ಅಧ್ಯಾಯ - 6

ತನ್ನ ಕಣ್ಣ ಮುಂದೆ ನಡೆದದ್ದನ್ನು ಕಂಡ ಅಮೃತಾ ಅತ್ಯಾಶ್ಚರ್ಯದಿಂದ ಮೂಕ ವಿಸ್ಮಿತಳಾಗುತ್ತಾಳೆ. ಸಮಯವನ್ನು ಅರಿತು ತನ್ನ ಕೆಲಸಕ್ಕೆ ಮುಂದಾಗುತ್ತಾಳೆ. ಅಂದು ಸಂಜೆ ಅಮೃತಾ ರಾಯರ ಬಳಿ ಹೋಗಿ ಭಾಸ್ಕರ ಮಾತಾಡಿದ ರೀತಿಯನ್ನು ನೆನೆಯುತ್ತಾ ಇದೆಲ್ಲಾ ನಿಜವಾ? ಎಂದು ಪ್ರಶ್ನಿಸುತ್ತಾಳೆ. ರಾಯರು ಶಿಷ್ಯನ ಬಗ್ಗೆ "ನಾನು ಹೇಳಿರಲಿಲ್ಲವಾ? ಆತ ಒರಟ ನಿಜ. ಆದರೆ, ಆತ ಯೋಚಿಸುವ ರೀತಿ ತುಂಬಾ ಭಿನ್ನವಾಗಿರುತ್ತದೆ. ಎಷ್ಟೋ ಜನ ಅವನು ಯೋಚಿಸುವ ರೀತಿ ಯೋಚಿಸುವುದಿಲ್ಲ. ಗೌತಮ ಮತ್ತು ಪ್ರಿಯಾರ ಪ್ರೀತಿ ನಿಜವೆಂದು ಅವನಿಗೆ ತೋರಿತ್ತು ಆದ್ದರಿಂದಲೇ ಆತ ಅಷ್ಟು ಮಾತಾಡಿದ್ದು. ಮಾತಿನ ನಡುವೆ ಅವನಿಗೆ ಒಂದು ಸಲ ಕೋಪ ಬಂತು ಆದರೆ, ಅವನು ಅದನ್ನು ತಡೆದುಕೊಂಡ. ನನ್ನ ಮೇಲಿರುವ ಗೌರವದಿಂದಾಗೆ ಅವನು ತಡೆದುಕೊಂಡ. ಅದಲ್ಲದೆ ಮತ್ತೊಂದು ಕಾರಣವೂ ಇದೆ. ಏನಿರಬಹುದು ಹೇಳು ನೋಡೋಣ" ಹೇಳುತ್ತಾರೆ.

ರಾಯರ ಕೇಳಿದ ಪ್ರಶ್ನೆಗೆ ವಿಶೇಷವಾದ ಉತ್ತರವೇನು ಅಮೃತಾಳಿಗೆ ಹೊಳೆಯುವುದಿಲ್ಲ "ವಿದ್ಯಾರ್ಥಿಗಳ ತಂದೆ ತಾಯಂದಿರು ಅವರು, ಬಹುಶಃ ಅವರೊಂದಿಗೆ ಜೋರಾಗಿ ಮಾತಾಡಬಾರದು ಎಂಬ ತಿಳುವಳಿಕೆ ಇರಬಹುದು" ಎಂದು ತನಗೆ ತೋಚಿದ್ದನ್ನು ಹೇಳುತ್ತಾಳೆ. "ಅದು ಅವನು ಸಭ್ಯ ಎಂದು ತೋರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಆತ ಜೋರಾಗಿ ಮಾತನಾಡದಿರಲು ಮತ್ತೊಂದು ಕಾರಣವಿದೆ" ಎಂದು ಹೇಳಿ ರಾಯರು ಅಮೃತಾಳಲ್ಲಿ ಕುತೂಹಲ ಮೂಡಿಸುತ್ತಾರೆ. ಅದೇ ಭಾವದಲ್ಲಿ "ಏನದು ಅಪ್ಪಾಜಿ ನಿಮ್ಮ ಶಿಷ್ಯನ ಬಗ್ಗೆ ನಿಮಗೆ ತಿಳಿಯಬೇಕು. ನಮಗೆಲ್ಲಾ ಅರ್ಥವಾಗುವುದಿಲ್ಲ" ಎಂದು ಹೇಳುತ್ತಾಳೆ. "ಅರ್ಥವಾಗುವುದಿಲ್ಲ ಎಂದಲ್ಲ, ಅರ್ಥಮಾಡಿಕೊಳ್ಳುವ ಪ್ರಯತ್ನ ನಿಮ್ಮಲ್ಲಿ ಇಲ್ಲ. ಅದು ಬಿಡು, ಈಗ ಕಾರಣಕ್ಕೆ ಬರೋಣ. ಅಲ್ಲಿ ಬಂದಿದ್ದವರು ಯಾರು? ಗೌತಮ ಮತ್ತು ಪ್ರಿಯಾರ ತಂದೆ ತಾಯಿ, ಅಂದರೇ ಭಾಸ್ಕರನ ಮಟ್ಟಿಗೆ ಹೊರಗಿನವರು. ಇದೇ ಕಾರಣದಿಂದ ಆತ ಸಮಾಧಾನವಾಗಿ ಮಾತಾಡಿದ" ಎಂದು ಹೇಳುತ್ತಾರೆ. ಅಮೃತಾ "ಇಲ್ಲ ಅಪ್ಪಾಜಿ ನಿಮ್ಮ ಕಾರಣ ನನಗೆ ಪೂರ ಅರ್ಥವಾಗಲಿಲ್ಲ".

"ನೋಡು, ಮನುಷ್ಯ ತನ್ನ ಸಹಜತೆಯಿಂದ ನಡೆದುಕೊಳ್ಳುವುದು ತನಗೆ ಸಂಬಂಧವಿರುವವರ ಜೊತೆ, ಯಾರನ್ನು ತನ್ನವರು ಎಂದು ತಿಳಿದುಕೊಳ್ಳುತ್ತಾನೋ, ಯಾರು ತನಗೆ ಪ್ರೀತಿ ಕೊಡುತ್ತಾರೋ, ಯಾರು ತನ್ನ ಬಗ್ಗೆ ಕಾಳಜಿ ವಹಿಸುತ್ತಾರೊ, ಒಂದೇ ಮಾತಿನಲ್ಲಿ ಹೇಳುವುದಾದರೆ ಯಾರು ತನ್ನ ಮನಸ್ಸಿಗೆ ಹತ್ತಿರವಾಗಿರುತ್ತಾರೋ ಅವರುಗಳೊಂದಿಗೆ ತಾನು ಸಹಜವಾಗಿರುತ್ತಾನೆ. ಇತರರೊಂದಿಗೆ ಈ ರೀತಿ ತಮ್ಮ ಸಹಜತೆಯನ್ನು ಒಳಗೆ ಅದುಮಿಟ್ಟುಕೊಂಡು ನಾಟಕೀಯವಾಗಿರುತ್ತಾರೆ" ಎಂದು ತಮ್ಮ ವಿಶ್ಲೇಷಣೆಯನ್ನು ರಾಯರು ನೀಡುತ್ತಾರೆ. "ಹೌದು ಅಪ್ಪಾಜಿ ನಾನು ಈ ದಿಕ್ಕಿನಲ್ಲಿ ಯೋಚನೆ ಮಾಡಲೇ ಇಲ್ಲ. ನೀವು ಹೇಳುವುದು ಸರಿ. ಹಾಗೆಂದರೆ, ಅವರ ಸಹಜ ಗುಣ ಒರಟಾಗಿರುವುದು, ಜೋರು ಮಾಡುವುದು ಎಂದಾಯಿತು. ಈ ರೀತಿ ಕೂಡ ಇರುತ್ತಾರ? ಇದಕ್ಕೆ ಏನೋ ಕಾರಣವಿದೆ ಎಂದು ನನಗೂ ಅನ್ನಿಸುತ್ತದೆ" ಎಂದು ಅಮೃತಾ ತನಗೆ ತಿಳಿಯದಂತೆ ಭಾವುಕಳಾಗಿ ಹೇಳುತ್ತಾಳೆ. ಗಡಿಯಾರ ನೋಡಿಕೊಂಡ ರಾಯರು ಸರಿ ಪುಟ್ಟಿ ನನಗೆ ಸಮಯವಾಯಿತು ನನಗೆ ಕೆಲಸವಿದೆ ಎಂದು ಹೇಳಿ ಹೊರಡುತ್ತಾರೆ. ಇತ್ತ ಅಮೃತಾ ಆಶ್ವರ್ಯದಿಂದಲೇ ತನ್ನ ಕೋಣೆಗೆ ತೆರಳುತ್ತಾಳೆ.

************************

ಭಾಸ್ಕರನ ಮಾತುಗಳನ್ನು ನೆನೆಯುತ್ತಾ ರಾಯರಿಗೆ ಒಂದು ರೀತಿ ಹೆಮ್ಮೆಯಾಗುತ್ತದೆ. ಆದರೆ, ಭಾಸ್ಕರ ಪ್ರೀತಿ ಬಗ್ಗೆ, ದೇಶದ ಬಗ್ಗೆ, ನಮ್ಮ ಸಂಸ್ಕೃತಿ, ಸಾಮಾಜಿಕ ಮೌಲ್ಯ, ಜವಾಬ್ದಾರಿಗಳ ಬಗ್ಗೆ ಏನೇ ಮಾತಾಡಬಹುದು, ಪಾಠ ಕೂಡ ಮಾಡಬಲ್ಲನು ಆದರೆ, ಅದರಂತೆ ನಡೆದುಕೊಳ್ಳುತ್ತಿಲ್ಲ. ಆತ ಕ್ಲಾಸುಗಳಲ್ಲಿ ಇರುವ ರೀತಿಯೇ ಬೇರೆ, ಹೊರಗೆ ಜನಳೊಂದಿಗೆ ಬರೆಯುವ ರೀತಿ ಬೇರೆ. ತನ್ನ ವಿಚಾರದಲ್ಲಿ ಯಾರು ತಲೆ ಹಾಕುವಂತಿಲ್ಲ. ತನಗೆ ಯಾರು ಏನು ಹೇಳುವಂತಿಲ್ಲ. ಹಾಗೇನಾದರೂ ಹೇಳಿದರೆ ತುಂಬಾ ಒರಟಾಗಿ ಉತ್ತರಿಸುತ್ತಾನೆ ಮತ್ತು ಇದೇ ಕಾರಣದಿಂದಾಗಿ ಎಲ್ಲರೊಂದಿಗೆ ನಿಷ್ಠುರ ಕಟ್ಟಿಕೊಳ್ಳುತ್ತಾನೆ. ಈ ತರಹ ವ್ಯಕ್ತಿಯನ್ನು ಸಂಭಾಳಿಸುವುದಾದರೂ ಹೇಗೆ ಎಂದು ಯೋಚಿಸುತ್ತಾ ಸೋಫ ಮೇಲೆ ಒರಗಿಕೊಳ್ಳತ್ತಾರೆ.

