ಅಧ್ಯಾಯ - 3

ಮಾರನೆ ದಿನದಿಂದ ಅಮೃತಾ ಭಾಸ್ಕರನ ನಡೆನುಡಿಗಳನ್ನ ಸೂಕ್ಷ್ಮನಾಗಿ ಗಮನಿಸುತ್ತಾಳೆ. ಮಕ್ಕಳೊಂದಿಗೆ ಅವನು ಬೆರೆಯುವ ರೀತಿ, ಹೊರಗೆ ತಾನಾಯಿತು ತನ್ನ ಕೆಲಸವಾಯಿತು. ಯಾರೊಂದಿಗೂ ಬೆರೆಯದೆ ಏಕಾಂಗಿಯಾಗಿರುವುದು, ತನ್ನ ಬಗ್ಗೆ ಮಾತಾಡುವುದಾಗಲಿ, ತನ್ನೊಂದಿಗೆ ಬೆರೆಯುವುದಕ್ಕೆ ಪ್ರಯತ್ನಪಟ್ಟವರ ಜೊತೆ ತುಂಬ ಒರಟಾಗಿ ಮಾತಾಡುತ್ತಿದ್ದ. ತರಗತಿಯಲ್ಲಿ ಮಕ್ಕಳೊಂದಿಗೆ ಇರುವ ರೀತಿಗೂ, ಅದೇ ಮಕ್ಕಳೊಂದಿಗೆ ಹೊರಗೆ ನಡೆದುಕೊಳ್ಳುವ ರೀತಿಗೂ ಅಜಗಜಾಂತರವಾದ ವ್ಯತ್ಯಾಸ ಕಾಣಿಸುತ್ತದೆ.

ಅದೊಂದು ಸಂಜೆ ಅಮೃತಾ ತುಂಬಾ ದಿನಗಳಿಂದ ಭಾಸ್ಕರನ ವಿಷಯ ಮಾತಾಡದಿದ್ದ ರಾಯರೊಂದಿಗೆ ಮಾತಾಡಲು ಕೂರುತ್ತಾರೆ. "ಏನಮ್ಮ ಏನೋ ವಿಷಯ ಮಾತಾಡಬೇಕು ಅಂತ ಹೇಳಿದೆ, ಹೇಳಮ್ಮ" ಎಂದು ರಾಯರು ಅಮೃತಾಳಿಗೆ ಹೇಳುತ್ತಾರೆ. "ಅಪ್ಪಾಜಿ ನಾನು ಹೇಳುಬೇಕು ಅಂತ ಇರುವುದು ನಿಮ್ಮ ಶಿಷ್ಯ ಭಾಸ್ಕರ ವಿಚಾರ" ಎಂದು ಹೇಳಿ ರಾಯರನ್ನು ನೋಡುತ್ತಾಳೆ. ರಾಯರು ಅಂದು ಮಾತಾಡಿದ ಮೇಲೆ ಇಂದಿನವರೆಗೂ ಅವನ ಬಗ್ಗೆ ಮಾತಾಡದಿದ್ದ ಅಮೃತಾ, ಇದ್ದಕ್ಕಿದ್ದ ಹಾಗೆ ಮಾತು ಮುಂದುವರೆಸುತ್ತಾ "ಹೇಳಮ್ಮ ಏನು ಮಾತಾಡಬೇಕು ಅವನ ಬಗ್ಗೆ" ಎಂದು ಕುತೂಹಲವಿದ್ದರೂ ತೋರೆಸಿಕೊಳ್ಳದೆ ಹೇಳುತ್ತಾರೆ. "ನಾನು ಕೆಲವು ದಿನಗಳಿಂದ ಯೋಚಿಸಿ ಅವರನ್ನು, ಅವರ ನಡುವಳಿಕೆಯನ್ನು ಗಮನಿಸಿದೆ. ನನ್ನಲ್ಲೇ ಕೆಲವು ಪ್ರಶ್ನೆಗಳು ಹುಟ್ಟಿಕೊಂಡವು, ಅದರ ಬಗ್ಗೆಗೂ ತುಂಬಾ ಯೋಚಿಸಿದೆ" ಎಂದು ತನ್ನ ಮನಸ್ಸಿಗೆ ಬಂದ ಯೋಚನೆಗಳು, ಪ್ರಶ್ನೆಗಳು, ಕೊನೆಗೆ ತಾನು ತೆಗೆದುಕೊಂಡ ನಿರ್ಧಾರ ಬಗ್ಗೆ ತಿಳಿಸುತ್ತಾಳೆ ಅಮೃತಾ.

ಅವಳ ಮಾತುಗಳನ್ನು ಕೇಳುತ್ತಾ ಹೋದಂತೆಲ್ಲಾ ಅವರ ಮುಖದಲ್ಲಿ ಹೊಸ ಹುರುಪು ಕಾಣಿಸುತ್ತದೆ. ಮಾತು ಮುಗಿದ ಮೇಲೆ "ನಿನಗೆ ಹೇಗೆ ಧನ್ಯವಾದ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ" ಎಂದು ಮತ್ತೊಮ್ಮೆ ಭಾವುಕವಾಗಿ ಆನಂದದಿಂದ ಕಣ್ಣೀರಿಡುತ್ತಾರೆ. ಇದನ್ನು ನೋಡಿ ಅಮೃತಾ "ಅಪ್ಪಾಜಿ ನಿಮ್ಮ ಹತ್ತಿರ ನನಗೊಂದು ಪ್ರಶ್ನೆಯಿದೆ, ನೀವು ತಪ್ಪು ತಿಳಿಯದಿದ್ದರೆ ಕೇಳುತ್ತೇನೆ". ಅದೇನು ಕೇಳು ನೀನು ಏನು ಕೇಳಿದರು ಪರವಾಗಿಲ್ಲ ನನಗೆ ಆಗುತ್ತಿರುವ ಸಂತೋಷಕ್ಕೆ ನಿನ್ನ ಮೇಲೆ ಬೇಸರ ಪಟ್ಟುಕೊಳ್ಳಲು ಕಾರಣವೇನಿಲ್ಲ ಕೇಳು. ಏನು ನಿನ್ನ ಪ್ರಶ್ನೆ?"

