಳ್ಳುತ್ತಾಳೆ. ಮುಂದುವರೆಸುತ್ತಾ "ಅವರ ಒರಟ ಶಿಷ್ಯನ ಬಗ್ಗೆಯೂ ಹೇಳಿರಬೇಕಲ್ವ?" ಎಂದು ಶಾಲಿನಿ ಕೂಡ ಹೇಳುತ್ತಾರೆ. ಈ ಮಾತನ್ನು ಕೇಳಿ ಮತ್ತೂ ಕೋಪಿಸಿಕೊಂಡ ಅಮೃತಾ ರೇಗಬೇಕು ಎನ್ನುವಷ್ಟರಲ್ಲಿ ಇವರ ಮಾತನ್ನು ಗಮನಿಸುತ್ತಾ ಅಲ್ಲೇ ಕೂತಿದ್ದ ಶೈಲಜ "ನಿಮಗೆ ಯಾಕೆ ಬೇರೆಯವರ ವಿಚಾರ" ಎಂದು ಸುಮ್ಮನಿರಲು ಹೇಳುತ್ತಾರೆ. ಶೈಲಜ ಅಮೃತಾಳನ್ನು ಕುರಿತು "ಮತ್ತೆ ಹೇಗಿದೆ ಕಾಲೇಜು? ಹೊಸದಾಗಿ ಕೆಲಸಕ್ಕೆ ಸೇರಿದ್ದೀರ. ಪಾಠ, ಮಕ್ಕಳೆಲ್ಲ ಹೇಗಿದ್ದಾರೆ?"ಎಂದು ಕೇಳುತ್ತಾ ವಿಷಯವನ್ನು ಬೇರೆ ಕಡೆ ತಿರಿಗಿಸುತ್ತಾರೆ. "ಹಾಂ ಚಿನ್ನಾಗೆ ಇದೆ, ಒಂದೊಂದು ಸಲ ಮಕ್ಕಳನ್ನು ನೋಡಿದಾಗ ನನ್ನ ವಿದ್ಯಾರ್ಥಿ ಜೀವನ ನೆನಪಿಗೆ ಬರುತ್ತದೆ. ಮೊದಮೊದಲು ಭಯವಾಗಬಹುದು ಎಂತ್ತಿದ್ದೆ ಆದರೆ, ಈಗ ಇಲ್ಲ ಪಾಠ ಮಾಡಬಹುದು ಎಂಬ ಆತ್ಮವಿಶ್ವಾಸವಿದೆ" ಎಂದು ಖುಷಿಯಿಂದ ಹೇಳುತ್ತಾಳೆ. "ಗುಡ್ ಒಳ್ಳೆಯ ಬೆಳವಣಿಗೆ, ಮಕ್ಕಳನ್ನು ವಿಚಾರಿಸಿದೆ ನಿಮ್ಮ ಬಗ್ಗೆ ಒಳ್ಳೆ ಅಭಿಪ್ರಾಯಗಳು ಬಂದವು. ರಾಯರು ಹೇಳಿದರು ತಮ್ಮ ಪಾಠದ ಬಗ್ಗೆ. ಇದನ್ನೇ ಮುಂದುವರೆಸಿ" ಎಂದು ಹೊಗಳುತ್ತಾರೆ ಶೈಲಜರವರು. ಊಟದ ನಂತರ ಹೊರಡುತ್ತಾ ಶೈಲಜ ಅಮೃತಾಳನ್ನು ಕರೆದು "ಅವರು ಎನೋ ಹೇಳಿದರು ಎಂದು ಕೋಪಿಸಿಕೊಳ್ಳಬೇಡ ಇವೆಲ್ಲ ಇದ್ದದ್ದೆ. ಮಕ್ಕಳಿಗೆ ಸಂಸ್ಥೆಗೆ ಒಳ್ಳೆಯ ರೀತಿಯಲ್ಲಿ ನಡೆದುಕೊ. ಏನಾದರು ತೊಂದರೆಯಾದರೆ ನನಗೆ ಹೇಳು, ಇಲ್ಲ ನಿಮ್ಮ ಅಪ್ಪಾಜಿ ರಾಯರನ್ನು ಕೇಳು" ಎಂದು ಹೇಳುತ್ತಾರೆ. ಆಯ್ತು ಎಂದುಕೊಂಡು ಮುಂದುವರೆಯುತ್ತಾ "ಎನಪ್ಪ ಉಪದೇಶ ಮಾಡುತ್ತಿದ್ದಾಳೆ ಸಾಕು ಆಯ್ತು ಅಂತನ ನಿನ್ನ ಮಾತಿನ ಅರ್ಥ" ಎಂದು ನಗುತ್ತಾರೆ. ನಗುವಿನ ಹುಡುಗಾಟವನ್ನು ಅರಿತ ಅಮೃತಾ "ಹೌದು" ಎಂದು ತಾನೂ ನಗುವಿನಲ್ಲಿ ಮುಳುಗುತ್ತಾಳೆ.