ಮನೆಗೆ ಬಂದ ಸರೋಜ ಅಲ್ಲೇ ಮಲಗಿದ್ದ ರಾಯರನ್ನು ನೋಡಿ "ಹೀಗೆ ಎಲ್ಲಂದರಲ್ಲಿ ಮಲಗಿದರೆ ಮನೆಗೆ ಬಂದವರು ಏನಂದು ಕೊಳ್ಳುತ್ತಾರೆ" ಎಂದು ಗೊಣಗಿಕೊಂಡು ಹೋಗುತ್ತಾಳೆ. ಈ ಮಾತುಗಳು ರಾಯರ ಕಿವಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಇನ್ನು ತಾನು ಅಲ್ಲಿರುವುದು ಸರಿಯಿಲ್ಲವೆಂದು ಎದ್ದು ತನ್ನ ಕೋಣೆಗೆ ಹೊರಡುತ್ತಾರೆ. ಇದನ್ನು ಗಮನಿಸಿದ ವಿಶ್ವ ತನ್ನ ತಾಯಿಯ ಬಳಿ ಬಂದು "ಅಮ್ಮ, ಅಣ್ಣ ಬಂದಾಗಿನಿಂದ ಏನು ಮಾತಡಿಲ್ಲ ಊಟ ಮಾಡಿ ಸುಮ್ಮನೆ ಕೂತಿದ್ದಾರೆ" ಎಂದು ತಗ್ಗಿದ ಸ್ವರದಲ್ಲಿ ಹೇಳುತ್ತಾನೆ. ಆದರೆ, ಸರೋಜ "ಕಾಲೇಜಲ್ಲಿ ಅವರ ಶಿಷ್ಯನೋ ಆ ಹೊಸ ಹುಡುಗಿ ಏನೋ ಮಾಡಿರಬೇಕು. ಇವರು ನಡುವೆ ಹೋಗಲು ಪ್ರಯತ್ನಪಟ್ಟಿರುತ್ತಾರೆ, ಯಾರೋ ಏನೋ ಅಂದಿರುತ್ತಾರೆ. ಬೇಸರವಾಗದೇ ಇರುತ್ತದಾ?" ಎಂದು ವ್ಯಂಗ್ಯ ಮಿಶ್ರಿತ ಕೋಪದಲ್ಲಿ ಮಗನಿಗೆ ಹೇಳುತ್ತಾಳೆ. ಮೆಟ್ಟಿಲು ಏರಿ ಹೋಗುತ್ತಿದ್ದ ರಾಯರ ಮನಸ್ಸಿಗೆ ಖೇದ ಉಂಟಾಗುತ್ತದೆ ಆದರೂ, ಅದನ್ನು ತೋರಿಸಿಕೊಳ್ಳದೆ, ಹೆಂಡತಿ ಮಗನ ಕಡೆ ತಿರುಗಿ ಒಂದು ಮುಗುಳ್ನಗೆ ತೋರಿ ಹೋಗುತ್ತಾರೆ. ಆ ಮುಗುಳ್ನಗೆಯ ಅರ್ಥ ತಾಯಿಗಾಗಲಿ,  ಅರ್ಥವಾಗುವುದಿಲ್ಲ.

ಮೇಲೆ ತನ್ನ ಕೋಣೆಗೆ ಬಂದು ಬಾಗಿಲು ಹಾಕಿಕೊಂಡು ಮಂಚದ ಮೇಲೆ ಹಾಗೆ ಒರಗಿಕೊಳ್ಳುತ್ತಾರೆ. ತಮ್ಮ ಮನಸ್ಸಿನ ಮಾತುಗಳು ಒಂದು ಪ್ರತಿ ರೂಪಾವಾಗಿ ತನ್ನೆದುರು ಕುಳಿತು ಮಾತಾಡಿದಂತೆ ಭಾಸವಾಗುತ್ತದೆ. ರಾಯರ ಮನಸ್ಸು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ತಮ್ಮ ಕಣ್ಣಮುಂದೆ ಬರುತ್ತದೆ.

************************

ಅಂದು ಕುವೆಂಪು ಸಭಾಂಗಣದಲ್ಲಿ "ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳು" ಎಂಬ ವಿಚಾರದ ಮೇಲೆ ಚರ್ಚೆ ನಡೆದಿತ್ತು. ನಮ್ಮ ಕಾಲೇಜಿನ ಪರವಾಗಿ ಚರ್ಚೆಯಲ್ಲಿ ಭಾಗವಹಿಸಲು ನಾನು ಹೋಗಿದ್ದೆ. ನಾನು ಅವಿಭಕ್ತ ಕುಟುಂಬದ ಪರವಾಗಿ ಮಾತಾಡುವನಿದ್ದೆ. ಅಸಲಿ ವಿಷಯವೆಂದರೆ ನನಗೆ ತಂದೆ, ತಾಯಿ ಸಂಬಂಧ ಬಿಟ್ಟರೆ ಬೇರೆ ಯಾರು ಇರಲಿಲ್ಲ. ಆದರೂ ಕೂಡ ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದರು. ಅದೇ ಸಮಯಕ್ಕೆ ಸರ್ಕಾರಿ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದ್ದೆ.

ಮೊದಲು ವಿಭಕ್ತ ಕುಟುಂಬದ ಪರವಾಗಿ ಬೇರೆ ಕಾಲೇಜಿನವರೊಬ್ಬರು ಮಾತಾಡಿದರು. "ಈಗಿನ ನಮ್ಮ ಬಿಡುವಿಲ್ಲದ ಜೀವನದಲ್ಲಿ ನಾವು ನಮ್ಮನ್ನು, ನಮ್ಮ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ನಮ್ಮ ತಂದೆ ತಾಯಿ ನೋಡಿಕೊಳ್ಳುವುದು ಕಷ್ಟ. ಇದರಿಂದಾಗಿ ಅವರಲ್ಲಿ ತಮ್ಮ ಮಕ್ಕಳು ತಮಗೆ ಗಮನ ಕೊಡುತ್ತಿಲ್ಲ ಎಂಬ ಭಾವನೆ ಬೆಳೆಯುತ್ತದೆ. ಇದರಲ್ಲಿ ನಾವು ಸರಿ ಅವರು ತಪ್ಪು ಎಂದು ನಾನು ಹೇಳುತ್ತಿಲ್ಲ. ನಮ್ಮ ತಂದೆ ತಾಯಿಯರ ತಲೆಮಾರಿನವರ ಮನಸ್ಥಿತಿಗೂ, ಅವರ ಜೀವನ ತುಂಬಾ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ನಮ್ಮ ತಂದೆ ತಾಯಿಯರು ತಮಗೆ ಗಮನವನ್ನು ಕೊಡಬೇಕು ಎಂದು ಅಪೇಕ್ಷಿಸುತ್ತಾರೆ.