"ನಿಮ್ಮ ಈ ಸಂತೋಷಕ್ಕೆ ಕಾರಣ?" ಎಂದು ರಾಯರನ್ನು ಕೇಳುತ್ತಾಳೆ. "ಏನು?" ಎಂದು ರಾಯರು ಅವಳನ್ನು ನೋಡುತ್ತಾರೆ. "ಸಾಮಾನ್ಯವಾಗಿ ತಮ್ಮ ಮಕ್ಕಳ ಏಳಿಗೆ ನೋಡಿ ಸಂತೋಷ ಪಡುವವರನ್ನು ಕಾಣುತ್ತೇವೆ. ನೀವು ನಿಮ್ಮ ಮನೆಯವರ ಬಗ್ಗೆ ಯಾವತ್ತು ಮಾತಾಡಿದವರಲ್ಲ. ಬದಲಾಗಿ ಯಾರೋ ಒಬ್ಬ ಹುಡುಗ ನಿಮ್ಮ ಶಿಷ್ಯ ಎನ್ನುವ ಸಲುವಾಗಿ, ಅವನ ಒರಟುತನ ಬಿಡಸಲು ಪ್ರಯತ್ನಿಸುತ್ತಿದ್ದೀರಿ, ಅವನು ಸರಿ ಹೋಗುತ್ತಾನೆ ಎಂದರೆ ನಿಮಗೆ ಸಂತೋಷ ಯಾಕೆ? ಈ ಭಾಸ್ಕರ್ ಚಂದ್ರ ಯಾರು, ನಿಮ್ಮ ಮನೆ ಮಕ್ಕಳನ್ನು ಬಿಟ್ಟು ಬೇರೊಬ್ಬನ ಬಗ್ಗೆ ತಲೆಕೆಡಿಸಿಕೊಳ್ಳತ್ತಿದ್ದೀರಲ್ಲ ಯಾಕೆ? ಈ ಪ್ರಶ್ನೆಗೆ ನನಗೆ ಉತ್ತರ ಬೇಕು" ಎಂದು ಮನಸ್ಸಿನಲ್ಲಿದ್ದ ಬಹುದಿನಗಳ ಪ್ರಶ್ನೆಯನ್ನು ಕೇಳುತ್ತಾಳೆ.

"ಹೌದು, ಈ ಪ್ರಶ್ನೆ ಸಹಜ. ಆದರೆ ಅದಕ್ಕೂ ಒಂದು ಕಾರಣವಿದೆ. ಅವನು ಶಿಷ್ಯ ಎನ್ನುವುದಕ್ಕಿಂದ ನನ್ನ ಮಗನ ಹಾಗೆ" ಎಂದು ರಾಯರು ನಿಟ್ಟುಸಿರು ಬಿಡುತ್ತಾರೆ.
 
"ನಾನು, ಸರೋಜ, ವಿಶ್ವ ಇದಿಷ್ಟೇ ನನ್ನ ಪ್ರಪಂಚವಾಗಿತ್ತು. ಮದುವೆಯಾದ ಹೊಸತರಿಂದ ಹಿಡಿದು ವಿಶ್ವನಿಗೆ ೬ ವರ್ಷ ತುಂಬುವ ತನಕ ಎಲ್ಲಾ ಚೆನ್ನಾಗೆಯಿತ್ತು. ಅವಳ ಯಾವ ಆಸೆಗೂ ನಾನು ಅಡ್ಡ ಬರುತ್ತಿರಲಿಲ್ಲ. ಅವಳೂ ಕೂಡ ನನ್ನನ್ನೇ ಸರ್ವಸ್ವ ಎಂದು ತಿಳಿದಿದ್ದಳು. ಆಗ ನಾನು ಕೇಂದ್ರ ಸರ್ಕಾರ ನಡೆಸುತ್ತಿದ್ದ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೆ. ಮದುವೆ, ಮಕ್ಕಳು ಎಂಬ ಕಾರಣದಿಂದ ಮೈಸೂರಿಗೆ ವರ್ಗ ಮಾಡಿಸಿಕೊಂಡು ೫-೬ ವರ್ಷ ಇಲ್ಲೇ ಇದ್ದೆ. ಆದರೆ, ಕೆಲ ದಿನಗಾಳದ ಮೇಲೆ ಮುಂಬೈ ನಂತರ ಕಲ್ಕತ್ತಾ, ಬೆಂಗಳೂರಿಗೆ ವರ್ಗವಾಯಿತು. ಮಡದಿ ಮಕ್ಕಳನ್ನು ಕರೆದುಕೊಂಡು ಹೋಗಬಹುದಿತ್ತು, ಅವರೂ ಕೂಡ ಬರಲಿಕ್ಕೆ ತಯಾರಿದ್ದರು. ಆದರೆ, ನನ್ನ ಮಗ ನಮ್ಮ ಜನಗಳ ನಡುವೆ, ನಮ್ಮ ಸಂಸ್ಕೃತಿಯೊಂದಿಗೆ ಬೆರೆತು ಬೆಳೆಯಲಿ ಎಂಬ ಕಾರಣದಿಂದ ಅವರುಗಳನ್ನು ಮೈಸೂರಿನಲ್ಲೇ ಬಿಟ್ಟು ಹೋದೆ. ಅದೇ ನಾನು ಮಾಡಿದ ದೊಡ್ಡ ತಪ್ಪು." ಎಂದು ಹೇಳುವಾಗ ರಾಯರ ಮುಖ ಬಾಡಿತ್ತು. 

