ಆಶ್ರಮದಿಂದ ಕೆಲಸಕ್ಕೆಂದು ಹೊರಟ ಅಮೃತಾಳ ಮನಸ್ಸಿನಲ್ಲಿ ಮುಂದೆ ತನ್ನ ಜೀವನದ ಬಗ್ಗೆ ಹೆಚ್ಚೇನು ಚಿಂತೆ ಇರಲಿಲ್ಲ ಬದಲಾಗಿ, ಉಪನ್ಯಾಸಕಳಾಗಿ ಮಕ್ಕಳೊಂದಿಗೆ ಹೇಗಿರುತ್ತೇನೆ ಎಂಬ ಕುತೂಹಲವಿತ್ತು. ತಾನು ಸೇರಬೇಕಿದ್ದ 'ಸರಸ್ವತಿ ವಿದ್ಯಾಮಂದಿರ' ನೆನೆಯುತ್ತಾ ಮೈಸೂರಿನ ಬಸ್ಸು ಹತ್ತುತ್ತಾಳೆ. ತನ್ನ ಜೀವನದ ೧೮-೨೦ ವರ್ಷಗಳು ಆಶ್ರಮದಲ್ಲಿ ಕಳೆದರೂ ಅವಳ ಅಭಿರುಚಿಗೆ ತಕ್ಕಂತ ಸ್ನೇಹಿತರಾರೂ ಇರಲಿಲ್ಲ. ಎಲ್ಲರೊಂದಿಗೆ ಸ್ನೇಹ ಮತ್ತು ಸಲಿಗೆಯಿಂದ ಇರುತ್ತಿದ್ದಳೇ ಹೊರತು ಅವಳಿಗೆ ತನ್ನ ಮನಸ್ಸನ್ನು ಯಾರೊಂದಿಗೂ ತೆರೆದುಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಇಷ್ಟ ಪಡುತ್ತಿರಲಿಲ್ಲ ಎನ್ನುವುದಕ್ಕಿಂತ ಅಂತಹ ಆತ್ಮೀಯರಾದವರು ಯಾರು ಇರಲಿಲ್ಲ. ಕುಲಕರ್ಣಿಯವರು ಇದ್ದರಾದರೂ ತನ್ನ ವಯಸ್ಸಿನವರಾರೂ ಆತ್ಮೀಯರಿರಲಿಲ್ಲ. ಗಣಿತದ ವಿದ್ಯಾರ್ಥಿಯಾಗಿ ಭಾರತದ ಸ್ವಾತಂತ್ರ್ಯ ಇತಿಹಾಸ, ಭಾರತೀಯ ಸಂಸ್ಕೃತಿಯ ಮೇಲಾದ ದಬ್ಬಾಳಿಕೆ ಬಗ್ಗೆ ಕುಲಕರ್ಣಿಯವರ ಬಳಿ ಚರ್ಚಿಸುತ್ತಿದ್ದಳು. ಬೇರೆಯವರ ಜೊತೆ ಈ ವಿಷಯದ ಬಗ್ಗೆ ಚರ್ಚಿಸುವ ಸಂದರ್ಭವೂ ಒದಗಿ ಬರಲಿಲ್ಲ, ಇವಳು ಹೇಳಿದರೂ ಕೇಳುವ ಆಸಕ್ತಿ ಯಾರಿಗೂ ಇರಲಿಲ್ಲ. ಈ ಕಾರಣದಿಂದಾಗಿ ಕುಲಕರ್ಣಿಯವರ ಹೊರತಾಗಿ ಆಶ್ರಮದಿಂದ ಹೊರಟ ಕೆಲ ಘಳಿಗೆಯಲ್ಲೇ ಅಲ್ಲಿನ ಅಗಲಿಕೆಯನ್ನು ಮರೆತಳು.
ಮೈಸೂರನ್ನು ತಲುಪುವಷ್ಟರಲ್ಲಿ ಸಂಜೆ ೭:೦೦ ಗಂಟೆ. ಬಸ್ ನಿಲ್ದಾಣದಿಂದ ಹೊರ ಬಂದು ಆಟೋ ಹಿಡಿದು ನೇರವಾಗಿ ವಿದ್ಯಾಮಂದಿರದ ಹಾಸ್ಟೆಲಿನ ಮುಂದೆ ಇಳಿದಾಗ ಮನಸ್ಸಿಗೆ ಒಂದು ತೆರನಾದ ಖುಷಿ. ಅಮೃತಾ ತನ್ನ ಸಾಮಾನುಗಳನ್ನು ಇಳಿಸಿಕೊಂಡು ಆಟೋದವನಿಗೆ ಹಣ ಕೊಟ್ಟು ಅಲ್ಲೇ ಇದ್ದ ಕಾವಲುಗಾರನ ಬಳಿ ತೆರಳುತ್ತಾಳೆ. ಅವರ ಬಳಿ ತೆರಳಿದ್ದನ್ನು ಗಮನಿಸಿ ಆತ ಎದ್ದು ನಿಲ್ಲುತ್ತಾನೆ. ಕೈಯಲ್ಲಿ ದೊಣ್ಣೆಯಂತಹ ಒಂದು ಲಾಟಿ, ಖಾಕಿ ಬಟ್ಟೆಯನ್ನು ಧರಿಸಿದ್ದ ಆತನ ಮೈಕಟ್ಟು ಬಲಿಷ್ಟವಾಗಿತ್ತು. ಮುಖದ ಮೇಲಿದ್ದ ಮೀಸೆಯಂತೂ ದುರ್ಗದ ಮದಕರಿನಾಯಕರ ನೆನಪು ಮಾಡುವಂತಿತ್ತು. ನಿಂತೊಡನೆ ಅಮೃತಾಳನ್ನು ನೋಡಿ ಒಂದು ನಗು ಮತ್ತು ನಮಸ್ಕಾರದೊಂದಿಗೆ "ಗುಡ್ ಈವಿನಿಂಗ್ ಮೇಡಂ, ಯಾರು ಬೇಕಿತ್ತು ನಿಮಗೆ?" ಎಂದು ಕೇಳುತ್ತಾನೆ. "ನಾನು ಅಮೃತಾ ಅಂತ, ವಿದ್ಯಾಮಂದಿರಕ್ಕೆ ಹೊಸದಾಗಿ ಬಂದಿದ್ದೇನೆ" ಎಂದು ತನ್ನ ನೇಮಕಾತಿ ಪತ್ರವನ್ನು ತೋರಿಸುತ್ತಾಳೆ. ಪತ್ರವನ್ನು ಗಮನಿಸಿದ ಕಾವಲುಗಾರ ಸಂಸ್ಥೆಯೊಳಗಿರುವ ಹಾಸ್ಟೆಲಿನ ಕಡೆ ದಾರಿತೋರಿಸುತ್ತಾನೆ. ಸಂಜೆ ದೀಪ ಹಾಕಿದ್ದರೂ ಸಹ ಸುತ್ತಲ ಪರಿಸರ ಹೇಗಿದೆ ಎಂಬುದು ಸರಿಯಾಗಿ ಕಾಣುವುದಿಲ್ಲ. ಪ್ರಸಿದ್ಧ ವಿದ್ಯಾಸಂಸ್ಥೆಯಾದರೂ ಅಲ್ಲಿದ್ದ ಹಾಸ್ಟೆಲ್ ಅಂತಹ ದೊಡ್ಡದ್ದೇನು ಆಗಿರಲಿಲ್ಲ. ಅದೊಂದು ನೆಲಮಾಳಿಗೆಯನ್ನೊಳಗೊಂಡ ನಾಲ್ಕಂತಸ್ತಿನ ಕಟ್ಟಡ. ಪ್ರತೀ ಅಂತಸ್ತಿನಲ್ಲೂ ಮೂರು ಕೋಣೆಗಳು. ಕೋಣೆ ಸಂಖ್ಯೆ ೨೦೩ ಅಮೃತಾಳಿಗಾಗಿ ಕಾಯ್ದಿರಿಸಲಾಗಿತ್ತು. ತನ್ನ ಸಾಮಾನುಗಳೊಂದಿಗೆ ಕೋಣೆಯೊಳಗೆ ಬಂದು ಕೂತಾಗ ರಾತ್ರಿ ೮:೪೫. ಬೆಳಗ್ಗಿನಿಂದಾದ ಪ್ರಯಾಣದಿಂದಾಗಿ ಸುಸ್ತಾಗಿತ್ತು. ಮುಖತೊಳೆದುಕೊಂಡು ಅಲ್ಲೇ ಇದ್ದ ಮಂಚದ ಮೇಲೆ ಹಾಗೆ ಮಲಗುತ್ತಾಳೆ. ದಣಿವಿನಿಂದಾಗಿ ಮಲಗಿದ ತಕ್ಷಣ ನಿದ್ರೆ ಬರುತ್ತದೆ. ತುಸು ಹೊತ್ತಿನಲ್ಲಿ ಅಲ್ಲೇ ಅಡುಗೆ ಕೆಲಸಮಾಡಿಕೊಂಡಿದ್ದಾತ ಬಂದು ಬಾಗಿಲು ತಟ್ಟುತ್ತಾನೆ. ಬಂದಾತ "ಮೇಡಂ, ಆಗಲೇ ೯:೧೫, ಬಂದು ಊಟ ಮುಗಿಸಿದರೆ ೧೦:೦೦ಗೆ ನಾವು ನಮ್ಮ ಕೆಲಸ ಮುಗಿಸಿ ಮಲಗುತ್ತೇವೆ ಎಂದು ಊಟಕ್ಕೆ ಅಹ್ವಾನಿಸುತ್ತಾನೆ. ಆತನನ್ನು ಹಿಂಬಾಲಿಸುತ್ತಾ ನೆಲಮಾಳಿಗೆಯಲ್ಲಿದ್ದ ಊಟದ ಮನೆಗೆ ಹೋಗುತ್ತಾಳೆ. ಊಟದ ಮನೆ; ಅದೊಂದು ೪೦-೫೦ ಜನ ಕೂರಬಹುದಾದಂದಹ ಒಂದು ಪ್ರಾಂಗಣ. ಬೇರೆ ಕಟ್ಟಡದಿಂದ ಬಂದಿದ್ದ ವಿದ್ಯಾರ್ಥಿಗಳು ತಮ್ಮದೇ ಲೋಕದಲ್ಲಿ ಮನಬಂದಂತೆ ಹರಟುತ್ತಾ ಊಟ ಮಾಡುತ್ತಿದ್ದರು. ಕೆಲವರು ಓದಲು ಸಮಯವೇ ಸಾಲದು ಎಂಬಂತೆ ಅಲ್ಲಿಯೂ ಸಹ ಓದುತ್ತಾ ಊಟ ಮಾಡುತ್ತಿದ್ದರು, ಅಲ್ಲೊಂದು ಗುಂಪು ತಮಗೆ ಟೇಬಲ್ಲಿನ ಅವಶ್ಯಕತೆ ಇಲ್ಲವೆಂಬಂತೆ ಕೈಯಲ್ಲೇ ತಟ್ಟೆಯನ್ನು ಹಿಡಿದು ಹರಟುತ್ತಾ ಊಟ ಮಾಡುತ್ತಿದ್ದರು. ಮತ್ತೊಂದು ಕಡೆ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದ ಉಪನ್ಯಾಸಕರು ಕುಳಿತಿದ್ದರು. ಇದನ್ನು ನೋಡಿ ತಾನು ಆಶ್ರಮದಲ್ಲಿ ಸಾಲಾಗಿ ಒಟ್ಟಿಗೆ ಊಟಕ್ಕೆ ಕೂರುತ್ತಿದ್ದ ನೆನಪಾಗುತ್ತದೆ. ಕಾಲ ಉರುಳಿದಂತೆ ಬದುಕಿನ ಚಿತ್ರಣವೂ ಬದಲಾಗುತ್ತದೆ ಎಂದುಕೊಂಡು ತನ್ನ ಪಾಲಿನ ಊಟವನ್ನು ತೆಗೆದುಕೊಂಡು ಉಪನ್ಯಾಸಕರು ಕೂತಿದ್ದ ಗುಂಪಿನೆಡೆಗೆ ನಡೆಯುತ್ತಾಳೆ. ಅವರುಗಳ ಮುಂದೆ ಬಂದು ಕೂತಾಗ ಯಾರಿವಳು? ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಸುಳಿಯುತ್ತದೆ.
ಅಮೃತಾ,  "ಹಲೋ ಗುಡ್ ಈವಿನಿಂಗ್, ನನ್ನ ಹೆಸರು ಅಮೃತಾ ಅಂತ. ಇಲ್ಲಿಗೆ ಬಂದಿರುವ ಹೊಸ ಗಣಿತ ಉಪನ್ಯಾಸಕಿ" ಎಂದು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾಳೆ. ಅಲ್ಲಿದ್ದ ಹಿರಿಯ ಉಪನ್ಯಾಸಕಿ ಶ್ರೀಮತಿ ಶೈಲಜ ರವರು "ಒಹ್, ನೈಸ್ ಮೀಟಿಂಗ್ ಯೂ. ನನ್ನ ಹೆಸರು ಶೈಲಜ ಅಂತ, ನಾನು ಬಿ.ಕಾಂ. ವಿದ್ಯಾರ್ಥಿಗಳಿಗೆ ಅಕೌಂಟೆನ್ಸಿ ತಗೋತೀನಿ" ಎಂದು ಹೇಳಿ, ಅಲ್ಲಿದ್ದ ಸುನಿಲ್ (ಜೀವಶಾಸ್ತ್ರ), ಅಂಕಿತ್ ವರ್ಮ (ಭೌತಶಾಸ್ತ್ರ), ಸುಹಾಸಿನಿ (ಅಂಗ್ಲಭಾಷೆ) ಮತ್ತು ಶಾಲಿನಿ (ಆಂಗ್ಲಭಾಷೆ) ರವರುಗಳನ್ನು ಪರಿಚಯ ಮಾಡಿಕೊಡುತ್ತಾರೆ. ನಂತರ ಹಾಗೆ ಮಾತಾಡುತ್ತಾ ಅಮೃತಾ ತನ್ನ ಆಶ್ರಮದ ಜೀವನದ ಬಗ್ಗೆ ಹೇಳಿಕೊಳ್ಳುತ್ತಾ ಊಟ ಮಾಡುತ್ತಾಳೆ. ಎಲ್ಲರೂ ತಮ್ಮ ಕೋಣೆಗಳಿಗೆ ಹೊರಡುತ್ತಾರೆ. ಶಾಲಿನಿ ಮತ್ತು ಸುಹಾಸಿನಿಯವರ ಜೊತೆ ಮಾತಾಡುತ್ತಾ ಅಮೃತಾ "ನಾಳೆ ಎಷ್ಟು ಹೊತ್ತಿಗೆ ಯಾರನ್ನು ಭೇಟಿ ಮಾಡಬೇಕು?" ಎಂದು ಕೇಳುತ್ತಾಳೆ.