ಆದರೆ, ನಮ್ಮ ಜೀವನ ಶೈಲಿಗೆ ಅವರನ್ನು ಗಮನಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿಲ್ಲ ಆದರೆ, ಅವರು ಅಪೇಕ್ಷಿಸಿದಷ್ಟು ಸಾಧ್ಯವಾಗುವಿದಿಲ್ಲ. ಉದಾಹರಣೆಗೆ ಹೇಳುವುದಾದರೆ ಅವರ ಕಾಲದಲ್ಲಿ ಕೆಲಸದ ಅವಧಿ ಎಂಬುದನ್ನು ತೆಗೆದುಕೊಂಡರೆ. ನಮ್ಮ ತಂದೆ ತಾಯಂದಿರು ಬೆಳಿಗ್ಗೆ ಹೋಗಿ ಸಂಜೆ ಐದು ಅಥವಾ ಆರರೊಳಗೆ ಮನೆಗೆ ಬರುತ್ತಿದ್ದರು. ಅವರುಗಳ ಜೀವನ ತುಂಬಾ ಸರಳವಾಗಿತ್ತು, ದುಡ್ಡಿನ ಅವಶ್ಯಕತೆ ಅಷ್ಟಿರಲಿಲ್ಲ.

ಆದರೆ, ನಮ್ಮ ಪರಿಸ್ಥಿತಿ ಹಾಗಿಲ್ಲ, ನಮ್ಮ ಬದುಕಿಗೆ ಹಣದ ಅವಶ್ಯಕತೆ ತುಂಬಾ ಇದೆ ಅನ್ನುವುದು ಕಠಿಣವಾದರೂ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಸತ್ಯ. ಅದರ ಸಲುವಾಗೆ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಾರೆ. ಖಾಸಗಿ ಕಂಪನಿ, ಎಂ.ಎನ್.ಸಿಗಳಲ್ಲಿ ಉದ್ಯೋಗದಿಂದಾಗಿ ನಮಗೆ ಹೆಚ್ಚಿನ ಸಮಯಸಿಗುವುದಿಲ್ಲ. ಮನೆಗೆ ಬರುವಷ್ಟರಲ್ಲೇ ತಡವಾಗಿರುತ್ತದೆ. ದೈಹಿಕವಾಗಿ, ಮಾನಸಿಕವಾಗಿ ತುಂಬ ದಣಿವಾಗಿರುತ್ತದೆ. ಇದರ ಜೊತೆಗೆ ಕೆಲವು ಸಲ ಮನೆಯಲ್ಲಿದ್ದಾಗಲೂ ಕಛೇರಿಯ ಕೆಲಸದ ಒತ್ತಡವಿರುತ್ತದೆ. ಇದರ ಪರಿಣಾಮವಾಗಿ ಮಕ್ಕಳೊಂದಿಗೆ, ನಮ್ಮ ತಂದೆ ತಾಯಿಗಳೊಂದಿಗೆ ಸರಿಯಾಗಿ ಕಾಲ ಕಳೆಯಲಾಗುವುದಿಲ್ಲ. ಮಕ್ಕಳಂತೂ ಚಿಕ್ಕ ವಯಸ್ಸಿನಲ್ಲಿ ನಮ್ಮನ್ನು ವಾರಗಟ್ಟಲೆ ನೋಡಿರುವುದಿಲ್ಲ. ನಾವು ಮನೆ ತಲುಪುವ ವೇಳೆಗೆ ಅವರು ಮಲಗಿರುತ್ತಾರೆ. ಇನ್ನು ಬೆಳಿಗ್ಗೆ ಹೊತ್ತು ಅವುಗಳು ಏಳುವ ಮುನ್ನವೇ ನಾವು ಮನೆ ಬಿಟ್ಟು ಹೊರಟಿರುತ್ತೇವೆ. ಹೆಂಡತಿಯೊಂದಿಗೆ ಮಾನಸಿಕವಾಗಿಯಾಗಲಿ, ಲೈಂಗಿಕವಾಗಿಯಾಲಿ ಕಾಲ ಕಳೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಅಣ್ಣ, ತಮ್ಮ, ಅತ್ತಿಗೆ, ನಾದಿನಿ ಅವರ ಮಕ್ಕಳು ಎಲ್ಲರೂ ಒಟ್ಟಿಗೆ ಇದ್ದರೆ ಸುಮ್ಮನೆ ಮನಸ್ಥಾಪಕ್ಕೆ ಕಾರಣವಾಗುತ್ತದೆ. ಯಾರಿಗೂ ಒಂದು ರೀತಿ ನೆಮ್ಮದಿ ಇರುವುದಿಲ್ಲ. ದೂರ ಉಳಿದರು ಸಂಬಂಧ ಗಟ್ಟಿಯಾಗಿ ಉಳಿಯಬೇಕು ಎಂಬುದು ಮುಖ್ಯವಾದ ಸಂಗತಿ. ಈ ಎಲ್ಲಾ ಕಾರಣದಿಂದಾಗಿ ಅವಿಭಕ್ತ ಕುಟುಂಬಕ್ಕಿಂತ, ವಿಭಕ್ತ ಕುಟುಂಬವೇ ವಾಸಿ, ನಮಗೂ ಖಾಸಗಿತನ ಉಳಿದುಕೊಳ್ಳುತ್ತದೆ. ಸಂಬಂಧವೂ ಉಳಿದುಕೊಳ್ಳುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ" ಎಂದು ಹೇಳುತ್ತಾರೆ.

ನಂತರದ ಸರದಿ ರಾಯರದು "ನನ್ನ ಸ್ನೇಹಿತರು ವಿಭಕ್ತ ಕುಟುಂಬದ ಬಗ್ಗೆ ತುಂಬಾ ಚಿನ್ನಾಗಿ ಮತಾಡಿದರು" ಎಂದು ಹೇಳಿ ಅವರನ್ನು ಅಭಿನಂದನ ಪೂರಕವಾಗಿ ನೋಡುತ್ತಾರೆ. "ಹಾಗೆಂದು ಅವರ ವಾದವನ್ನು ಸಂಪೂರ್ಣವಾಗಿ ಒಪ್ಪುವುದು ಸಾಧ್ಯವಿಲ್ಲ. ಅವರು ತಮ್ಮ ವಾದವನ್ನು ತಮ್ಮ ತಲೆಮಾರಿನವರ ದೃಷ್ಠಿಯಿಂದ ನೋಡುತ್ತಿದ್ದಾರೆ. ಆದರೆ, ನಾವು ನಮ್ಮ ವಿಚಾರ ಮುಂದಿಡಬೇಕಾದರೆ ಯಾವುದೇ ಒಂದು ತಲೆಮಾರು, ಜನಾಂಗ, ವ್ಯಕ್ತಿಯಯನ್ನು ದೃಷ್ಠಿಯಲ್ಲಿಟ್ಟುಕೊಳ್ಳಬಾರದು. ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದು ನನ್ನ ಅನಿಸಿಕೆ. ಎಲ್ಲವನ್ನು ಗಣನೆಗೆ ತೆಗೆದುಕೊಂಡು ನನ್ನ ವಾದವನ್ನು ಮುಂದಿಡುತ್ತೇನೆ. 