"ನಿಮ್ಮ ಉದ್ದೇಶ ಸರಿಯಾಗೇ ಇತ್ತಲ್ಲ ಅಪ್ಪಾಜಿ, ಆದ್ದರಿಂದ ತಪ್ಪೇನಾಯಿತು?". ಅಮೃತಾಳಿಗೆ ಉತ್ತರಿಸುತ್ತಾ - ಉದ್ದೇಶ ಸರಿಯಿದ್ದರೂ, ನಮ್ಮ ಕೆಲಸಗಳು ಅದಕ್ಕೆ ಪೂರಕವಾಗಿರಬೇಕು. ನಮ್ಮ ಸಂಸ್ಕೃತಿಯ ಮಧ್ಯೆ ಬೆಳೆಯಬೇಕು ಅಂದರೆ ತಂದೆ ತಾಯಿಯರೊಂದಿಗೆ ಮಕ್ಕಳು ಬೆಳೆಯಬೇಕು ಎನ್ನುವ ಚಿಕ್ಕ ವಿಚಾರ ನನಗೆ ತಿಳಿಯದೇ ಹೋಯಿತು. 'ಅಪ್ಪ ಬೆಳಸಿದ ಮಗ ಆಲದ ಮರ, ಅಮ್ಮ ಬೆಳಸಿದ ಮಗ ತೆಂಗಿನ ಮರವಿದ್ದ ಹಾಗೆ' ಎನ್ನುವ ಹಾಗೆ ನನ್ನ ಸಂಸಾರದ ಕಥೆ! ನಾನು ನಮ್ಮ ಕಾಲೇಜುಗಳಲ್ಲಿ ನಮ್ಮ ದೇಶ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಪಾಠ, ಭಾಷಣ ಮಾಡುತ್ತಿದ್ದೆ. ಆದರೆ, ಸಾಂಸ್ಕೃತಿಕನಗರಿಯಲ್ಲಿ ಬೆಳೆಯುತ್ತಿದ್ದ ನನ್ನ ಮಗನಲ್ಲಿ ನಮ್ಮ ಸಂಸ್ಕೃತಿ ಎಂಬುದು ಬೆಳಿಯುವುದಿರಲಿ, ಹುಟ್ಟಲೇ ಇಲ್ಲ. ಮೊದಲಿಂದಲೂ ಸಮಾಜ, ಕ್ಲಬ್ಬಿಗೆ ಓಡಾಡಿಕೊಂಡಿದ್ದ ನನ್ನ ಹೆಂಡತಿ ನಾನು ಮನೆಯಿಂದ ದೂರವಾದ ಮೇಲೆ ಮತ್ತೆ ಅದನ್ನು ಶುರು ಮಾಡಿಕೊಂದಳು. ಮಗನ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಲೇ ಇಲ್ಲ. ಅವನೋ ಅವನಾಯಿತು, ಅವನ ಸ್ನೇಹಿತರು, ಪಾರ್ಟಿ, ಕ್ಲಬ್ಬು ಅಂತ ಅಡ್ಡದಾರಿ ಹಿಡಿಯಲು ಶುರುಮಾಡಿದ. ವರ್ಷಕ್ಕೆ ಒಂದು ಸಲ ಬರುತ್ತಿದ್ದ ನನಗೆ ಈ ಬೆಳವಣಿಗೆಗಳು ಅಷ್ಟಾಗಿ ಗಮನಕ್ಕೆ ಬರಲಿಲ್ಲ. ಈಗ ಕೆಲವು ವರ್ಷ ಅಂದರೆ ೫ ವರ್ಷದ ಹಿಂದೆ ಬೆಂಗಳೂರಿಗೆ ವರ್ಗವಾಗಿ ವಾರಕ್ಕೊಮ್ಮೆ ಮನೆಗೆ ಬರಲು ಶುರುಮಾಡಿದೆ. ಆಗ ಮನೆಗೆ ಬಂದಾಗ ನನ್ನ ಹೆಂಡತಿ, ಮಗನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡೆ. ಅವನಿಗೆ ಬುದ್ಧಿ ಹೇಳಲು ಪ್ರಯತ್ನಪಟ್ಟೆ. ಆದರೆ, ಅವನು ವಾಪಸ್ಸು ಬರೆದಿರುವಷ್ಟು ದೂರ ಹೊರಟುಹೋಗಿದ್ದ. ಸೋಷಿಯಲ್ ಡ್ರಿಂಕಿಂಗ್ ಎಂಬ ಹೆಸರಲ್ಲಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ. ಯಾಕೆ ಹೀಗೆ ಎಂದು ಸರೋಜಳನ್ನು ಕೇಳಿದಾಗ - 'Let him be independent, it is all common in our society. ನಿಮ್ಮ ತರಹ ಯಾವುದೋ ದೇಶದ ಇತಿಹಾಸ, ಸಮಾಜ ಎಂದು ಪ್ರವಚನ ಮಾಡಿಕೊಂಡು ಜೀವನ ಮಾಡುವುದು ಇಷ್ಟವಿಲ್ಲ. ಅವನು ಈ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಬದುಕುತ್ತಿದ್ದಾನೆ. ಅವನನ್ನು ಬದಲಾಯಿಸಲು ಪ್ರಯತ್ನಿಸಬೇಡಿ' ಎಂದು ನೇರವಾಗೆ ಹೇಳಿದಳು. 

ನನಗಂತೂ ಇದು ನನ್ನ ಮನೆಯಾ? ಎನ್ನುವಷ್ಟು ಅನುಮಾನ ಬಂತು. ಇನ್ನೂ ನಾನು ಹೊರಗಿರುವುದು ಸರಿಯಿಲ್ಲ ಎಂದು ತೀರ್ಮಾನಿಸಿದೆ. ಹಾಗೆ ತೀರ್ಮಾನಿಸಿದ ಮೇಲೆ ಕಾಲೇಜಿಗೆ ರಾಜಿನಾಮೆ ಕೊಟ್ಟು ಮನೆಗೆ ಬಂದೆ. ಮನೆಯಲ್ಲಿ ಏನೊಂದು ಕೇಳಲಿಲ್ಲ. ನನಗೆ ಆಶ್ಚರ್ಯವಾಯಿತು. ಒಂದೇ ಸಲಕ್ಕೆ ಕೆಲಸಬಿಟ್ಟು ಮನೆಗೆ ಬಂದ ನನ್ನನ್ನು ಏನು ಕೇಳುತ್ತಿಲ್ಲವಲ್ಲ ಅಂತ ಸೂಕ್ಷ್ಮವಾಗಿ ಅವಲೋಕಿಸಿದಾಗ ನನ್ನ ಹೆಂಡತಿ ಮಗ ಇಬ್ಬರೂ ಅವರವರ ಬಗ್ಗೆ ಬಿಟ್ಟು ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದಾರೆ. ಇನ್ನೂ ಗಮನಿಸಿದಾಗ ತಿಳಿಯಿತು ನನ್ನ ಅವಶ್ಯಕತೆ ಅವರಿಗಿರಲಿಲ್ಲ ಮತ್ತು ಅವರ ತಲೆಯಲ್ಲಿದ್ದದ್ದು - ವ್ಯಕ್ತಿ ಸ್ವಾತಂತ್ರ್ಯ!