"ಬೆಳಿಗ್ಗೆ ೯:೦೦ ಹೊತ್ತಿಗೆ ಡಾ. ಸದಾಶಿವರಾವ್ ರವರು ಬರುತ್ತಾರೆ. ಅವರ ಬಳಿ ಹೋಗಿ ನಿಮ್ಮ ನೇಮಕಾತಿ ಪತ್ರವನ್ನು ತೋರಿಸಿ ಮುಂದೆ ಏನು ಮಾಡಬೇಕೆಂದು ಅವರೇ ತಿಳಿಸುತ್ತಾರೆ." ಎಂದು ಶಾಲಿನಿ ಹೇಳುತ್ತಾರೆ.
ಸುಹಾಸಿನಿ- "ಅಂದ ಹಾಗೆ ನಿಮ್ಮ ರೂಂ ನಂಬರ್ ಯಾವುದು?"
ಅಮೃತಾ - "೨೦೩"
ಶಾಲಿನಿ - "ಸರಿ, ನಾಳೆ ಭೇಟಿಯಾಗೋಣ, ಗುಡ್ ನೈಟ್"
ಅಮೃತಾ - "ಸರಿ ಸಿಗೋಣ, ಬರುತ್ತೇನೆ" ಎಂದು ಹೇಳಿ ಎಲ್ಲರೂ ತಮ್ಮ ತಮ್ಮ ಕೋಣೆಗಳಿಗೆ ತೆರಳುತ್ತಾರೆ.
ಕೋಣೆಗೆ ಬಂದು ತನ್ನ ಬಟ್ಟೆ ಬದಲಾಯಿಸಿ, ಮುಖ ತೊಳೆದು, ನಾಳೆ ಹಾಕಿಕೊಂಡು ಹೋಗಲು ಬಟ್ಟೆಯನ್ನು ತೆಗೆದಿಟ್ಟುಕೊಂಡು ಬಂದು ಮಲಗುತ್ತಾಳೆ. ನಾಳೆ ತನ್ನ ಜೀವನದಲ್ಲಿ ಮೊದಲ ಬಾರಿ ವಿದ್ಯಾರ್ಥಿಗಳ ಮುಂದೆ ಹೋಗಿ ಪಾಠ ಮಾಡಬೇಕು. ಎಂ.ಎಸ್.ಸಿ. ಓದಬೇಕಾದರೆ ತನ್ನ ಸಹಪಾಠಿಗಳಿಗೆ ಪಾಠ ಮಾಡಿದ್ದು ಉಂಟು ಆದರೆ, ತಾನು ಏಕಾಂಗಿಯಾಗಿ ಇಡೀ ತರಗತಿಯನ್ನು ನಾಳೆ ನಿರ್ವಹಿಸಬೇಕು ಎಂಬ ಯೋಚನೆ ಬರುತ್ತದೆ. ಎಲ್ಲಾ ಹೊಸ ಅನುಭವ. ವಿದ್ಯಾರ್ಥಿಗಳು ತನ್ನನ್ನು ಹೇಗೆ ಸ್ವೀಕರಿಸಬಹುದು ಎಂಬುದು ಸಹ ಅಮೃತಾಳ ಯೋಚನೆ. ಇದೇ ಸಮಯದಲ್ಲಿ ತನ್ನ ವಿದ್ಯಾರ್ಥಿ ಜೀವನ ನೆನಪಾಗುತ್ತದೆ. ಪುಸ್ತಕದಲ್ಲಿರುವುದನ್ನು ಓದುವುದೇ ಪಾಠವನ್ನು ತಿಳಿದಿದ್ದ ಶಿಕ್ಷಕರ ತರಗತಿಯಲ್ಲಿ ಎಲ್ಲರೊಂದಿಗೆ ತಾನು ಮಾತಾಡುತ್ತಿದ್ದೆ. ಮಾತಿಗೆ ಮುನ್ನ ಪಾಠಕ್ಕಿಂತ ಹೆಚ್ಚು 'ಸೈಲೆನ್ಸ್' ಎಂದು ಹೇಳುತ್ತಿದ್ದ ಕೆಲವು ಶಿಕ್ಷಕರು, ಮಂತ್ರಕ್ಕಿಂತ ಉಗುಳೇ ಜಾಸ್ತಿ ಎಂಬಂತೆ ತರಗತಿಗೆ ಬಂದ ತಕ್ಷಣ ವಿದ್ಯಾರ್ಥಿಗಳನ್ನು ಗದರಿಸುತಿದ್ದ ಕೆಲವರು, ಪಾಠ ಅರ್ಥವಾಗತ್ತೋ ಇಲ್ಲವೋ ಉತ್ತರಗಳನ್ನು ಮಾತ್ರ ಬಾಯಿಪಾಠ ಮಾಡಿಸುತ್ತಿದ್ದ ಶಿಕ್ಷಕರು, ವಿದ್ಯಾರ್ಥಿಗಳು ಕೇಳಿಸಿಕೊಳ್ಳಲಿ ಬಿಡಲಿ ತಮ್ಮ ಕರ್ತವ್ಯ ಪಾಠ ಮಾಡುವುದು ಎಂಬಂತೆ ಮಾಡುತ್ತಿದ್ದ ಮತ್ತಿರರು, ವಿದ್ಯಾರ್ಥಿಗಳಿಗೆ ಪ್ರಿಯವಾಗಿ ವಿಚಾರವನ್ನು ಅರ್ಥಮಾಡಿಸಿ ಪಾಠ ಮಾಡುತ್ತಿದ್ದ ಕೆಲವು ಶಿಕ್ಷಕರು. ಓಹ್, ಏಷ್ಟು ತರಹದ ಶಿಕ್ಷಕರು... ತಾನು ನಾಳೆಯಿಂದ ಯಾವ ತರಹ ಪಾಠ ಮಾಡಬೇಕು? ಎಂದು ಯೋಚಿಸಿದಂತೆ ಉತ್ತರ ಹೊಳೆಯಿತು. ವಿದ್ಯಾರ್ಥಿಗಳು ಬೆಲೆ ಕೊಡುವುದು ವಿಚಾರವನ್ನು ಚೆನ್ನಾಗಿ ಗ್ರಹಿಸಿಕೊಂಡು ಮಕ್ಕಳಿಗೆ ಸರಿಯಾಗಿ ಅರ್ಥಮಾಡಿಸುವವರಿಗೆ ಮಾತ್ರ.  ಹೌದು, ತಾನೂ ಹಾಗೆ ಪಾಠ ಮಾಡಬೇಕು ಆಗಲೇ ತನಗೂ ಒಳ್ಳೆಯ ಹೆಸರು ಬರುವುದು ಎಂದು ನಿರ್ಧರಿಸುತ್ತಾಳೆ. ಸಮಯ ನೋಡಿದಾಗ ರಾತ್ರಿ ೧೧:೦೦ ಆಗಿತ್ತು. ತಾನು ಇಷ್ಟೊಂದು ಯೋಚಿಸುವ ಅಗತ್ಯವಿತ್ತೆ? ನಾಳೆ ಮಕ್ಕಳ ಮುಂದೆ ಹೋಗಿ ನಿಂತಾಗಲೇ ನನ್ನ ಸಾಮರ್ಥ್ಯ ತಿಳಿಯುವುದು. ಈಗ ನಾನು ಎಷ್ಟು ಯೋಚಿಸಿದರು ಪ್ರಯೋಜನವಿಲ್ಲ. ಆ ಕ್ಷಣಕ್ಕೆ ಹೇಗೆ ನಡೆಯುತ್ತದೋ ನೋಡೋಣ ಎಂದೊಕೊಂಡು ನಿದ್ರೆಗೆ ಜಾರುತ್ತಾಳೆ.