ಅವಿಭಕ್ತ ಕುಟುಂಬವೇ ಒಳ್ಳೆಯದು ಎಂಬುದು ನನ್ನ ಅನಿಸಿಕೆ. ಒಂದು ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜಿ, ತಾತ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಇನ್ನೂ ಅನೇಕ ರೀತಿ ಸಂಬಂಧಗಳನ್ನು ಹೆಸರಿಸಬಹುದು. ಇಷ್ಟು ಜನ ಒಟ್ಟಿಗೆ ಇದ್ದರೆ ಕುಟುಂಬದ ಪ್ರತಿ ವ್ಯಕ್ತಿಗೂ ಒಂದು ರಕ್ಷಣಾತ್ಮಕ ಭಾವವಿರುತ್ತದೆ. ಗಾದೆಯೇ ಹೇಳುವಂತೆ 'ಒಗ್ಗಟಿನಲ್ಲಿ ಬಲವಿದೆ' ಅವಿಭಕ್ತ ಕುಟುಂಬವೆಂದರೆ ಅದು ಒಗ್ಗಟ್ಟಿನ ಸಂಕೇತ. ಹಳ್ಳಿಯಾಗಲಿ, ಪಟ್ಟಣವೇ ಆಗಲಿ ಒಂದು ಕುಟುಂಬದಲ್ಲಿ ಸಂಬಂಧಗಳು ಗಟ್ಟಿ ಇದ್ದಷ್ಟು ಅದನ್ನು ಒಡೆಯುವುದು ಅಷ್ಟು ಸುಲಭವಲ್ಲ. ಅಂತಹ ಮನೆಯಲ್ಲಿ ಒಂದು ಮಗು ಜನನವಾಯಿತು ಎಂದರೇ ಆ ಮಗುವಿನ ಲಾಲನೆ ಪಾಲನೆಯ ಬಗ್ಗೆ ವಿಭಕ್ತ ಕುಟುಂಬಗಳಲ್ಲಿ ನಾವು ಯೋಚಿಸುವ, ತಲೆಕೆಡಿಸಿಕೊಳ್ಳುವ ಪ್ರಮೇಯವಿರುವುದಿಲ್ಲ. ಮಗು ಎಲ್ಲರೊಂದಿಗೆ ಬೆಳೆಯುತ್ತದೆ. ಎಲ್ಲರ ಪ್ರೀತಿ, ಮಮತೆಯೊಂದಿಗೆ ಬೆಳೆಯುತ್ತದೆ. ಮನೆಯವರ ಎಲ್ಲರಿಂದಲೂ ಜೀವನದ ಮೌಲ್ಯಗಳನ್ನು ಕಲಿಯುತ್ತದೆ. ಆಗಲೇ ನಮ್ಮ ಸ್ನೇಹಿತರು ಹೇಳಿದಂತೆ ಬದಲಾಗಿರುವ ನಮ್ಮ ಜೀವನ ಶೈಲಿಯಲ್ಲಿ ನಮ್ಮ ಹೆಂಡತಿ ಮಕ್ಕಳಿಗೆ ಸಮಯ ನೀಡಲಾಗುತ್ತಿಲ್ಲ ಎಂದರು. ಹೌದು, ಅವರ ಹೇಳಿವುದು ಅಕ್ಷರಶಃ ನಿಜ. ಅದೇ ವಿಷಯವನ್ನು ಮಾತಾಡುವುದಾದರೆ ಅವಿಭಕ್ತ ಕುಟುಂಬದಲ್ಲಿ ತೊಂದರೆ ಎಂಬುದು ಇರುವುದಿಲ್ಲ. ಮಗುವಿನ ತಂದೆ ತಾಯಿ ಕೆಲಸಕ್ಕೆ ಹೋಗಬಹುದು ಆದರೆ, ಮಕ್ಕಳನ್ನು ನೋಡಿಕೊಳ್ಳಲು ಅಜ್ಜಿ, ತಾತ ಅಥವಾ ಯಾರಾದರು ಇದ್ದೇ ಇರುತ್ತಾರೆ. ಈಗಿನ ಸಮಾಜದಲ್ಲಿ ವಯಸ್ಕರಲ್ಲಿ, ಮಕ್ಕಳಲ್ಲಿ ಕಾಡುತ್ತಿರುವ ಅನಾಥಭಾವ, ಹೊಂದಾಣಿಕೆಯ ಕೊರತೆ, ಸೆಕ್ಸ್, ದೋಖ ಮತಾಂತರ ಇಂತಹ ಅನೇಕ ಸಮಸ್ಯೆಗಳಿಗೆ ಕುಟುಂಬದ ವಿಭಜನೆಯೇ ಕಾರಣವೆಂದು ನಾನು ಹೇಳುತ್ತೇನೆ. 

ಖಾಸಗಿತನದ ಬಗ್ಗೆ ಹೇಳುವುದಾದರೆ ಅದು ಬೇಕಾಗಿರುವುದು ನಮಗೆ ಆದರೆ, ಒಂದು ವಯಸ್ಸಿನ ತನಕ ಮಕ್ಕಳನ್ನು ಒಂಟಿಯಾಗಿ ಬಿಡುವುದು ಅಷ್ಟು ಒಳ್ಳೆಯದಲ್ಲ. ಅವರುಗಳನ್ನು ಹಿರಿಯರು ಗಮನಿಸುತ್ತಿರಬೇಕು ಜೀವನದ ಸರಿ ತಪ್ಪುಗಳನ್ನು ಹೇಳಿ ಕೊಡಬೇಕು. ತಪ್ಪುದಲ್ಲಿ ದಂಡಿಸಬೇಕು ಆಗ ಮಾತ್ರ ಆ ಮಗು ದೇಶಕ್ಕೋಬ್ಬ ಒಳ್ಳೆ ಪ್ರಜೆಯಾಗಲು ಸಾಧ್ಯ. ಈಗಿನ ಸಮಾಜದ ಪರಿಸ್ಥಿತಿಯನ್ನು ಗಮನಿಸಿದರೆ ಅವಿಭಕ್ತ ಕುಟುಂಬಗಳನ್ನು ನಾವು ಪ್ರೋತ್ಸಾಹಿಸಬೇಕು.

ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಗಮನಿಸಿಕೊಳ್ಳಲು ನಮಗೆ ಸಮಯವಿರುವುದಿಲ್ಲ. ಇದರಿಂದಾಗಿ ಮಕ್ಕಳು ಅಡ್ಡದಾರಿ ಹಿಡಿಯುವ ಸಾಧ್ಯತೆಗಳು ಹೆಚ್ಚಾಗುತ್ತದೆ. ನಾವೀಗ ಪ್ರಪಂಚದಲ್ಲಿ 'ಅಂತರಾಷ್ಟ್ರೀಯ ಭಾವೈಕ್ಯತೆ, ಭ್ರಾತೃತ್ವ' ಎಂದೆಲ್ಲಾ ಮಾತಾಡುತ್ತೇವೆ. ನಮ್ಮವರೇ ಆದ ನಮ್ಮ ತಂದೆ, ತಾಯಿ ನಮ್ಮ ಮಕ್ಕಳು, ಅಕ್ಕ, ತಮ್ಮ, ಅಣ್ಣ, ತಂಗಿ, ಅತ್ತಿಗೆ, ನಾದಿನಿ, ಭಾವ ಇವರೊಂದಿಗೆ ನಮ್ಮ ಹೊಂದಾಣಿಕೆ ಸಾಧ್ಯವಿಲ್ಲವಂದರೆ ಇನ್ನು ನಮ್ಮ ನೆರೆಯವರ ಜೊತೆ, ನಮ್ಮ ಸ್ನೇಹಿತರ ಜೊತೆ, ನೆರೆ ರಾಜ್ಯದವರ ಜೊತೆ, ನೆರೆ ದೇಶದವರ ಜೊತೆ ಭ್ರಾತೃತ್ವ ಹೇಗೆ ಸಾಧ್ಯ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ವಿಭಕ್ತ ಕುಟುಂಬದ ಮುಂದುವರೆದ ಭಾಗವೇ ಇತ್ತೀಚೆಗೆ ನಾವು ಕಾಣುತ್ತಿರುವ ಸಂಸ್ಕೃತಿ 'ಲಿವೆಂಗ್ ಟುಗೆದರ್'. ಭಾರತದ ಮೂಲ ಮಂತ್ರವಾದ ಹಿಂದುತ್ವವನ್ನೇ ಹಾಳು ಮಾಡಿದಂತಾಗುತ್ತದೆ. ಹಿಂದುತ್ವವೆಂಬುದು ನಾಶವಾದರೆ ಭಾರತವೇ ನಾಶವಾದಂತೆ. ಇವೆಲ್ಲದಕ್ಕೂ ಮೂಲಕಾರಣವೆಂದು ಹುಡುಕಿಕೊಂಡು ಹೋದರೆ ನಮಗೆ ಕಾಣಿಸುವುದು ಈ ವಿಭಕ್ತ ಕುಟುಂಬ, ಹೊಂದಾಣಿಕೆಯ ಕೊರತೆ ಎಂಬುದು. ಆದ್ದರಿಂದ ನಮ್ಮ ದೇಶದ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ನಮ್ಮ ನಿಮ್ಮೆಲ್ಲರ ಒಳಿತಿಗೆ ನಾವುಗಳು ಒಂದಾಗಬೇಕು. ಒಂದಾಗಿದ್ದರೇನೆ ಚೆಂದ. ಎಲ್ಲರ ಬಾಳು ಬೆಳಗಿದಂತಾಗುತ್ತದೆ. ಭವ್ಯ ಭಾರತ ನಿರ್ಮಾಣವಾಗುತ್ತದೆ. ಆದ್ದರಿಂದ ವಿಭಕ್ತ ಕುಟುಂಬಕ್ಕಿಂತ ಅವಿಭಕ್ತ ಕುಟುಂಬವೇ ಒಳಿತು ಎಂಬುದು ನನ್ನ ಅಭಿಪ್ರಾಯ" ಎಂದು ಅಚ್ಯುತರಾಯರು ತಮ್ಮ ವಾದವನ್ನು ಮಂಡಿಸುತ್ತಾರೆ.

ಎರಡೂ ಕಡೆಯ ವಾದವನ್ನು ಆಲಿಸಿದ ಜನರು ಇಬ್ಬರನ್ನು ಮನಸಾರ ಅಭಿನಂದಿಸಿದರು. ರಾಯರು ಮಾಡಿದ ವಾದವೇ ಜನರಿಗೆ ಹಿಡಿಸಿತು. ಅವರ ವಾದದಲ್ಲಿ ಸಮಾಜದ ಕಾಳಜಿ ವ್ಯಕ್ತವಾಗಿತ್ತು. ಇದಿರು ವಿಷಯದ ಪರವಾಗಿದ್ದ ಶ್ರೀಕಂಠರವರ ವಾದದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಿಗಿತನ ಎದ್ದು ತೋರುತ್ತಿತ್ತು. 