ನನ್ನ ಸ್ನೇಹಿತರು ಕೆಲವರು ಸರ್ಕಾರಿ ಕೆಲಸ ಬಿಟ್ಟುಬಂದದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ, ನನಗೆ ಸರ್ಕಾರಿ ಕೆಲಸಕ್ಕಿಂತ ನನ್ನ ಸಂಸಾರ ಮುಖ್ಯವಾಗಿತ್ತು. ಮನೆಗೆ ಬಂದ ಮೇಲೆ ಸರಸ್ವತಿ ವಿದ್ಯಾ ಸಂಸ್ಥೆ ಸೇರಿದೆ. ಹಣಕ್ಕೇನು ಕೊರತೆಯಿರಲಿಲ್ಲ. ಮನೆಯಲ್ಲಿ ಮೂವರೂ ದುಡಿಯುತ್ತಿದ್ದೆವು. ನನಗಿಂತ ನನ್ನ ಹೆಂಡತಿ, ಮಗನ ಸಂಪಾದನೆಯೇ ಹೆಚ್ಚಾಗಿತ್ತು. ಆದರೆ, ಸಂಸ್ಕೃತಿ, ಸಂಸ್ಕಾರ ಎಲ್ಲವೂ ನಶಿಸಿಹೋಗಿತ್ತು. ಮನೆಗೆ ಬಂದ ಮೇಲೆ ಇಬ್ಬರನ್ನೂ ದಾರಿಗೆ ತರಲು ತುಂಬಾ ಪ್ರಯತ್ನಿಸಿದೆ. ಏನೇನು ಪ್ರಯೋಜನವಾಗಲಿಲ್ಲ. ನನ್ನ ಮಗ ಯಾವುದಾದರೂ ಹುಡುಗಿಯನ್ನು ಮನಸಾರೆ ಪ್ರೀತಿಸಿ ನನಗೆ ಹೇಳದೇ ಮದುವೆಯಾಗಿದ್ದರೂ ನಾನು ಸಂತೋಷ ಪಡುತ್ತಿದ್ದೆ. ಪ್ರೀತಿ ನಮಗೆ ಕೊಡುವ ಸುಖ, ಶಾಂತಿ, ನೆಮ್ಮದಿ ಪ್ರಪಂಚದ ಯಾವುದೇ ವಸ್ತುವಾಗಲಿ, ಸ್ಥಾನವಾಗಲಿ ಅಥವಾ ಹಣವಾಗಲಿ ಕೂಡವುದಿಲ್ಲ. ನಾನು ತದ ನಂತರ ಮನೆಯಲ್ಲಿ ಸುಮ್ಮನಾಗಿಬಿಟ್ಟೆ. ಕಾಲೇಜಿನಲ್ಲಿ ಯುವ ಪೀಳಿಗೆಗೆ ನನ್ನ ದೇಶ ಸಂಸ್ಕೃತಿಯ ಭಾವನೆ ಬೆಳೆಸಲು ಶುರುಮಾಡಿದೆ. ಕಾಲೇಜೇ ನನ್ನ ಮನೆ ಮತ್ತು ಮನಸ್ಸನ್ನು ತುಂಬಿಕೊಂಡಿತು. ಹಾಗೇ ಜೀವನ ಮುಂದುವರೆಯುತ್ತಿದೆ. 

ನಾನು ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಕೆಲವು ಸಲ ಪ್ರಬಂಧದಲ್ಲಿ ಮಕ್ಕಳ ಮನಸ್ಸನ್ನು ಪರೀಕ್ಷಿಸಲು 'ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ' ಎಂಬುದನ್ನು ಒಂದು ಆಯ್ಕೆಯಾಗಿ ಕೊಟ್ಟೆದ್ದೆ. ಎಲ್ಲಾ ಮಕ್ಕಳು ಎಂದಿನಂತೆ ಪರಿಸರ ಮಾಲಿನ್ಯ, ಜನಸಂಖ್ಯ ಸ್ಪೋಟದ ವಿಚಾರವನ್ನು ನಾವು ಬರೆಸಿದಂತೆ ಬರೆದಿದ್ದರು. ಆದರೆ, ಒಬ್ಬ ವಿದ್ಯಾರ್ಥಿ ಮಾತ್ರ ನಾನು ಕೊಟ್ಟಿದ್ದ 'ನನ್ನ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ', ಈ ವಿಚಾರದ ಮೇಲೆ ಪ್ರಬಂಧ ಬರೆದಿದ್ದ. ಇನ್ನೂ ಆಶ್ಚರ್ಯವೆಂದರೆ ಆ ವಿದ್ಯಾರ್ಥಿ ಬರೆದಿದ್ದು ಸ್ವಾತಂತ್ರ್ಯವೀರ ಸಾವರ್ಕರ್ ಬಗ್ಗೆ. ಅದನ್ನು ಓದಿ ನನ್ನ ಕಣ್ಣುಗಳನ್ನು ನಾನೇ ನಂಬಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರೆಂದರೆ ಈಗಿನ ಮಕ್ಕಳಿಗೆ ಗೊತ್ತಿರುವುದು ಅದೇ ಗಾಂಧೀ, ಅದೇ ನೆಹರು. ಈ ಸಂದರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಬರೆದಿರುವುದು ನನ್ನನ್ನು ನಿಜಕ್ಕೂ ಮೂಕ ವಿಸ್ಮಿತನಾಗಿ ಮಾಡಿತು. ಪೂರ್ತಿ ಓದಿದ ನಂತರ ಹೆಸರು ನೋಡಿದೆ. ಅವನೇ ಈ ಭಾಸ್ಕರ್ ಚಂದ್ರ. ತರಗತಿಯಲ್ಲಿ ಯಾರೊಂದಿಗೂ ಮಾತಾಡುತ್ತಿರಲಿಲ್ಲ, ತಾನಾಯಿತು ತನ್ನ ಕಥೆಯಾಯಿತು ಎಂದಿರುತ್ತಿದ್ದ. ಕಾಲೇಜಿನ ಬಿಡುವಿನ ಸಮಯದಲ್ಲಿ ಕ್ರಿಕೇಟ್ ಒಂದು ಆಡುತ್ತಿದ್ದ. ಮತ್ತೊಂದು ಸಲ ಪರೀಕ್ಷಿಸೋಣವೆಂದು ಮತ್ತೊಮ್ಮೆ ಪರೀಕ್ಷೆಯಲ್ಲಿ 'ಯುವಾ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿ' ಎಂಬ ವಿಷಯವನ್ನು ಕೊಟ್ಟೆ. ನಿರೀಕ್ಷಿಸಿದಂತೆ ಅವನು ಮಾತ್ರ ಈ ವಿಚಾರದ ಬಗ್ಗೆ ಬರೆದಿದ್ದ. ತುಂಬಾ ಚೆನ್ನಾಗಿತ್ತು ಅನ್ನುವುದಕ್ಕಿಂತ ಆ ವಯಸ್ಸಿಗೆ ಅದು ಅದ್ಭುತವಾಗಿತ್ತು. ಇವನಲ್ಲಿ ಇಂತಹ ಒಂದು ಪ್ರತಿಭೆ, ಯೋಚನಾ ಶಕ್ತಿಯಿದೆ ಎಂಬುದು ನನಗೆ ಸಂತೋಷಕರವಾದ ಸಂಗತಿಯಾಗಿತ್ತು. ಅವನಲ್ಲಿ ನನಗೆ ಒಂದು ಆಕರ್ಷಣೆ ಮತ್ತು ಮಮತೆ ಹುಟ್ಟಿತು. ಒಂದು ಸಲ ಕರೆದು ಮಾತಾಡಿಸೋಣ ಎಂದುಕೊಂಡೆ. 