ಬೆಳಿಗ್ಗೆ ಎದ್ದು ಉತ್ಸಾಹಬರಿತಳಾಗಿ ಅಮೃತಾ ಅಣಿಯಾಗುತ್ತಾಳೆ. ಸರಿಯಾಗಿ ೯:೦೦ ಹೊತ್ತಿಗೆ ಪ್ರಾಂಶುಪಾಲರನ್ನು ಭೇಟಿಯಾಗಿ ಅವರೊಂದಿಗೆ ಒಂದನೇ ಪಿ.ಯೂ.ಸಿ. ತರಗತಿಗೆ ಹೋಗುತ್ತಾಳೆ. ಪ್ರಾಂಶುಪಾಲರು ಬಂದರು ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಗಲಾಟೆಯನ್ನು ನಿಲ್ಲಿಸಿ, ಎದ್ದು ನಿಲ್ಲುತ್ತಾರೆ. ವಿದ್ಯಾರ್ಥಿಗಳನ್ನು ಕುಳಿತುಕೊಳ್ಳಲು ಹೇಳಿ "ಗುಡ್ ಮಾರ್ನಿಂಗ್ ಸ್ಟುಡೆಂಟ್ಸ್... ಇವರು ಮಿಸ್. ಅಮೃತಾ, ಎಂ.ಎಸ್.ಸಿ. ಇನ್ ಮ್ಯಾಥೆಮ್ಯಾಟಿಕ್ಸ್. ಇನ್ನು ಮುಂದೆ ನೀವುಗಳು ಅವರ ಶಿಷ್ಯರು. ಹೊಸದಾಗಿ ಕೆಲಸಕ್ಕೆ ಸೇರಿದ್ದರೂ ನಿಮ್ಮ ಮನಗೆಲ್ಲುವಂತೆ ಪಾಠ ಮಾಡುತ್ತಾರೆಂದು ನಾನು ನಂಬಿದ್ದೇನೆ." ಎಂದು ಅಮೃತಾಳ ಬಗ್ಗೆ ತಿಳಿಸಿ ಆಕೆಯ ಕಡೆ ತಿರುಗಿ ಪ್ರತಿಕ್ರಿಯೆಗಾಗಿ ಕಾಯುತ್ತಾರೆ. "ಖಂಡಿತ ನಾನು ಪ್ರಯತ್ನ ಮಾಡುತ್ತೇನೆ" ಎಂದು ಮಕ್ಕಳ ಕಡೆ ನೋಡುತ್ತಾಳೆ. "ಓಕೆ... ಆಲ್ ದಿ ಬೆಸ್ಟ್" ಎಂದು ಹೇಳಿ ಪ್ರಾಂಶುಪಾಲರು ಹೊರ ನಡೆಯುತ್ತಾರೆ. ತರಗತಿ ಹೇಗಿರಬಹುದು ಎಂದು ತಲೆಕೆಡಿಸಿಕೊಳ್ಳದೆ ಅಮೃತಾ ಮಕ್ಕಳನ್ನು ಉದ್ದೇಶಿಸಿ "ಗುಡ್ ಮಾರ್ನಿಂಗ್, ಮೊದಲನೆಯ ದಿನ, ನಿಮ್ಮನ್ನ ನೋಡ್ತಾ ಇದ್ರೆ ನಿಮ್ಮ ಜೊತೆ ಬಂದು ಕೂರಬೇಕು ಅನಿಸುತ್ತಿದೆ" ಎಂದಾಗ ಎಲ್ಲರ ಮುಖದಲ್ಲೂ ನಗು ಕಾಣಿಸುತ್ತದೆ. "ಇರಲಿ ಇಂದು ಪಾಠ ಬೇಡ, ಅದು ದಿನಾಗಲೂ ಇರುತ್ತದೆ ಮೊದಲು ನಿಮ್ಮೆಲ್ಲರ ಪರಿಚಯವಾಗಬೇಕು, ನಿಮ್ಮ ಹೆಸರು, ನಿಮಗಿಷ್ಟವಾದ ವಿಷಯ ಮತ್ತು ಯಾಕೆ ಎಂದು ಹೇಳಿ. ನೀವು ಇಷ್ಟಪಡುವ ವಿಷಯಗಳು ನಿಮ್ಮನ್ನು ಪರಿಚಯ ಮಾಡಿಕೊಡಬೇಕು. ಸರಿ ಲಾಸ್ಟ್ ಬೆಂಚಿನ ಮಕ್ಕಳು ಶುರುಮಾಡಿ" ಎಂದು ಅಲ್ಲಿದ್ದ ೪೦ ವಿದ್ಯಾರ್ಥಿಗಳ ಪರಿಚಯ ಮಾಡಿಕೊಳ್ಳುತ್ತಾಳೆ.  ಎಲ್ಲರ ಮಾತುಗಳನ್ನು ಕೇಳಿದ ನಂತರ "ನಿಮಗೆಲ್ಲರಿಗೂ ಯಾವುದಾದರೂ ಒಂದು ವಿಷಯದಲ್ಲಿ ಆಸಕ್ತಿಯಿದೆ ಎನ್ನುವುದು ಸಂತೋಷಕರವಾದ ವಿಚಾರ ಆದರೆ ಯಾಕೆ ಆ ವಿಷಯ ಇಷ್ಟ ಎಂದಾಗ ನಿಮ್ಮ ಉತ್ತರಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಅದು ಸಹಜ. ಅದಕ್ಕೆ ಮತ್ತೊಮ್ಮೆ ಹೇಳುತ್ತಿದ್ದೇನೆ, ನಿಮ್ಮ ಪರಿಚಯವನ್ನು ನೀವು ಮಾಡಿಕೊಳ್ಳುವುದಕ್ಕಿಂತ ನಿಮ್ಮ ವ್ಯಕ್ತಿತ್ವ ನಿಮ್ಮ ಪರಿಚಯ ಮಾಡಿಕೊಡಬೇಕು" ಎಂದು ಹೇಳಿ ಅಂದಿನ ಪಾಠವನ್ನು ಮುಗಿಸುತ್ತಾಳೆ. ಹಾಗೇ ಅಂದು ತನಗಿದ್ದ ೪ ತರಗತಿಗನ್ನು ಮುಗಿಸುವ ಹೊತ್ತಿಗೆ ಅಂದಿನ ಕೆಲಸ ಮುಗಿದಿತ್ತು.