ಸಮಾರಂಭದ ನಂತರ ತೃಪ್ತ ಮನಸ್ಸಿನಿಂದ ರಾಯರು ತಮ್ಮ ಮನೆಗೆ ತೆರಳುತ್ತಾರೆ. ವರ್ಷದ ಕಳೆಗೆ ರಾಯರು ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡಿದ್ದರು. ವಾಸಕ್ಕೆ ಮೈಸೂರಿನ ಸರಸ್ವತಿಪುರದಲ್ಲಿ ಸ್ವಂತ ಮನೆಯಿತ್ತು. ಸರ್ಕಾರಿ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು. ತಂದೆ ತಾಯಿಯರಿದಿದ್ದರೆ ಯೋಗ್ಯ ಕನ್ಯೆಯನ್ನು ಹುಡುಕಿ ಮದುವೆ ಮಾಡುತ್ತಿದ್ದರು. ಅವರನ್ನು ಕಳೆದುಕೊಂಡ ರಾಯರಿಗೆ ಅವರ ಅಗಲಿಕೆ ಕೆಲ ತಿಂಗಳು ಬಾಧಿಸಿತು. ನಂತರ ದಿನಗಳಲ್ಲಿ ಬೇಸರವಿದ್ದರೂ ಚಿಂತಿಸದೆ ತಾನಾಯಿತು ತನ್ನ ಕೆಲಸವಾಯಿತು ತಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಹೆಚ್ಚಿಗೆ ಕಾಲ ಕಳೆಯುತ್ತಿದ್ದರು. ತಾನು ತನ್ನ ಜೀವನದಲ್ಲಿ ಯಾವ ಗುರಿಯನ್ನು ಇಟ್ಟುಕೊಂಡಿಲ್ಲ, ಸಮಾಜಕ್ಕೆ ತಮ್ಮ ಕೈಲಾದ ಸೇವೆಯನ್ನು ಮಾಡಬೇಕು ಎಂಬುದು ಅವರ ಮನಸ್ಸನ್ನಾವರಿಸಿತು. ಅವರ ಜೀವನ ಶೈಲಿಯೂ ಅದನ್ನೇ ಪ್ರತಿಬಿಂಬಿಸುತ್ತಿತ್ತು. ಚಿಕ್ಕ ವಯಸ್ಸಿನಿಂದಲೂ ಅಂತರ್ಮುಖಿ ವ್ಯಕ್ತಿತ್ವದ ರಾಯರಿಗೆ ಹೇಳಿಕೊಳ್ಳುವಂತಹ ಸ್ನೇಹಿತರಾರು ಇರಲಿಲ್ಲ. 

ಸಭಾಂಗಣದಲ್ಲಿ ತಾನು ಮಾತಾಡಿ ಬಂದ ಮೇಲೆ ತನ್ನ ಮನಸ್ಸಿಗೆ ಒಂದು ತರಹ ತೃಪ್ತಿಯಿತ್ತು. ತನಗೂ ಅದೇ ತರಹ ಮನೆತನವಿದ್ದಿದ್ದರೆ ಎಷ್ಟು ಚಿನ್ನಾಗಿರುತ್ತಿತ್ತು ಎನಿಸಿತು. ಆದರೆ, ವಾಸ್ತವಾಂಶವೆಂದರೆ ತಾನೊಬ್ಬ ಅನಾಥ. ತಂದೆ, ತಾಯಿ ತೀರಿಕೊಂಡಿದ್ದರು, ಸಂಬಂಧಿಕರಾಗಲಿ, ಒಡಹುಟ್ಟಿದವರಾಗಲಿ ಯಾರೂ ಇರಲಿಲ್ಲ. ಹಾಗಾದರೆ ಅಲ್ಲಿ ತಾನು ಮಾತಾಡಿದ್ದು ಹೇಗೆ? ವಾಸ್ತವವಾಗಿ ತನಗೆ ಅವಿಭಕ್ತ ಕುಟುಂಬದ ಅನುಭವವಾಗಿಲ್ಲ, ಚಿಕ್ಕಂದಿನಿಂದ ತಾನು ಬೆಳೆದದ್ದು ತಂದೆ ತಾಯಿ ಜೊತೆ ಮಾತ್ರ. ವಾದದಲ್ಲಿ ತಾನು ಹೇಳಿದ ಅಕ್ಕ, ತಂಗಿ, ಅಣ್ಣ, ತಮ್ಮ, ಅತ್ತಿಗೆ, ಭಾವ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ ಈ ಯಾವ ಸಂಬಂಧಗಳು ತನಗೆ ಪರಿಚಯವಿಲ್ಲ. ಹಾಗಿದ್ದಲ್ಲಿ ತಾನು ಹೇಗೆ ಆ ವಿಚಾರವಾಗಿ ಮಾತಾಡಿದೆ? ಎಂಬ ಪ್ರಶ್ನೆ ಮುಂದೆ ನಿಲ್ಲುತ್ತದೆ. ಅನುಭವವಿಲ್ಲದ ಮಾತಿಗೆ ಬೆಲೆಯಿಲ್ಲ ಎಂದು ಎಲ್ಲೋ ಓದಿದ ನೆನಪಾಯಿತು. ಹಾಗಾದರೆ, ತಾನು ಇಂದು ಮಾತಾಡಿದ ಮಾತುಗಳಿಗೆ ಕಿಂಚಿತ್ ಬೆಲೆ ಇಲ್ಲ!