ಒಂದು ದಿನ ಕಾಲೇಜು ಮುಗಿದ ಮೇಲೆ ಭಾಸ್ಕರನನ್ನು ಕರೆದು "ಪ್ರಬಂಧ ತುಂಬಾ ಚೆನ್ನಾಗಿ ಬರೆದಿದ್ದೀಯ. ನಿನಗೆ ಈ ವಿಷಯವೆಲ್ಲ ಯಾರು ಹೇಳಿಕೊಟ್ಟರು" ಎಂದು ಸಹಜವಾಗಿ ಕೇಳಿದೆ. ಅವನುಕೊಟ್ಟ ಉತ್ತರ ನನಗೆ ಇನ್ನು ನೆನಪಿದೆ, ಒರಟಾಗಿ ಹೇಳಿದ್ದ "ನನಗೆ ಯಾರೂ ಹೇಳಿಕೊಟ್ಟಿಲ್ಲ ಸಾರ್, ಇಂತಹ ವಿಷಯವನ್ನು ಹೇಳಿಕೊಡುವುದಕ್ಕೆ ನಮ್ಮ ಸಮಾಜಕ್ಕಾಗಲಿ, ಶಿಕ್ಷಣ ಸಂಸ್ಥೆಗಾಗಲಿ ಯೋಗ್ಯತೆ ಇಲ್ಲ". ಆ ಕ್ಷಣದಲ್ಲಿ ನನಗವನ ಮೇಲೆ ಸಿಟ್ಟು ಬಂತು ಆದರೂ, ತಡೆದುಕೊಂಡು "ಹೌದ? ಹಾಗಾದರೆ ನಿನಗೆ ಈ ವಿಚಾರಗಳು ಹೊಳೆದಿದ್ದು ಹೇಗೆ? ಅದೂ ಇಷ್ಟು ಚಿಕ್ಕ ವಯಸ್ಸಿಗೆ" ಎಂದು ಕೇಳಿದೆ. 

"ನಾನು ಪುಸ್ತಕಗಳನ್ನು ಓದುತ್ತೇನೆ, ಏನು ಚಿಕ್ಕವಯಸ್ಸು ಎಂಬ ಕಾರಣಕ್ಕೆ ನನಗೆ ತಿಳಿಯಬಾರದ?" ಎಂದು "ಸರ್ ನಾನು ಹೊರಡಬೇಕು ಸಮಯವಾಯಿತು" ಎಂದು ಹೇಳಿ ಹೊರಟುಹೋದ. ಅವನ ಮಾತನ್ನು ಕೇಳಿ ನನಗೆ ಸಿಟ್ಟು ಬಂತು. ಕರೆದು ಕೆನ್ನೆಗೆ ನಾಲ್ಕು ಬಾರಿಸೋಣ ಎನ್ನಿಸಿತು. ಆದರು ಅದ್ಯಾಕೋ ಹಾಗೆ ಮಾಡದೇ ಮನೆಗೆ ಬಂದೆ. 