ಒಂದು ತರಗತಿಗೆ ಪಾಠ ಮಾಡಬೇಕಾದರೆ ಹಿರಿಯ ಪ್ರಾಧ್ಯಾಪಕರಾದ ಅಚ್ಯುತರಾಯರು ಗಮನಿಸುತ್ತಾರೆ. ತರಗತಿಗಳಲ್ಲಿ ಮುಗಿದ ಮೇಲೆ ರಾಯರು ಅಮೃತಾಳ ಬಳಿ ಬಂದು ಅವಳು ಹೇಳಿದ ಮಾತು "ನಿಮ್ಮ ಪರಿಚಯವನ್ನು ನೀವು ಮಾಡಿಕೊಳ್ಳುವುದಕ್ಕಿಂತ ನಿಮ್ಮ ವ್ಯಕ್ತಿತ್ವ ನಿಮ್ಮ ಪರಿಚಯವನ್ನು ಮಾಡಿಕೊಡಬೇಕು" ವಿದ್ಯಾರ್ಥಿಗಳ ನಡುವೆ ನಡೆದುಕೊಂಡ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. "ನಿನಗೆ ಪುಸ್ತಕಗಳನ್ನು ಓದುವ ಅಭ್ಯಾಸವಿದೆ ಅಲ್ಲವೇ?" ಎಂದು ರಾಯರು ಕೇಳುತ್ತಾರೆ. "ಹೌದು, ಸ್ವಲ್ಪ ಅಭ್ಯಾಸವಿದೆ, ನಿಮಗೆ ಹೇಗೆ ತಿಳಿಯಿತು?" ಎಂದು ಆಶ್ಚರ್ಯಚಕಿತಳಾಗಿ ಕೇಳುತ್ತಾಳೆ ಅಮೃತಾ. "ನೀವು ಮಾತಾಡುವ ರೀತಿಯೇ ಹೇಳುತ್ತದೆ. ನೀವು ಗಣಿತ ಓದುವುದಕ್ಕಿಂತ ಇತಿಹಾಸ ಅಧ್ಯಯನ ಮಾಡಿ, ನಮ್ಮ ಮಕ್ಕಳಿಗೆ ನಮ್ಮ ದೇಶ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವಂತಾಗಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳುತ್ತಾರೆ. ರಾಯರ ಈ ಮಾತನ್ನು ಕೇಳಿದ ಅಮೃತಾ "ನನಗೂ ಕೆಲವು ಸಲ ಹಾಗೇ ಅನಿಸುತ್ತದೆ ಆದರೆ, ಈಗ ಅದು ಸಾಧ್ಯವಿಲ್ಲ. ಅದರೇನು ನಷ್ಟವಿಲ್ಲ ವಿಧ್ಯಾರ್ಥಿಗಳ ಸಂಪರ್ಕವಿದ್ದಲ್ಲಿ ನನಗೆ ಸಾಧ್ಯವಾದಗಲೆಲ್ಲ ನಮ್ಮ ತನ, ಸಂಸ್ಕೃತಿಗಳ ಬಗ್ಗೆ ತಿಳಿಸಲು ಪ್ರಯತ್ನಿಸುತ್ತೇನೆ" ಎಂದು ಹೇಳುತ್ತಾಳೆ. "ಗುಡ್ ನಿಮಗೆ ನನ್ನ ಬೆಂಬಲ ಖಂಡಿತವಾಗಲೂ ಇರುತ್ತದೆ. ಇಂತವರಿಗೋಸ್ಕರ ನಾನು ತುಂಬಾ ದಿನದಿಂದ ಕಾಯುತ್ತಿದ್ದೆ" ಎಂದು ಹೊಗಳುತ್ತಾರೆ. ತನ್ನ ಬಗ್ಗೆ ತಾನೇ ಹೆಮ್ಮೆ ಪಟ್ಟಿಕೊಳ್ಳುತ್ತಾ "ಅಯ್ಯೋ ಅಷ್ಟೋಂದು ಹೊಗಳಬೇಡಿ. ನನಗೂ ಚರ್ಚಿಸಲು, ಗೊತ್ತಿಲ್ಲದಿರುವ ವಿಚಾರ ತಿಳಿಸಿಕೊಡಲು ಒಬ್ಬ ಗುರು ಸಿಕ್ಕಿದಂತಾಯಿತು" ಎಂದು ಹೇಳುತ್ತಾಳೆ. "ಒಪ್ಪಿದೆ ಮಗಳೆ ನಿನ್ನನ್ನು, ಇನ್ನು ಮುಂದೆ ನನಗೊಬ್ಬ ಹೊಸ ಶಿಷ್ಯೆ ಸಿಕ್ಕಿದಳು. ಮತ್ತೊಂದು ವಿಷಯ, ನಿಮಗೆ ನಾಳೆ ದಿವಸ ಒಬ್ಬ ವಿಶಿಷ್ಟವಾದ ವ್ಯಕ್ತಿಯನ್ನು ಪರಿಚಯಿಸುತ್ತೇನೆ. ಹಾಂ, ಪರಿಚಯಿಸುತ್ತೇನೆ ಅನ್ನುವುದಕ್ಕಿಂತ ತೋರಿಸುತ್ತೇನೆ ಅನ್ನಬಹುದು. ನಿನಗೇನಾದರು ವಿಶೇಷತೆ ಕಂಡರೆ ಒಳ್ಳೆದಾಗುತ್ತದೆ" ಎಂದು ರಾಯರು ಅಮೃತಾಳನ್ನು ನೋಡುತ್ತಾರೆ. ಮಗಳೆ ಎಂಬ ಪದ ಕೇಳಿದ ಅಮೃತಾಳಿಗೆ ಸಂತೋಷದ ಜೊತೆಗೆ ಕುಲಕರ್ಣಿಯವರ ನೆನಪಾಗುತ್ತದೆ. ನಗುಮೊಗದೊಂದಿಗೆ ಅವಳು "ನಾನು ನಿಮ್ಮನ್ನು ಅಪ್ಪಾಜಿ ಎಂದೇ ಕರೆಯಬಹುದಾ?" ಎಂದು ತನ್ನ ವೃತ್ತಾಂತವನ್ನೆಲ್ಲಾ ಸೂಕ್ಷವಾಗಿ ಹೇಳುತ್ತಾಳೆ. "ಸರಿ ಅಮೃತಾ, ಇನ್ಮುಂದೆ ನೀನು ನನ್ನ ಅಪ್ಪಾಜಿ ಅಂತಲೇ ಕರಿ, ನನಗೂ ಅದು ಹಿತವಾಗಿರುತ್ತದೆ." ಎನ್ನುವಾಗ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಅದನ್ನು ನೋಡಿ ಅಮೃತಾ "ಅಪ್ಪಾಜಿ ಯಾಕೆ ಅಳುತ್ತಿದ್ದೀರಿ? ಏನಾಯಿತು?" ಎಂದು ಕೇಳುತ್ತಾಳೆ. "ಏನಿಲ್ಲಮ್ಮ ನೀನು ಅಪ್ಪಾಜಿ ಎಂದು ಕರೆದಿಲ್ಲ, ಸಂತೋಷದಿಂದ ಈ ಕಣ್ಣೀರು ಅಷ್ಟೇ. ಸರಿ ನಾಳೆ ಸಿಗೋಣ, ಬರುತ್ತೇನೆ" ಎಂದು ಹೇಳಿದ ರಾಯರು ತಮ್ಮ ಮನೆಗೆ ಹೊರಡುತ್ತಾರೆ. ಇತ್ತ ಅಮೃತಾ ಸಂತೋಷದಿಂದ ಹಾಸ್ಟೆಲಿನ ಕಡೆಗೆ ಹೋಗುತ್ತಾಳೆ.