ಕೋಣೆಗೆ ಬಂದ ಅಮೃತಾ ಶಾಲಿನಿ ಮತ್ತು ಸುಹಾಸಿನಿರವರ ವ್ಯಂಗ್ಯದ ಮಾತಿನ ಬಗ್ಗೆ ಯೋಚಿಸುತ್ತಾಳೆ. "ನಮ್ಮ ಭಾಷೆ, ದೇಶ, ಸಂಸ್ಕೃತಿ ಬಗ್ಗೆ ಮಾತಡಿದರೆ, ಚರ್ಚಿಸಿದರೇ ಅದು ಮುಟ್ಟಾಳುತನ ಎಂದು ತಿಳಿದುಕೊಂಡಿದ್ದಾರಲ್ಲ. ಅಪ್ಪಾಜಿ ದೊಡ್ದವರು, ಅವರು ಬಗ್ಗೆ ವ್ಯಂಗ್ಯ ಮಾಡುತ್ತಾರಲ್ಲ, ನಾಚಿಕೆಯಾಗಬೇಕು ಇಂತಹವರಿಗೆ" ಎಂದು ಯೋಚಿಸುವಷ್ಟರಲ್ಲಿ "ತಾನು ಆಗಲೇ ಅಪ್ಪಾಜಿ, ಅವರ ಶಿಷ್ಯನ ಬಗ್ಗೆ ಯೋಚಿಸಿದ ರೀತಿಯೂ ವ್ಯಂಗ್ಯವಲ್ಲದೇ? ಹೌದು ನಾನು ಆ ರೀತಿ ಯೋಚಿಸಬಾರದಿತ್ತು. ಅನಾಥಳಾದ ನನ್ನನ್ನು ಮಗಳು ಎಂದು ಕರೆದರು. ಅವರ ಶಿಷ್ಯ ಯಾಕೆ ಒರಟು ಎಂದು ನನಗೆ ಕಂಡುಹಿಡಿಯಲು ಹೇಳುತ್ತಿದ್ದಾರೆ ಎಂದರೆ ಅವರಿಗೆ ನನ್ನ ಮೇಲಿರುವ ನಂಬಿಕೆ, ವಿಶ್ವಾಸ ಅದನ್ನು ಬಿಟ್ಟು ತಾನು ಯಾಕೆ ಅದನ್ನು ಹೊರೆ ಎಂದು ಕೊಳ್ಳಬೇಕು? ಹೌದು ಬರೀ ನಾನು, ನನ್ನ ಬಗ್ಗೆ ನನ್ನದು ಎಂಬ ಸ್ವಾರ್ಥ ಯೋಚನೆ ಮಾಡುವುದಕ್ಕಿಂತ, ನಾವು ನಮ್ಮದು ಎಂಬ ಭಾವವೇ ಶ್ರೇಷ್ಟ ಒಬ್ಬನೇ ತಿನ್ನುವುದಕ್ಕಿಂತ ಎಲ್ಲರೊಂದಿಗೆ ಹಂಚಿ ತಿನ್ನು, ಅದರ ಸುಖವೇ ಬೇರೆ" ಎಂದು ದೊಡ್ಡವರು ಹೇಳಿದ್ದಾರೆ. ತಮ್ಮ ಶಿಷ್ಯನನ್ನು ಎಲ್ಲರೊಂದಿಗೆ ಬೆರೆಯುವ ಹಾಗೆ ಮಾಡಬೇಕು ಎಂದಿದ್ದಾರೆ ಅದಕ್ಕೆ ನಾನೂ ಕೈ ಜೋಡಿಸಬೇಕು. ಇನ್ನು ಮುಂದೆ ನಾನು ಅನಾಥಳಲ್ಲ, ಅಪ್ಪಾಜಿ ನನ್ನೊಂದಿಗಿದ್ದಾರೆ. ಈ ಶಾಲೆಯ ಮಕ್ಕಳು ನನ್ನೊಂದಿಗಿದ್ದಾರೆ ಒರಟನಾದರೂ ನಮ್ಮ ದೇಶದ ಇತಿಹಾಸದ ಬಗ್ಗೆ ಸಂಸೃತಿಯ ಬಗ್ಗೆ ಕಾಳಜಿಯಿದು, ನನಗೂ ಆ ಉದ್ದೇಶವಿದೆ. ಅವನು ನನಗೆ ಒಳ್ಳೆದು ಸ್ನೇಹಿತನಾಗಿ ಎಲ್ಲರೊಂದಿಗೆ ಬೇರೆಯುವಂತಾದರೆ ಎಷ್ಟು ಚೆಂದ. ಹೌದು ಅಪ್ಪಾಜಿಯ ಮಾತನ್ನು ಕೇಳಬೇಕು. ಅವನ ಒರಟುತನ ಹೋಗಲಾರಿಸಬೇಕು" ಎಂದು ಮತ್ತೊಮ್ಮೆ ನಿರ್ಧರಿಸುತ್ತಾಳೆ.
Comments
Post a Comment