ಮನೆಗೆ ಬಂದ ನಂತರ ಒಬ್ಬನೇ ಕೂತು ಯೋಚಿಸಿದೆ. ಅವನ ಮಾತು ನೆನಪಿಗೆ ಬಂತು - "ಇಂತಹ ವಿಷಯವನ್ನು ಹೇಳಿಕೊಡುವುದಕ್ಕೆ ನಮ್ಮ ಸಮಾಜಕ್ಕಾಗಲಿ, ಶಿಕ್ಷಣ ಸಂಸ್ಥೆಗಾಗಲಿ ಯೋಗ್ಯತೆ ಇಲ್ಲ". ಈ ಮಾತು ನನ್ನನ್ನು ಚಿಂತಿಸುವಂತೆ ಮಾಡಿತು. ಹೌದು, ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ತಗೋಳೋಣ ೧ನೇ ತರಗತಿಯಿಂದ ಪ್ರತಿಯೊಂದು ತರಗತಿಯಲ್ಲೂ ಸ್ವಾತಂತ್ರ್ಯ ಹೋರಾಟವೆಂದರೆ ಗಾಂಧೀಜೀ, ನೆಹರು ಬಿಟ್ಟರೆ ಬೇರೆಯವರ ಬಗ್ಗೆ ಅಂದರೆ ಭಗತ್ ಸಿಂಗ್, ರಾಜಗುರು, ಸುಖದೇವ್, ಮದನ್ ಲಾಲ್ ಧಿಂಗ್ರ, ಭಗವತಿಚರಣ, ಸೂಫೀ ಅಂಬಾ ಪ್ರಸಾದ್, ಸುಭಾಷ್ ಬೋಸ್, ಚಂದ್ರಶೇಖರ್ ಅಜಾದ್, ಸಾವರ್ಕರ್ ಬಗ್ಗೆ ಎಲ್ಲೂ ತಿಳಿಸಿ ಹೇಳುವುದಿಲ್ಲ. ಸುಭಾಷ್ ಬೋಸ್ ಅಂದರೆ ಐ.ಎನ್.ಎ ಎಂದು ೧ ಸಾಲು ಹೇಳಿಬಿಟ್ಟರೆ ಮುಗಿಯಿತು ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಪಠ್ಯಕ್ರಮವೇ ನಮ್ಮಲ್ಲಿ ಇಲ್ಲ. ಪ್ರತಿ ತರಗತಿಯಲ್ಲೂ ಅಂಬೇಡ್ಕರ್ ರವರ ಸಾಹಸವನ್ನು ವಿವರಿಸಿ ಎಂದರೇ ಅವರು ಮಳೆಯಲ್ಲಿ ನೆನೆದು ಶಾಲೆಗೆ ಹೋಗಿದ್ದೆ ಒಂದು ಸಾಹಸ ಎನ್ನುತ್ತಾರೆ. ಸಂವಿಧಾನ ಶಿಲ್ಪಿಯ ಪೂರ ವ್ಯಕ್ತಿತ್ವ ನಮಗೆ ಪರಿಚಯವೇ ಆಗಲಿಲ್ಲ. ಸಮುದ್ರಕ್ಕೆ ಜಿಗಿದು ಫ಼್ರಾನ್ಸಿನ ದಡವನ್ನು ಸೇರಿದ ಸಾವರ್ಕರ್ ಹೆಸರನ್ನು ನಮ್ಮ ಪಠ್ಯಕ್ರಮದಲ್ಲಿ ಸೇರಿಸಲೇ ಇಲ್ಲ. ಶಾಲೆಯಲ್ಲಿ ಕಾಪಿ ಹೊಡೆದದ್ದನ್ನು ಹೇಳಿಕೊಂಡು ತಮ್ಮ ತಪ್ಪನ್ನು ತಿದ್ದಿಕೊಂಡರು ಎಂದು ಗಾಂಧೀಜೀರವರ ಪ್ರಾಮಾಣಿಕತೆಯನ್ನು ವಿವರಿಸುತ್ತಾರೆ. ತನ್ನ ಸ್ವಂತಕ್ಕಾಗಿ ಒಂದೇ ಒಂದು ಕಾಸಾಗಲಿ, ಬುಲೆಟ್ ಅಗಲಿ, ಕಾಡತೂಸಾಗಲಿ ಖರ್ಚು ಮಾಡದೇ ತನ್ನ ಸರ್ವಸ್ವವನ್ನೂ ದೇಶ, ಸಂಸ್ಥೆ ಎಂದು ದುಡಿದು, ಹೆಣ್ಣಿನ ಮೋಹಕ್ಕಾಗಲಿ, ಪೋಲೀಸರಿಗಾಗಲಿ ಸಿಗದೆ ಅಜೇಯನಾಗಿ ಬಾಳಿದ ಚಂದ್ರಶೇಖರ್ ಆಜ಼ಾದರ ಆತ್ಮಶುದ್ಧತೆ ಬಗ್ಗೆ ನಾವು ಮಕ್ಕಳಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಲೇ ಇಲ್ಲ. ಪೋಲಿಸರ ಆಥಿತ್ಯವನ್ನು ಅನುಭವಿಸುತ್ತಾ, ಜೈಲಿನಲ್ಲಿ ತಮ್ಮ ಜೀವನ ಚರಿತ್ರೆ ಬರೆದುಕೊಂಡ ನೆಹರುರವರದು ತ್ಯಾಗ ಎಂದು ಕರೆದೆವು. ದೇಶಕ್ಕಾಗಿ ತನ್ನ ೨೩ನೇ ವಯಸ್ಸಿಗೆ ನಗುನಗುತ್ತಾ ನೇಣಿಗೇರಿದ - ರಾಜಗುರು, ಸುಖದೇವ್, ಭಗತ್ ಸಿಂಗ್ ಬಗ್ಗೆ ಕೂಡ ಪರಿಚಯಿಸಲಿಲ್ಲ. ಜೀವನದಲ್ಲಿ ಎರಡೆರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಂಡಮಾನಲ್ಲಿ ಕಾಲಾ ಪಾನಿ ಶಿಕ್ಷೆ ಅನುಭವಿಸಿದ ಸಾವರ್ಕರ್ ಬಗ್ಗೆ ಕೂಡ ನಾವು ತಿಳಿಸಲೇ ಇಲ್ಲ. ಹೀಗೆ ನನ್ನ ಯೋಚನಾ ಲಹರಿ ಮುಂದುವರೆದು ಮತ್ತೆ ಭಾಸ್ಕರನ ನಡವಳಿಗೆ ಬಗೆಗೆ ಬಂದು ನಿಂತಿತು. ಗುರುಗಳು, ಹಿರಿಯರು ಎಂಬ ಗೌರವವೂ ಇಲ್ಲದೇ ಎಷ್ಟು ಕೊಬ್ಬಿನಿಂದ ಮಾತಾಡಿದ ಎಂಬ ಯೋಚನೆಯೊಂದಿಗೆ ಸಿಟ್ಟು ಬಂತು. 

ಭಾಸ್ಕರ ಬರೆದಿದ್ದ "ಯುವಾ ಪೀಳಿಗೆಯಲ್ಲಿ ಭಾರತೀಯ ಸಂಸ್ಕೃತಿ" ಎಂಬ ಪ್ರಬಂಧ ನೆನೆಯುತ್ತಾ ನಮ್ಮ ಸಂಸ್ಕೃತಿಯ ಬಗ್ಗೆ ಎಷ್ಟು ಚಿನ್ನಾಗಿ ಬರೆದಿದ್ದಾನೆ ಆದರೆ, ಏನು ಬರೆದರೇನು ಬಂತು. 'ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ' ಅನ್ನೋ ತರಹ ನಡೆದುಕೊಂಡರೆ ಏನು ಪ್ರಯೋಜನ ಎಂದು ಮತ್ತೊಮ್ಮೆ ಸಿಟ್ಟು ಬರುತ್ತದೆ. ಸಿಟ್ಟಿಳಿದ ಕೆಲ ಹೊತ್ತಿನ ಮೇಲೆ ಭಾಸ್ಕರ ಎಲ್ಲಾ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿದ್ದಾನೆ. ಪುಸ್ತಕದ ಹೊರತಾಗಿ ವಿಚಾರಗಳನ್ನು ತಿಳಿದುಕೊಂಡಿದ್ದಾನೆ. ಆದರೆ, ಈ ರೀತಿ ಅಹಂಕಾರ, ಒರಟಿನ ಸ್ವಭಾವ ಯಾಕೆ? ಇದಕ್ಕೇನಾದರೂ ಕಾರಣವಿರಬಹುದೆ? ಎಂಬ ಯೋಚನೆ ಬರುತ್ತದೆ. ಏನೋ ಕಾರಣವಿರಬಹುದು, ಅವನ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಿರ್ಧಾರ ಮಾಡಿದೆ. ಆದರೆ, ಮರುಕ್ಷಣವೇ ನಾನೇಕೆ ಅವನ ಬಗ್ಗ ಇಷ್ಟೋಂದು ಚಿಂತಿಸಬೇಕು? ಅವನೇನು ನನ್ನ ಮಗನೇ, ಸಂಬಂಧಿಕನೇ ಅನ್ನಿಸಿತು. ಆಹಾ, ನನ್ನ ಮಗನಿಗೆ ಈ ರೀತಿ ಯೋಚನೆಗಳಿದ್ದಿದ್ದರೆ ಎಷ್ಟು ಚಿನ್ನಾಗಿರುತಿತ್ತು. ಹೂಂ ನಾನು ನಿರೀಕ್ಷಿಸಿದ್ದೇ ಒಂದು ಅದರೆ, ಅಗಿರುವುದೇ ಬೇರೆ. ಮಗನಂತೂ ತಾನಂದುಕೊಂಡಂತೆ ಇಲ್ಲ ಆದರೆ ಭಾಸ್ಕರ ತಕ್ಕ ಮಟ್ಟಿಗೆ ನನ್ನ ಯೋಚನಾ ಲಹರಿಗೆ ತಕ್ಕ ಹಾಗೆ ಇದ್ದಾನೆ. ಇವನನ್ನೇ ನನ್ನ ಮಗ ಎಂದುಕೊಂಡರೆ...? ಇರೋ ಒಬ್ಬ ಮಗನನ್ನೇ ಸರಿಯಾದ ದಾರಿಯಲ್ಲಿ ಸಡೆಸಲಿಲ್ಲ ಇನ್ನು ಮತ್ತೊಬ್ಬರನ್ನು ಮಗ ಅಂದುಕೊಂಡರೆ ಜನ ನಗುತ್ತಾರೆ ಅಷ್ಟೆ. ಆದರೂ, ನನಗ್ಯಾಕೋ ಭಾಸ್ಕರನ ಮೇಲೆ ಒಂದು ರೀತಿ ಮಮಕಾರ. ಮಗನಾಗದಿದ್ದರೂ ನನ್ನ ಶಿಷ್ಯ ಎಂದು ಕೊಂಡರೆ...? ಹೌದು, ಅದೇ ಸರಿ. ಆದರೆ..., ಅವನು ನನ್ನನ್ನು ಗುರು ಎಂದು ಒಪ್ಪಬೇಕಲ್ಲ? ಇಲ್ಲ, ಅವನು ತಿಳಿದವ, ಕೂತು ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾನೆ. ಅಂದಿನಿಂದ ಭಾಸ್ಕರ ನನಗೆ ಮಾನಸಿಕವಾಗಿ ಶಿಷ್ಯನಾಗಿ ಹೋದ, ಒಂದು ವಿಧದಲ್ಲಿ ಮಗನಂತೆ ನಾನು ಭಾವಿಸುತ್ತಿದ್ದೆ. 