ರಾತ್ರಿ ೮:೩೦ ಹೊತ್ತಿಗೆ ಊಟ ಮುಗಿಸಿ ಬಂದು ಇಂದು ಕಾಲೇಜಿನಲ್ಲಿ ನಡೆದದ್ದನ್ನು ನೆನೆಸಿಕೊಳ್ಳುತ್ತಾಳೆ. ಮುಖದಲ್ಲಿ ತೃಪ್ತಿ ಹಾಗೂ ಸಂತೋಷದ ಭಾವ ಕಾಣುತ್ತದೆ. ವಿದ್ಯಾರ್ಥಿಗಳ ಮುಂದೆ ಮೊದಲ ಬಾರಿ ನಿಂತಿದ್ದೆ ಎನ್ನುವುದಕ್ಕಿಂತ ತನ್ನ ನೆಚ್ಚಿನ, ಆಸಕ್ತಿಕರವಾದ ಭಾರತದ ಇತಿಹಾಸ, ಸಂಸ್ಕೃತಿಗಳ ಬಗ್ಗೆ ಚರ್ಚಿಸಲು ತನಗೆ ಜೊತೆಯಾದ ಅಚ್ಯುತರಾಯರು. "ತಾನು ಅವರನ್ನು ಅಪ್ಪಾಜಿ  ಎಂದು ಕರೆದೆ, ಅವರು ತನ್ನನ್ನು ಮಗಳ ತರಹ ನೋಡಿದರು. ಜೊತೆಗೆ ನನ್ನ ಮಾತಿನಲ್ಲಿಯೇ ನನ್ನ ಗುಣ, ಸ್ವಭಾವ, ಹವ್ಯಾಸಗಳನ್ನು ಗುರುತಿಸಿದರು. ಹೌದು, ಇವರಿಂದ ಕಲಿಯುವುದು ಬಹಳಷ್ಟಿದೆ" ಎಂದುಕೊಳ್ಳುವಷ್ಟರಲ್ಲಿ ತನ್ನನ್ನು ಸಾಕಿದ ಕುಲಕರ್ಣಿಯವರು ನೆನಪಿಗೆ ಬರುತ್ತಾರೆ. 'ಅಯ್ಯೋ ಆಗಲೇ ೯:೦೦ ಆಯಿತು, ೮:೩೦ಗೆ ಕರೆ ಮಾಡುತ್ತೇನೆಂದು ಹೇಳಿದ್ದೆ' ಎಂದುಕೊಂಡು ಕುಲಕರ್ಣಿಯವರಿಗೆ ಕರೆ ಮಾಡುತ್ತಾಳೆ. ಉಭಯ ಕುಶಲೋಪರಿ ವಿಚಾರಿಸಿದ ನಂತರ ಇಂದು ನಡೆದ ಘಟನೆಗಳು, ತನ್ನ ಭಾವನೆಗಳೆಲ್ಲವನ್ನು, ಕುಲಕರ್ಣಿಯವರ ಬಗ್ಗೆ ಎಲ್ಲವನ್ನು ವಿವರಿಸಿ ಹೇಳುತ್ತಾಳೆ. ಅವರ ಮಾತು ಮುಗಿಸುವಷ್ಟರಲ್ಲಿ ರಾತ್ರಿ ೯:೪೫. ಊಟ ಮುಗಿಸಿಕೊಂಡು ಬಂದು ಮಲಗುತ್ತಾಳೆ. ಹಾಗೆ ಯೋಚನೆ ಮುಂದುವರೆಸುತ್ತಾ "ನಾಳೆಯಿಂದ ದೈನಂದಿನ ಪಾಠ ಶುರುಮಾಡಬೇಕು. ಇಂದು ಎಲ್ಲರ ಮುಂದೆ ನಿಂತು ಮಾತಾಡಿದ ಮೇಲೆ ಮಕ್ಕಳಿಗೆ ಪ್ರಿಯವಾಗಿ ಪಾಠ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬಂದಿದೆ, ಚೆನ್ನಾಗಿ ಪಾಠ ಮಾಡಿದರೆ ತಾನು ನಿನ್ನೆ ಅಂದುಕೊಂಡಂತೆ ಮಕ್ಕಳು ಗೌರವಕೊಡುತ್ತಾರೆ" ಎಂದುಕೊಂಡು ಮಲಗುತ್ತಾಳೆ. ಮತ್ತೊಂದು ಪ್ರಶ್ನೆ ಮನದಲ್ಲಿ ಸುಳಿಯುತ್ತದೆ. ರಾಯರನ್ನು ನಾನು ಅಪ್ಪಾಜಿ ಎಂದು ಕರೆದಾಗ ಅವರೇಕೆ ಅತ್ತರು? ಸಂತೋಷದ ಕಣ್ಣೀರು ಅಂದರು, ಆದರೆ ಅವರ ಮುಖದಲ್ಲಿ ಸಂತೋಷ ಕಾಣಿಸುತ್ತಿತ್ತಾದರೂ, ಎನೋ ಕೊರತೆ ಎದ್ದು ಕಾಣುತಿತ್ತು. ಇಲ್ಲವಾದಲ್ಲಿ ತಾನು ಅಪ್ಪಾಜಿ ಎಂದಾಗ ಅವರು ಅಷ್ಟು ಭಾವುಕರಾಗುವ ಅವಶ್ಯಕತೆ ಇತ್ತೇ? ಇಲ್ಲ ಏನು ಹೊಳೆಯುವುದಿಲ್ಲ. ನಿಜವಾಗಲೂ ಭಾವುಕರಾಗಿರಬಹುದು ಅದರಲ್ಲೇನು ತಪ್ಪು ಎಂದು ಸುಮ್ಮನಾಗುತ್ತಾಳೆ. ಮಗದೊಂದು ಪ್ರಶ್ನೆ ಮನಸ್ಸಿಗೆ ಬರುತ್ತದೆ. ಯಾರವರು...? ರಾಯರು ಒಬ್ಬ ವಿಶಿಷ್ಟ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಆಲ್ಲ ತೋರಿಸುತ್ತೇನೆ ಎಂದರಲ್ಲ. ಅದರಲ್ಲಿ ನಾನೇನಾದರು ವಿಶೇಷತೆ ಕಂಡರೆ ಒಳ್ಳೆದಾಗುತ್ತದೆ ಎಂದು ಹೇಳಿದರಲ್ಲ. ಯಾರಿರಬಹುದು ಆ ವ್ಯಕ್ತಿ? ಯಾರಿಗೂ ಕಾಣದ್ದು ನನಗ್ಯಾವ ವಿಶೇಷತೆ ಕಾಣಿಸಬಹುದು...? ಎಂದು ಯೋಚಿಸುತ್ತಾಳೆ. ಮರುಕ್ಷಣವೇ ಯಾರಾದರು ಇರಲಿ, ಏನಾದರು ಆಗಲಿ ಆಗುವುದೆಲ್ಲ ಒಳ್ಳೆಯದಕ್ಕೆ ಎಂದುಕೊಂಡು ನಿದ್ರೆಗೆ ಜಾರುತ್ತಳೆ.