ಜನರ ಚಪ್ಪಾಳೆಯಿಂದ ಉಬ್ಬಿಹೋಗಿದ್ದ ತಾನು ಈ ಯೋಚನೆಯಿಂದ ತನ್ನ ಮೇಲೆ ಖೇಧ ಉಂಟಾಗುತ್ತದೆ. ಆದರೂ ತಾನು ಈ ವಿಚಾರವಾಗಿ ಮಾತಾಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಮತ್ತೆ ತನ್ನ ಮುಂದೆ. ಕೆಲ ಹೊತ್ತು ಕಣ್ಮುಚ್ಚಿ ಯೋಚಿಸುತ್ತಾನೆ. ಕುಳಿತಲ್ಲಿಯೇ ಸಣ್ಣದಾಗಿ ಜೋಂಪು ಹತ್ತುತ್ತದೆ. ವರ್ಷ ಋತುವಾದ್ದರಿಂದ ಹೊರಗೆ ಗುಡುಗು ಸಹಿತ ಮಳೆ ಶುರುವಾಯಿತು. ಗುಡುಗಿನ ಸದ್ದಿಗೆ ಅಚ್ಯುತರಾಯರಿಗೆ ಎಚ್ಚರವಾಗುತ್ತದೆ. ಗಡಿಯಾರ ಒಂಬ್ಬತ್ತು ತೋರಿಸುತ್ತಿತ್ತು. ಎದ್ದು ಮನೆಯ ಕಿಟಕಿ, ಬಾಗಿಲುಗಳನ್ನು ಹಾಕಿ ಊಟ ಮಾಡಿ, ಪಾತ್ರೆಗಳನ್ನು ತೊಳೆದಿಟ್ಟು ತನ್ನ ಕೋಣೆಗೆ ಹೋಗಿ ಮಂಚದ ಮೇಲೆ ಮಲಗುತ್ತಾರೆ. ತನಗೆ ನಿದ್ರೆ ಬಂದಿದ್ದು ಅವರಿಗೆ ಸಹಿಸಲಾಗಲಿಲ್ಲ 'ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ' ಎಂಬ ವಾಕ್ಯ ನೆನೆಪಿಗೆ ಬರುತ್ತದೆ. ಮನಸ್ಸಲ್ಲಿ ಪ್ರಶ್ನೆಗಳಿದ್ದರೂ ತನ್ನ ನಿದ್ರೆ ಬಂತು ಅಂದರೆ ಆ ಪ್ರಶ್ನೆಗಳು ನನ್ನ ಕಾಡುತ್ತಿಲ್ಲ. ಮತ್ತದೇ ಪ್ರಶ್ನೆ - ತನಗೆ ಅನುಭವವಿಲ್ಲದಿದ್ದರೂ ಹೇಗೆ ಮಾತಾಡಲು ಸಾಧ್ಯವಾಯಿತು? ಮನಸ್ಸಲ್ಲಿ ಏಳುತ್ತದೆ. ಮಂಚದ ಮೇಲೆ ಮಲಗಿದ್ದ ರಾಯರು ಹಾಗೆ ಹೊರಳುತ್ತಾರೆ. ಮನಸ್ಸಿಗೆ ಬಂದ ಪ್ರಶ್ನೆಯಿಂದಲೋ ಅಥವಾ ಕೆಲ ಹೊತ್ತು ಜೋಂಪು ಹತ್ತಿದ್ದ ಕಾರಣಕಕ್ಕೋ ಈಗ ನಿದ್ರೆ ಬರುವುದಿಲ್ಲ.

ತಾನು ಸಮಾರಂಭದಲ್ಲಿ ಮಾತಾಡಿದ್ದನ್ನು ಮತ್ತೆ ಮೆಲಕು ಹಾಕುತ್ತಾರೆ. ಆ ಮಾತುಗಳನ್ನು ತಾನು ಸ್ವಾಭಾವಿಕವಾಗಿ ಆಡಿದನೇ? ಇಲ್ಲ. ತಾನು ಯಾವುದಾದರೂ ಹೇಳಿಕೆಯಿಂದ ಅಥವಾ ಯಾವುದೋ ಪುಸ್ತಕದಲ್ಲಿ ಬರೆದಿರುವ ವಿಚಾರದಿಂದ ಪ್ರೇರಿತನಾಗಿ ಹೇಳಿದನೆ? ಎಂಬ ಅನುಮಾನ ಹುಟ್ಟುತ್ತದೆ. ಮನಸ್ಸಿಗೆ ಬಂದ ಈ ಅನುಮಾನಗಳಿಂದ ತನ್ನ ಯೋಚನ ಲಹರಿ ಮತ್ತಷ್ಟು ಗಾಢವಾಗುತ್ತದೆ.

ಸ್ವಾಭಾವಿಕವಾಗಿ ಮಾತಾಡುವುದು ಎಂದರೆ ಏನು? ಯಾವುದೇ ವಿಚಾರವಾಗಲಿ ತನಗೆ ಅನಿಸಿದ್ದನ್ನು ಅಂದರೆ ತನಗೆ ಅನುಭವಕ್ಕೆ ಬಂದಿರುವುದನ್ನು ತನ್ನ ದೃಷ್ಠಿಯಲ್ಲಿ ವ್ಯಕ್ತಪಡಿಸುವುದು ಎಂದರ್ಥ. ಹಾಗಾದರೆ ತಾನು ಮಾತಾಡಿದುದು ಸ್ವಾಭಾವಿಕವಲ್ಲ. ಹಾಗಾದರೆ ತಾನು ಓದಿರುವ ಪುಸ್ತಕಗಳಿಂದ ತಾನು ಪ್ರೇರಿತನಾಗಿ ತಾನು ಮಾತಾಡಿದ್ದೇನೆ. ಈ ಮಾತುಗಳೆಲ್ಲ ತನ್ನ ಮಾತುಗಳಲ್ಲ. ಇನ್ನು ಹೇಳುವುದಾದರೆ ಪ್ರೇರಿತ ಎನ್ನುವುದಕ್ಕಿಂತ ಬೇರೆಯವರ ಮಾತುಗಳನ್ನು ಕದ್ದು ಮಾತಾಡಿದ್ದೇನೆ ಎಂದು ತನ್ನ ಬಗ್ಗೆ ತನಗೆ ಬೇಸರವಾಗುತ್ತದೆ.

ಈ ಉತ್ತರ ತನ್ನ ಮನಸ್ಸಿಗೆ ನೋವು ಉಂಟು ಮಾಡುತ್ತದೆ. ತನ್ನ ಮಾತುಗಳೇ ತನ್ನನ್ನು ಹಿಂಸಿಸುತ್ತದೆ. ಸಮಾರಂಭದಲ್ಲಿ ಮಾತಾಡಿದಾಗ ಜನರು ಚಪ್ಪಾಳೆ ತಟ್ಟಿ ಮೆಚ್ಚಿಗೆ ವ್ಯಕ್ತ ಪಡಿಸಿದರು. ಆದರೆ, ಈಗ ಅದೇ ಮಾತುಗಳು ತನ್ನದಲ್ಲವೆಂದು ಅನಿಸುತ್ತದೆ. ಅಂದರೆ, ತಾನು ಅನುಭವಿಸದ ಹೊರತು ಯಾವುದೇ ಮಾತುಗಳನ್ನಾಡುವ ಯೋಗ್ಯತೆ ತನಗಿಲ್ಲ ಎಂಬ ಭಾವನೆ ತನ್ನನ್ನು ಆವರಿಸುತ್ತದೆ. ಹಾಗೆ ಹೊರಳುತ್ತಾ ನಿದ್ರೆ ಮಾಡಲು ಪ್ರಯತ್ನಿಸುತ್ತಾರೆ. ಮತ್ತೆ ಜೋಂಪು ಹತ್ತಿದಾಗ ರಾತ್ರಿ ೧೧:೩೦ ಆಗಿರುತ್ತದೆ.

Comments