ಭಾಸ್ಕರನ ಬಗ್ಗೆ ತಿಳಿಯಲು ಪ್ರಯತ್ನ ಪಟ್ಟೆನಾದರೂ ಏನು ಪ್ರಯೋಜನವಾಗಲಿಲ್ಲ. ಅವರ ತಂದೆ ತಾಯಿಯನ್ನು ಕರೆಸಿ ಮತಾಡಿಸಿದೆ. ಎಲ್ಲರಂತೆ ಅವರು ಇದ್ದರು. ಅವರಿಂದಾಗಲಿ ಅಥವಾ ಸ್ನೇಹಿತರಿಂದಾಗಲಿ ಏನು ತಿಳಿಯಲಿಲ್ಲ. ಭಾಸ್ಕರನನ್ನೇ ಕರೆದು ಮಾತಾಡಿಸುತ್ತಿದ್ದೆ. ಆದರೂ ಪ್ರಯೋಜನವಾಗಲಿಲ್ಲ. ಅವನಿಗೆ ನಾನು ಬೇಡವಾಗಿದ್ದೆ, ನಾನೊಬ್ಬನೇ ಅಲ್ಲ, ಅವನಿಗೆ ಯಾರೂ ಕೂಡ ಬೇಡವಾಗಿದ್ದರು ಎಂದು ತೋರುತ್ತಿತ್ತು. ಕಡೇ ಪಕ್ಷ ಅವನ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಪ್ರಯತ್ನಿಸಿದೆ ಆದರೆ, ಅದೂ ವಿಫ಼ಲವಾಯಿತು. ಅದಾದ ಮೇಲೆ ನಾನು ಕೆಲಸ ಬಿಟ್ಟು ಮೈಸೂರಿಗೆ ಬಂದೆ. ನಂತರ ೨-೩ ವರ್ಷ ಆತನ ವಿಚಾರ ಏನೊಂದು ತಿಳಿಯಲಿಲ್ಲ. ತಿಳಿಯಲು ನಾನು ಪ್ರಯತ್ನಿಸಲಿಲ್ಲ. ಈಗ ೨ ವರ್ಷದ ಹಿಂದೆ ಮೈಸೂರಿನಲ್ಲಿ ಒಂದು ಸಂಜೆ ಕಾಲೇಜಿನ ಹತ್ತಿರ ಭಾಸ್ಕರ ನನ್ನೆದುರಿಗೆ ಬಂದು ನಿಂತ. ನಿಮ್ಮ ಹತ್ತರ ಮಾತಾಡಬೇಕು ಎಂದು ಕೇಳಿದ. ನನ್ನ ಕಣ್ಣುಗಳನ್ನು ನಾನೇ ನಂಬಲಿಲ್ಲ. ಮನಸ್ಸಿನಲ್ಲಿ ಮಮತೆಯಿದ್ದ ಕಾರಣ ಮನೆಗೆ ಕರೆದುಕೊಂಡು ಹೋದೆ. ಉಭಯ ಕುಶಲೋಪರಿ ಮಾತಾಡಿಸಿ ಏನು ವಿಚಾರ ಎಂದು ಕೇಳಿದೆ. ಆಗಲೇ ಮೊದಲ ಸಲ ಆತ ಮನಸ್ಸು ಬಿಚ್ಚಿ ಮಾತಾಡಿದ್ದು. ಭಾಸ್ಕರ ಹೇಳಿದ - "ಕಾರಣಾಂತರಗಳಿಂದ ನಾನು ಬೆಂಗಳೂರನ್ನು ಬಿಟ್ಟು ಮೈಸೂರಿಗೆ ಬಂದೆ. ನನ್ನ ಮನಸ್ಸಿಗೆ ಒಪ್ಪುವಂತಹ ಕೆಲಸವೆಂದರೆ ಸಮಾಜ ವಿಜ್ಞಾನ ಮತ್ತು ಇತಿಹಾಸ ಪಾಠ ಮಾಡುವುದು, ಆದ್ದರಿಂದ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ನನಗೊಂದು ಕೆಲಸ ಸಿಗುತ್ತದಾ? ಅದಕ್ಕೆ ನಿಮ್ಮ ಸಹಾಯ ಬೇಕಿತ್ತು". ಮನಸ್ಸಲ್ಲಿ ಆಶ್ಚರ್ಯ ಮತ್ತು ಪ್ರಶ್ನೆಗಳೆದ್ದರೂ ತೋರ್ಪಡಿಸಿಕೊಳ್ಳದೆ ಅವನನ್ನು ಕೆಣಕುತ್ತಾ - "ಎಲ್ಲಪ್ಪ, ಎಲ್ಲಿ ಹೋಯಿತು ನಿನ್ನ ಸ್ವಾಭಿಮಾನ, ಕೆಲಸ ಬೇಕೆಂದು ನನ್ನನ್ನೇ ಕೇಳುತಿದ್ಯಾ?" ಎಂದೆ. ಅಷ್ಟಕ್ಕೆ ಅವನು ಕೋಪದಿಂದ "ಏನೋ ಗುರುಗಳು ಎಂದು ಕೇಳಿದೆ. ಆದರೆ ಹೇಳಿ, ಇಲ್ಲವಾದರೆ ಬಿಡಿ. ನಾನು ಹೊರಡುತ್ತೇನೆ" ಎಂದ. ಹೀಗೆ ಬಿಟ್ಟರೆ ಕೆಲಸ ಕೆಡುತ್ತದೆ ಎಂದುಕೊಂಡು - "ಸರಿ, ತಮಾಷೆ ಮಾಡಿದೆ. ನೀನು ತಾಳ್ಮೆಯಿಂದ ಇರುವುದಾದರೆ ನಮ್ಮ ಕಾಲೇಜಿನಲ್ಲಿ ಕೆಲಸವಿದೆ. ೩ ದಿನಗಳ ನಂತರ ಬಂದು ಪ್ರಾಂಶುಪಾಲರನ್ನು ನೋಡು, ಆಮೇಲೆ ನೋಡುವ" ಎಂದೆ. "ನೀನು ವಿದ್ಯಾರ್ಧಿಯಾಗಿದ್ದಾಗ ಬರೆದ ಪ್ರಬಂಧಗಳನ್ನು ನೋಡಿ ನಿನಗೆ ಮತ್ತೊಂದು ಜವಾಬ್ದಾರಿಯನ್ನು ಕೊಡುತ್ತಿದ್ದೇನೆ. ಪ್ರಾಧ್ಯಾಪಕನಾಗಿ ಮಕ್ಕಳಿಗೆ ಪಠ್ಯಕ್ರಮದಲ್ಲಿ ಇರುವಷ್ಟೇ ಅಲ್ಲದೇ ಕೆಲವು ವಿಚಾರಧಾರೆಗಳನ್ನು ಅವರಿಗೆ ಮನದಟ್ಟು ಮಾಡಿಸಬೇಕು. ನಮ್ಮ ದೇಶ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು" ಎಂದು ಹೇಳಿ ಕಳಿಸಿದೆ. 