ರಾಯರು ಮನೆಗೆ ಬಂದು ಕೆಲಸದವನನ್ನು "ಅಮ್ಮಾವರು ಎಲ್ಲಿ?" ಎಂದು ಕೇಳುತ್ತಾರೆ. "ಮಧ್ಯಾಹ್ನವೇ ಕ್ಲಬ್ಬಿಗೆಂದು ಹೋಗಿದ್ದಾರೆ ಎಂಬ ಉತ್ತರ ಬರುತ್ತದೆ." "ಹೂಂ ಮನೆ ನೋಡಿಕೊಳ್ಳೋಕೆ ಆಗಲ್ಲ. ಸಮಾಜ ಉದ್ದಾರ ಮಾಡಕ್ಕೆ ಹೋಗಿದ್ದಾಳೆ" ಎಂದು ಗೊಣಗುತ್ತಾ ತಮ್ಮ ಕೋಣೆಗೆ ಹೋಗುತ್ತಾರೆ. ಸಂಜೆಯ ಕಾಫೀ, ತಿಂಡಿ ತಿನ್ನುತ್ತಾ "ನಿಮ್ಮ ಪರಿಚಯವನ್ನು ನೀವು ಮಾಡುಕೊಳ್ಳುವುದಕ್ಕಿಂತ, ನಿಮ್ಮ ವ್ಯಕ್ತಿತ್ವ ನಿಮ್ಮ ಪರಿಚಯ ಮಾಡಬೇಕು" ಎಂಬ ಮಾತು ಮನಸ್ಸಿಗೆ ಹೊಳೆಯುತ್ತದೆ. ವಾಹ್ ಎಂತ ಅರ್ಥಗರ್ಬಿತವಾದ ಮಾತು! ಮಕ್ಕಳಿಗೆ ಇಂತಹ ಒಂದು ಸಂಸ್ಕಾರದಲ್ಲಿ ಬೆಳೆಸಬೇಕು. ಇಂದಿನ ಮಕ್ಕಳಿಗೆ ನಾವು, ನಮ್ಮ ದೇಶ, ಸಂಸ್ಕೃತಿ ಆಚಾರ ಧರ್ಮದ ಬಗ್ಗೆ ತಿಳಿಸಿಕೊಡಬೇಕು. ಶಿಕ್ಷಕರಾದವರು ಬರೀ ಪಠ್ಯಪುಸ್ತಕಗಳಲ್ಲಿ ಇರುವುದಷ್ಟನ್ನು ಹೇಳಿಕೊಟ್ಟರೇ ಸಾಲದು, ಜೀವನದ ಮೌಲ್ಯಗಳನ್ನು ಕಲಿಸಬೇಕು, ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಬೆಳೆಸಬೇಕು, ತನ್ನ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ದೇಶದ ಸತ್ಪ್ರಜೆಯನ್ನಾಗಿ ಮಾಡಬೇಕು ಎಂಬ ಗುರಿಯೊಂದಿಗೆ ಮನಸ್ಸಿಟ್ಟು ದುಡಿಯಬೇಕು. ಈ ಎಲ್ಲಾ ಗುಣಗಳು ಅವಳಲ್ಲಿ ಇದ್ದಂತೆ ತೋರುತ್ತದೆ. ವೃತ್ತಿಗೆ ಹೊಸಬಾಳಾದರೂ, ಆಯ್ದುಕೊಂಡಿರುವ ವಿಷಯ ಬೇರೆಯಾದರೂ ಒಳ್ಳೆಯ ಸಂಸ್ಕಾರವಿದೆ ಎಂದು ಖುಷಿಪಡುತ್ತಾಳೆ. ಆ ಮಗು ಅಪ್ಪಾಜಿ ಎಂದಾಗ ಎಷ್ಟು ಖುಷಿಯಾಯಿತು ಇವಳಾದರೂ ನನ್ನ ಮಗಳಾಗಬಾರದಿತ್ತೇ? ಎಂದು ಯೋಚಿಸುತ್ತಾರೆ. ಹೂಂ ಇಷ್ಟೆಲ್ಲಾ ಯೋಚಿಸುವ ನಾನು ನನ್ನ ಮನೆಯನ್ನೇ ಸರಿಯಾಗಿ ನೋಡಿಕೊಂಡಿಲ್ಲ ಎಂದು ತಮ್ಮನ್ನು ತಾವೇ ಬೈದುಕೊಳ್ಳುತ್ತಾರೆ. ಅವನ ಒರಟುತನವನ್ನು ತಿದ್ದಲು ಎಷ್ಟು ಪ್ರಯತ್ನಪಟ್ಟೆ! ನನ್ನಿಂದ ಅವನನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಈ ಮಗುವಿನ ಸ್ವಭಾವವನ್ನು ನೋಡಿದರೆ ಅವನನ್ನು ಬದಲಾಯಿಸಬಹುದು ಎಂದನ್ನಿಸುತ್ತದೆ. ಹೂ ನೋಡೋಣ ನಾಳೆ ಅವನನ್ನು ತೋರಿಸುತ್ತೇನೆ ಎಂದುಕೊಂಡು ರಾಯರು ತಮ್ಮ ಕೆಲಸದಲ್ಲಿ ತೊಡಗುತ್ತಾರೆ.
ಮಾರನೆ ದಿವಸ ಅಮೃತಾ ಅಚ್ಯುತರಾಯರನ್ನು "ಅಪ್ಪಾಜಿ, ಏನು ತುಂಬಾ ಅವಸರದಲ್ಲಿದ್ದೀರಾ?" ಎಂದು ಯಾವುದೋ ಪುಸ್ತಕವನ್ನು ಹುಡುಕುತ್ತಿದ್ದ ರಾಯರನ್ನು ಕೇಳುತ್ತಾಳೆ. "ಅಯ್ಯೋ '೧೮೫೭ - ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಪುಸ್ತಕ ಇಲ್ಲೇ ಎಲ್ಲೋ ಇಟ್ಟಿದ್ದೆ ಎಲ್ಲಿ ಅಂತ ಜ್ಞಾಪಕ ಬರ್ತಿಲ್ಲ. ಕ್ಲಾಸಿಗೆ ಬೆರೆ ತಡ ಆಯ್ತು" ಎನ್ನುತ್ತಾರೆ ಪುಸ್ತಕವನ್ನು ಹುಡುಕುವುದರಲ್ಲೇ ತಲ್ಲೀನರಾಗಿ ರಾಯರು. "ಅಪ್ಪಾಜಿ ಬಿಡಿ, ನೀವು ಕ್ಲಾಸಿಗೆ ಹೊರಡಿ" ಎಂದು ಅವರ ಕೈ ಹಿಡಿದು ಎಳೆಯುತ್ತಾಳೆ ಮಗು ತನ್ನ ತಂದೆಯನ್ನು ಹೋಗು ಎನ್ನುವಂತೆ. "ಸರಿ ಮಧ್ಯಾಹ್ನದ ಮೇಲೆ ಸಿಗುತ್ತೇನೆ, ಅಷ್ಟರಲ್ಲಿ ಅದನ್ನು ಹುಡುಕಿಟ್ಟಿರು, ತುಂಬಾ ಅಮೂಲ್ಯವಾದ ಪುಸ್ತಕ" ಎಂದು ಬಲವಂತವಾಗಿ ಹೊರ ನಡೆಯುತ್ತಾರೆ ರಾಯರು.  ಇತ್ತ ಅಮೃತಾ ಇಲ್ಲೆ ಇಟ್ಟಿದ್ದ ಪುಸ್ತಕ ಎಲ್ಲಿ ಹೋಗುತ್ತದೆ ಎಂದು ತನಗೆ ಸಾಧ್ಯವಾದಷ್ಟು ಹುಡುಕುತ್ತಾಳೆ ಅದರೆ ಅಲ್ಲೇಲ್ಲು ಸಿಗುವುದಿಲ್ಲ. ಬಹುಶಃ ಅಪ್ಪಾಜಿ ಮನೆಯಲ್ಲೇ ಮರೆತಿರಬೇಕು. ಎಲ್ಲಿಟ್ಟೆ ಎಂದು ನೆನಪಿಲ್ಲ ಎಂದು ಹೇಳುತ್ತಿದ್ದರು ಎಂದುಕೊಳ್ಳುತ್ತಾಳೆ. ನಂತರ ತನ್ನ ಅಂದಿನ ಪಾಠವನ್ನು ಮುಗಿಸಿ ಕೆಲ ಪ್ರಾಧ್ಯಾಪಕರೊಂದಿಗೆ ಶಿಕ್ಷಕರ ಕೊಠಡಿಯಲ್ಲಿ ರಾಯರಿಗಾಗಿ ಕಾಯುತ್ತಾ ಕೂರುತ್ತಾಳೆ. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ಬಂದು ರಾಯರ ಟೇಬಲ್ಲಿನ ಮೇಲೆ ಒಂದು ಪುಸ್ತಕವಿಟ್ಟು ಹೋಗುತ್ತಾರೆ. ಯಾರೊಂದಿಗೂ ಒಂದು ಮಾತಿಲ್ಲ, ನಗುವಿಲ್ಲ. ತುಸು ಹೊತ್ತಾದ ಮೇಲೆ ಆ ವ್ಯಕ್ತಿ ತಂದಿಟ್ಟ ಪುಸ್ತಕವನ್ನು ತೆಗೆದು ನೋಡುತ್ತಾಳೆ. '೧೮೫೭ ಪ್ರಥಮ ಸ್ವಾತಂತ್ರ ಸಂಗ್ರಾಮ' ಎಂದು ಗೊತ್ತಾಗಿ ಓಹ್, ಅಪ್ಪಾಜಿ ಹುಡುಕುತ್ತಿದ್ದ ಪುಸ್ತಕ ಇದೆ. ಯಾರಿಗೋ ಕೊಟ್ಟು ಮರೆತು ಹೋಗಿದ್ದಾರೆ ಎಂದುಕೊಂಡು ಸುಮ್ಮನೆ ಕೂರುತ್ತಾಳೆ.
ಕೆಲ ಹೊತ್ತಾದ ಮೇಲೆ ರಾಯರು ಬೆಳಿಗ್ಗೆ ಹೋದಷ್ಟೇ ಅವಸರವಾಗಿ ಬಂದು ಪುಸ್ತಕವೆಲ್ಲಿ ಎಂದು ಕೇಳುತ್ತಾರೆ. "ಅಲ್ಲ ಅಪ್ಪಾಜಿ ಯಾರಿಗೋ ಪುಸ್ತಕವನ್ನು ಕೊಟ್ಟು ಇಲ್ಲಿ ಹುಡುಕುತ್ತಿದ್ದೀರಾ ಅದ್ಯಾರೋ ನಿಮ್ಮ ಟೇಬಲ್ಲಿನ ಮೇಲೆ ಪುಸ್ತಕವಿಟ್ಟು ಹೋದರು" ಎಂದು ಪುಸ್ತಕವನ್ನು ಅವರಿಗೆ ಕೊಡುತ್ತಾಳೆ. "ಹೌದಾ? ಈ ಪುಸ್ತಕವನ್ನು ನಾನು ಯಾರಿಗೂ ಕೊಟ್ಟಿಲ್ಲವಲ್ಲ. ಇರಲಿ ಈ ಪುಸ್ತಕವನ್ನು ತಂದುಕೊಟ್ಟವರು ಯಾರು?" ಎಂದು ಕೇಳುತ್ತಾರೆ. "ಗೊತ್ತಿಲ್ಲ, ಯಾರೋ ಒಬ್ಬರು ಬಂದು ಪುಸ್ತಕವಿಟ್ಟು ಹೋದರು. ಏನು ಹೇಳಲಿಲ್ಲ" ಎಂದು ಅಮೃತಾ ಹೇಳುತ್ತಾಳೆ. "ಹೌದಾ? ಯಾರಿರಬಹುದು?" ಎಂದು ಯೋಚಿಸುತ್ತಾ ಯಾರು ಎನ್ನುವಂತೆ ಮಿಕ್ಕವರ ಕಡೆ ರಾಯರು ನೋಡುತ್ತಾರೆ. "ಇನ್ಯಾರು ರಾಯರೇ, ನಿಮ್ಮ ಶಿಷ್ಯ ತಗೊಂಡು ಹೋಗಿದ್ದ ವಾಪಸ್ಸು ಬಂದು ಇಟ್ಟುಹೋದ" ಎಂದು ಅಲ್ಲೇ ಕೂತಿದ್ದ ಶೈಲಜರವರು ಹೇಳುತ್ತಾರೆ. "ಒಹ್ ಅವನ, ಹೋಗಲಿ ಬಿಡಿ" ಎಂದು ಹೇಳುತ್ತಾರೆ ರಾಯರು. "ಯಾರಪ್ಪಾಜಿ ಅವರು? ನಿಮ್ಮ ಶಿಷ್ಯ ಅಂತಿದಾರೆ, ಸ್ವಲ್ಪನಾದರೂ ಶಿಸ್ತು ಬೇಡವ?" ಎಂದು ಅವನ ಮೇಲೆ ಕೋಪಿಸಿಕೊಳ್ಳೂತ್ತಾಳೆ. "ಅಷ್ಟೋಂದು ಕೋಪಿಸಿಕೊಳ್ಳಬೇಡ ಅಮೃತಾ. ನಿನ್ನೆ ನಿನಗೊಬ್ಬ ವ್ಯಕ್ತಿಯನ್ನು ತೋರಿಸುತ್ತೇನೆ ಎಂದು ಹೇಳಿದೆನಲ್ಲ, ಅವನೇ ಇವನು. ಬಾ ಹೋಗೋಣ" ಎನ್ನುತ್ತಾರೆ ರಾಯರು. ಆಚ್ಚರಿ ಮತ್ತು ಯಾರಿವನು? ಎಂಬ ಪ್ರಶ್ನೆಯೊಂದಿಗೆ ಹೊರಡುತ್ತಾಳೆ ಅಮೃತಾ.
Comments
Post a Comment