"ಮೂರು ದಿನದ ನಂತರ ಕಾಲೇಜಿಗೆ ಬಂದು ಕೆಲಸಕ್ಕೆ ಸೇರಿದ. ಅಂದಿನಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾ ಇಲ್ಲೇ ಇದ್ದಾನೆ. ಇನ್ನೂ ಆತನ ಒರಟುತನ ಹೋಗಿಲ್ಲ, ತರಗತಿಯಲ್ಲಿ ಅದ್ಭುತವಾಗಿ ಪಾಠ ಮಾಡುತ್ತಾನೆ. ತಾನಾಯಿತು ತನ್ನ ಕೆಲಸವಾಯಿತು ಎಂದು ಯಾರ ತಂಟೆಗೂ ಹೋಗುವುದಿಲ್ಲ. ನನ್ನ ಒಬ್ಬನ ಮಾತು ಕೇಳುತ್ತಾನೆ. ಯಾವುದಕ್ಕೂ ಅವನನ್ನು ಬಲವಂತ ಮಾಡುವುದಿಲ್ಲ. ಏನೊಂದು ವಿಷಯವನ್ನು ಕೇಳಲು ಹೋಗಿಲ್ಲ. ಒಂದು ಸಲ ಪ್ರಯತ್ನ ಪಟ್ಟೆನಾದರೂ ಆತ ಏನು ಹೇಳಲು ಇಷ್ಟಪಡಲಿಲ್ಲ ಆದ್ದರಿಂದ ಸುಮ್ಮನಾದೆ. ಅವನ ಪಾಡಿಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆ ಕೆಲಸ ಮಾಡಿಕೊಂಡು ಇರುತ್ತಾನೆ, ಏನಾದರು ಬೇಕಾದರೆ ನನ್ನ ಕೇಳುತ್ತಾನೆ. ಸಮಯ ಸಿಕ್ಕಾಗ ನಾನು ಸಾಧ್ಯವಾದಷ್ಟು ಬುದ್ಧಿ ಹೇಳಿದ್ದೇನೆ. ಆದರೆ, ನನ್ನಿಂದ ಆತನನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ" ಎಂದು ರಾಯರು ತಮ್ಮ ಜೀವನದ ಬಗ್ಗೆ, ತಮ್ಮ ಭಾಸ್ಕರನ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಾರೆ.

"ಆಯ್ತು ಅಪ್ಪಾಜಿ, ನಿಮ್ಮ ಉದ್ದೇಶ ನನಗೆ ಅರ್ಥವಾಯಿತು. ಈಗ ಹೇಳಿ ನನ್ನಿಂದೇನಾಗಬೇಕು" ಎಂದು ನಮ್ರತೆಯಿಂದ ಕೇಳುತ್ತಾಳೆ ಅಮೃತಾ. "ನಾನು ಕೇಳುವುದಿಷ್ಟೇ, ಅವನು ಎಲ್ಲರಂತೆ ಆಗಬೇಕು, ಚಂದ್ರನಂತಿರುವ ಅವನಲ್ಲಿ ಒರಟುತನವೆಂಬ ಕಪ್ಪು ಚುಕ್ಕೆ ನಿನ್ನಿಂದ ಅಳಿಸಿಹೋಗಬೇಕು. ನನ್ನಿಂದ ಏನು ಸಹಾಯಬೇಕೋ ಕೇಳು. ಆದರೇ ಹೇಗಾದರೂ ಮಾಡಿ ಅವನ ಒರಟುತನವನ್ನು ಹೋಗಿಸಬೇಕು" ಎಂದು ರಾಯರು ಕೇಳಿಕೊಳ್ಳುತ್ತಾರೆ. "ಖಂಡಿತ ಪ್ರಯತ್ನ ಪಡುತ್ತೀನಿ ಅಪ್ಪಾಜಿ, ನಿಮ್ಮನ್ನು ಸರ್ ಅನ್ನುವವನು ನಿಮ್ಮ ಬಳಿ ಬಂದು ಅಪ್ಪಾಜಿ ಅನ್ನಬೇಕು" ಎಂದು ದೃಢವಾಗಿ ನಿಶ್ಚಯಸಿದಂತೆ ಹೇಳುತ್ತಾಳೆ.
 

Comments